ಬೀದರ್: ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ ದೇವ ಅವರ 555ನೇ ಜಯಂತಿಯನ್ನು ನಗರದಲ್ಲಿ ಶನಿವಾರ ಶ್ರದ್ಧಾ, ಭಕ್ತಿ ಹಾಗೂ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ನಗರದ ಕೇಂದ್ರ ಬಸ್ ನಿಲ್ದಾಣ ಸಮೀಪದ ಗುರುದ್ವಾರದಿಂದ ಡಾ.ಬಿ.ಆರ್. ಅಂಬೇಡ್ಕರ್– ವೃತ್ತದ ವರೆಗೆ ಭವ್ಯ ಮೆರವಣಿಗೆ ನಡೆಯಿತು. ನ್ಯೂಟೌನ್ ಪೊಲೀಸ್ ಠಾಣೆ ಮಾರ್ಗವಾಗಿ ನಾಂದೇಡ್–ಹೈದರಾಬಾದ್ ಮುಖ್ಯರಸ್ತೆ ಮೂಲಕ, ಮಡಿವಾಳ ವೃತ್ತ, ರೋಟರಿ ವೃತ್ತ, ನೆಹರೂ ಕ್ರೀಡಾಂಗಣ, ಸಾಯಿ ಶಾಲೆ ಮೈದಾನದಿಂದ ಡಾ.ಬಿ.ಆರ್. ಅಂಬೇಡ್ಕರ್ ವೃತ್ ತಲುಪಿತು. ಅಲ್ಲಿಂದ ಪುನಃ ಮೆರವಣಿಗೆಯು ಹರಳಯ್ಯ ವೃತ್ತದ ಮಾರ್ಗವಾಗಿ ಗುರುದ್ವಾರದ ಕಡೆಗೆ ಮುಖ ಮಾಡಿತು.
ಮೆರವಣಿಗೆಯಲ್ಲಿ ನೂರಾರು ಜನ ಸಿಖ್ ಧರ್ಮೀಯರು ಪಾಲ್ಗೊಂಡಿದ್ದರು. ನೀಲಿ, ಹಳದಿ ಬಣ್ಣದ ಧಾರ್ಮಿಕ ಧ್ವಜಗಳೊಂದಿಗೆ ಗುರುಗಳು ಪಾಲ್ಗೊಂಡಿದ್ದರು. ಅಲಂಕರಿಸಿದ ವಾಹನದಲ್ಲಿ ಗುರುಗ್ರಂಥ ಸಾಹಿಬ್ ಇರಿಸಿ, ಪಠಣ ಮಾಡಿದರು. ನೂರಾರು ಜನ ಕತ್ತಿಗಳನ್ನು ಹಿಡಿದುಕೊಂಡು ಹೆಜ್ಜೆ ಹಾಕಿದರು. ಮಾರ್ಗದುದ್ದಕ್ಕೂ ಕತ್ತಿ ವರಸೆ ಸಾಹಸ ಪ್ರದರ್ಶಿಸಿದರು. ‘ಜೋ ಬೋಲೇ ಸೋ ನಿಹಾಲ್’, ‘ವಾಹೆ ಗುರು ಕಾ ಖಾಲ್ಸಾ’, ‘ವಾಹೆ ಗುರು ಕಾ ಫತೇಹ್’, ‘ಸತ್‌ಶ್ರೀ ಅಕಾಲ್’ ಹೀಗೆ ಗುರುನಾನಕ ದೇವ ಹಾಗೂ ಸಿಖ್ ಧರ್ಮದ ಪರ ಜಯಘೋಷಗಳನ್ನು ಹಾಕಿದರು.
ಗುರುದ್ವಾರದ ಪರಿಸರದಿಂದ ಗೇಟ್ ವರೆಗೆ ನೂರಾರು ಜನ ಕತ್ತಿಗಳೊಂದಿಗೆ ಓಡಿದ ದೃಶ್ಯ ರೋಮಾಂಚನಕಾರಿಯಾಗಿತ್ತು. ಈ ಅಪರೂಪದ ಸನ್ನಿವೇಶ ಕಣ್ತುಂಬಿಕೊಳ್ಳಲು ವಿವಿಧ ಕಡೆಗಳಿಂದ ಅಪಾರ ಸಂಖ್ಯೆಯ ಜನ ಬಂದಿದ್ದರು. ಕ್ಯಾಮೆರಾ, ಮೊಬೈಲ್‌ಗಳಲ್ಲಿ ದೃಶ್ಯ ಸೆರೆ ಹಿಡಿದರು. ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ನಾಂದೇಡ್, ಹೈದರಾಬಾದ್, ಲಾತೂರ್, ಉದಗೀರ್, ಕಲಬುರಗಿ, ಸೊಲ್ಲಾಪುರ ಸೇರಿದಂತೆ ವಿವಿಧ ಭಾಗಗಳಿಂದ ಸಿಖ್ ಧರ್ಮೀಯರು ಬಂದಿದ್ದರು. ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರು ಮೆರವಣಿಗೆಯಲ್ಲಿ ಸಂಭ್ರಮದಿಂದ ಹೆಜ್ಜೆ ಹಾಕಿದರು.
ಗುರುನಾನಕರು ದಕ್ಷಿಣ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೀದರ್‌ಗೂ ಬಂದಿದ್ದರು ಎಂಬ ಪ್ರತೀತಿ ಇದೆ. ಅವರು ಬಂದಾಗ ಬೀದರ್‌ನಲ್ಲಿ ಭೀಕರ ಬರವಿತ್ತು. ಅದನ್ನು ಕಂಡ ಗುರುನಾನಕರು ಗುಡ್ಡದ ತಳಭಾಗದ ಕಲ್ಲನ್ನು ತಮ್ಮ ಪಾದದಿಂದ ಸರಿಸಿದಾಗ ನೀರಿನ ಝರಿ ಉಕ್ಕಿ ಹರಿಯಿತು ಎಂಬ ನಂಬಿಕೆ ಇದೆ. ಹೀಗಾಗಿಯೇ ಬೀದರ್ ಗುರುದ್ವಾರಕ್ಕೆ ಸಿಖ್ ಧರ್ಮದಲ್ಲಿ ವಿಶೇಷ ಮಹತ್ವದ ಸ್ಥಾನವಿದೆ.
ವಿಶೇಷ ಪ್ರಾರ್ಥನೆ ‘ಲಂಗರ್’ನಲ್ಲಿ ದಾಸೋಹ ಗುರುನಾನಕರ ಜಯಂತಿ ಮುನ್ನ ದಿನವಾದ ಗುರುವಾರದಿಂದಲೇ ಗುರುದ್ವಾರದ ಪರಿಸರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಗುರುದ್ವಾರ ಸೇರಿದಂತೆ ಸುತ್ತಮುತ್ತಲಿನ ಕಟ್ಟಡಗಳನ್ನು ಹೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ‘ಲಂಗರ್’ನಲ್ಲಿ ವಿಶೇಷ ಸಿಹಿ ತಿನಿಸುಗಳನ್ನು ಭಕ್ತರಿಗೆ ಉಣ ಬಡಿಸಲಾಯಿತು. ವಿವಿಧ ಭಾಗಗಳಿಂದ ಸಿಖ್‌ರು ಬಂದು ವಾಸ್ತವ್ಯ ಮಾಡಿದ್ದರು. ಶುಕ್ರವಾರ ಬೆಳಿಗ್ಗೆ ಗುರುದ್ವಾರದಲ್ಲಿ ವಿಶೇಷ ಪೂಜೆ ಪ್ರಾರ್ಥನೆ ನಡೆಯಿತು. ಗುರುಗ್ರಂಥ ಸಾಹಿಬ್ ಪಠಣ ಮಾಡಿದರು. ಕೀರ್ತನೆ ಪ್ರವಚನ ಕಾರ್ಯಕ್ರಮಗಳು ನಡೆದವು. ಭಕ್ತರು ಸರತಿ ಸಾಲಲ್ಲಿ ಹೋಗಿ ಗುರುಗ್ರಂಥ ಸಾಹೀಬ್ ದರ್ಶನ ಪಡೆದರು. ಸಿಖ್ ಧರ್ಮೀಯರೊಂದಿಗೆ ಅನ್ಯ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿ ಗುರುದ್ವಾರಕ್ಕೆ ತೆರಳಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಗುರುದ್ವಾರ ನಾನಕ್ ಝೀರಾ ಪ್ರಬಂಧಕ ಕಮಿಟಿ ಅಧ್ಯಕ್ಷ ಸರ್ದಾರ್ ಬಲಬೀರ್ ಸಿಂಗ್ ಸದಸ್ಯರಾದ ಮನಪ್ರೀತ್ ಸಿಂಗ್ ಜಸ್ಪ್ರೀತ್ ಸಿಂಗ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.