ADVERTISEMENT

ಉತ್ತಮ ಅಂಶ ಮಕ್ಕಳಿಗೆ ಧಾರೆ ಎರೆಯಿರಿ: ಸಿಇಒ ಮಹಾಂತೇಶ ಬೀಳಗಿ

‘ಫಿಲ್ಮೋತ್ಸವ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2019, 12:01 IST
Last Updated 16 ಮಾರ್ಚ್ 2019, 12:01 IST
ಬೀದರ್‌ನ ಜಿಲ್ಲಾ ರಂಗ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಫಿಲ್ಮೋತ್ಸವವನ್ನು ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಹಾಗೂ ಗಣ್ಯರು ಉದ್ಘಾಟಿಸಿದರು. ನಿರಂಜನ್‌ ಶೀಲವಂತ, ಸ್ವರ್ಣಲತಾ ಅಯ್ಯರ್ ಹಾಗೂ ಅಬ್ದುಲ್‌ ಖದೀರ್‌ ಇದ್ದಾರೆ
ಬೀದರ್‌ನ ಜಿಲ್ಲಾ ರಂಗ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಫಿಲ್ಮೋತ್ಸವವನ್ನು ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಹಾಗೂ ಗಣ್ಯರು ಉದ್ಘಾಟಿಸಿದರು. ನಿರಂಜನ್‌ ಶೀಲವಂತ, ಸ್ವರ್ಣಲತಾ ಅಯ್ಯರ್ ಹಾಗೂ ಅಬ್ದುಲ್‌ ಖದೀರ್‌ ಇದ್ದಾರೆ   

ಬೀದರ್‌: ‘ಶಿಕ್ಷಕರು ಉತ್ತಮ ಗುಣ ಹಾಗೂ ಅಂಶಗಳನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯಬೇಕು. ಅಷ್ಟೇ ಅಲ್ಲ ಸಮರ್ಪಣಾ ಭಾವದಿಂದ ಮಕ್ಕಳಿಗೆ ಬೋಧನೆ ಮಾಡುವ ಪ್ರವೃತ್ತಿಯನ್ನೂ ಬೆಳೆಸಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಸಲಹೆ ನೀಡಿದರು.

ಇಲ್ಲಿಯ ಜಿಲ್ಲಾ ರಂಗ ಮಂದಿರದಲ್ಲಿ ನಿರಂತರ ಪೌಂಢೇಷನ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಶಿಕ್ಷಕರಿಗಾಗಿ ಶನಿವಾರ ಆಯೋಜಿಸಿದ್ದ ‘ಫಿಲ್ಮೋತ್ಸವ-2019’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ನಾನು ಮೂಲತಃ ಶಿಕ್ಷಕ. ಗ್ರಾಮೀಣ ಹಾಗೂ ಬಡ ಕುಟುಂಬದಿಂದ ಬಂದ ಮಕ್ಕಳಿಗೆ ಹೇಗೆ ಪಾಠ ಮಾಡಬೇಕು ಎನ್ನುವುದು ಚೆನ್ನಾಗಿ ತಿಳಿದಿದೆ. ಬಾಲ್ಯದಲ್ಲಿ ಇಂಗ್ಲಿಷ್‌ ಗೊತ್ತಿಲ್ಲದಿದ್ದರೂ ಪ್ರತಿಯೊಂದು ಶಬ್ದದ ಅರ್ಥ ತಿಳಿದುಕೊಂಡು ಶಬ್ದಗಳ ಜೋಡಣೆ ಮಾಡಿ ವಾಕ್ಯ ರಚಿಸುವುದನ್ನು ಕಲಿತುಕೊಂಡೆ. ಇದರ ಜತೆ ಜತೆಯಾಗಿ ಸಂವಹನ ಕೌಶಲ ಬೆಳೆಸಿಕೊಂಡೆ. ಸಂವಹನ ಕಲೆಯನ್ನು ವಿದ್ಯಾರ್ಥಿಗಳಿಗೂ ಧಾರೆ ಎರೆದಿದ್ದೇನೆ’ ಎಂದು ತಿಳಿಸಿದರು.

ADVERTISEMENT

‘ಇಂಗ್ಲಿಷ್‌ ಕಲಿಕೆ ಹಾಗೂ ಸಂವಹನಕ್ಕೆ ನನ್ನದೇ ಆದ ತಂತ್ರ ರೂಪಿಸಿಕೊಂಡು ಯಶ ಸಾಧಿಸಿದೆ. ಅದೇ ತಂತ್ರವನ್ನು ನನ್ನ ವಿದ್ಯಾರ್ಥಿಗಳಿಗೂ ತಿಳಿಸಿದೆ. ಅಂತೆಯೇ ನನ್ನ ವಿದ್ಯಾರ್ಥಿಗಳು ನನಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಈ ವಿಷಯದಲ್ಲಿ ನನಗೆ ಹೆಮ್ಮೆಯೂ ಇದೆ’ ಎಂದು ಹೇಳಿದರು.

ಮನೋರೋಗ ತಜ್ಞೆ ಸ್ವರ್ಣಲತಾ ಅಯ್ಯರ್ ಮಾತನಾಡಿ, ‘ಮಕ್ಕಳಲ್ಲಿ ಭಯ ಮನೆ ಮಾಡಿದರೆ ಅಥವಾ ಅವರು ಮಾನಸಿಕ ಒತ್ತಡಕ್ಕೆ ಒಳಗಾದರೆ ಹಲವು ರೀತಿಯಲ್ಲಿ ವರ್ತಿಸುತ್ತಾರೆ. ಒಂದೊಮ್ಮೆ ಶಾಲೆಗೂ ಹೋಗಲು ನಿರಾಕರಿಸಿ ಹೊಸ ಹೊಸ ನೆಪಗಳನ್ನು ಹೇಳುತ್ತಾರೆ. ಸಮಸ್ಯೆಯ ಮೂಲ ಹುಡುಕಿ ಅದನ್ನು ಪರಿಹರಿಸಲು ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.

ಶಾಹೀನ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್‌ ಖದೀರ್, ‘ಮಡದಿ ಒಳ್ಳೆಯ ಸಲಹೆಗಳನ್ನು ನೀಡಿದರೆ ಅತ್ಯಂತ ಗೌರವದಿಂದ ಸ್ವೀಕರಿಸಬೇಕು. ಒಂದು ಉತ್ತಮ ಸಲಹೆ ಬದುಕಿನ ಚಿತ್ರಣವನ್ನೇ ಬದಲಿಸಬಹುದು’ ಎಂದು ತಿಳಿಸಿದರು.

‘ಮಕ್ಕಳನ್ನು ಸಮರ್ಥವಾಗಿ ಬೆಳೆಸುವುದು ಪಾಲಕರ ಹೊಣೆಯಾಗಿದೆ. ನಿರ್ಲಕ್ಷ್ಯ ಮಾಡಿದರೆ ಕುಟುಂಬಕ್ಕೆ ಅಷ್ಟೇ ಅಲ್ಲ ಸಮಾಜಕ್ಕೂ ಭಾರವಾಗುತ್ತಾರೆ. ಮಕ್ಕಳು ಸರಿ ದಾರಿಯಲ್ಲಿ ಸಾಗುವ ವರೆಗೂ ಅವರ ಮೇಲೆ ನಿಗಾ ಇಡಬೇಕು. ಹೊಣೆಗಾರಿಕೆಯಿಂದ ಕಾರ್ಯ ನಿರ್ವಹಿಸಿದ್ದರಿಂದಾಗಿಯೇ ನಮ್ಮ ಶಿಕ್ಷಣ ಸಂಸ್ಥೆಯ 304 ವಿದ್ಯಾರ್ಥಿಗಳು ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆದಿದ್ದಾರೆ’ ಎಂದರು.

ನಿರಂತರ ಪೌಂಢೇಷನ್ ಸಂಸ್ಥಾಪಕ ನಿರಂಜನ್‌ ಶೀಲವಂತ ಮಾತನಾಡಿ, ‘ಶಿಕ್ಷಕರಲ್ಲಿ ಬದಲಾವಣೆ ತರುವ ದಿಸೆಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ಕಿರು ಕಿರುಚಿತ್ರಗಳ ಪ್ರದರ್ಶನ ಆಯೋಜಿಸಲಾಗುತ್ತಿದೆ. ಜೀವನ ಕೌಶಲ ಪರಿಚಯಿಸುವುದು ಇದರ ಉದ್ದೇಶವಾಗಿದೆ’ ಎಂದು ತಿಳಿಸಿದರು.

‘ಇದು ಚುನಾವಣೆಯ ಸಮಯ. ನಾವು ನಿಗದಿ ಪಡಿಸಿರುವ ಸಂದರ್ಭವೇ ತಪ್ಪಾಗಿರಬಹುದು. ಉತ್ತಮ ರೀತಿಯಲ್ಲಿ ಪ್ರಚಾರ ಮಾಡಿ ಇನ್ನೊಮ್ಮೆ ಬೀದರ್‌ನಲ್ಲಿ ಫಿಲ್ಮೋತ್ಸವ ಆಯೋಜಿಸಲಾಗುವುದು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಕಿರುಚಿತ್ರಗಳ ಪ್ರದರ್ಶನ ನಡೆಯಿತು. ಶಿಕ್ಷಣ ಸಂಸ್ಥೆಯ ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.