ADVERTISEMENT

ವಿವಿಧ ಕಾಮಗಾರಿಗಳ ಪರಿಶೀಲನೆ

ರಮಣರೆಡ್ಡಿ ಹಾಗೂ ಜಿಲ್ಲಾಧಿಕಾರಿ ಡಾ.ಎಚ್‌.ಆರ್‌.ಮಹಾದೇವ ಭೇಟಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 12:09 IST
Last Updated 27 ಡಿಸೆಂಬರ್ 2019, 12:09 IST
ಹುಮನಾಬಾದ್‍ನ ಸಿಂದಬಂದಗಿ ಗ್ರಾಮದ ಹನುಮಾನ ಮಂದಿರದಲ್ಲಿ ನಿರ್ಮಿಸುತ್ತಿರುವ ಅಂಗನವಾಡಿ ಕಟ್ಟಡ ಕಾಮಗಾರಿಯನ್ನು ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ಅವರು ವೀಕ್ಷಿಸಿದರು
ಹುಮನಾಬಾದ್‍ನ ಸಿಂದಬಂದಗಿ ಗ್ರಾಮದ ಹನುಮಾನ ಮಂದಿರದಲ್ಲಿ ನಿರ್ಮಿಸುತ್ತಿರುವ ಅಂಗನವಾಡಿ ಕಟ್ಟಡ ಕಾಮಗಾರಿಯನ್ನು ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ಅವರು ವೀಕ್ಷಿಸಿದರು   

ಹುಮನಾಬಾದ್: ಬೀದರ್ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಮಣರೆಡ್ಡಿ ಮತ್ತು ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ಅವರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳನ್ನು ಗುರುವಾರ ಪರಿಶೀಲಿಸಿದರು.

ತಾಲ್ಲೂಕಿನ ಡಾಕುಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂದಬಂದಗಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪವಿಭಾಗದಿಂದ ಸ್ಥಾಪಿಸಿರುವ ಶುದ್ದ ಕುಡಿಯುವ ನೀರಿನ ಘಟಕ ವೀಕ್ಷಿಸಿದರು.

ಸಿಂದಬಂದಗಿ ಗ್ರಾಮದ ಹನುಮಾನ ಮಂದಿರದ ಹತ್ತಿರ ಸುಮಾರು 4ವರ್ಷಗಳಿಂದ ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದ ಅಂಗನವಾಡಿ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಅಂಗನವಾಡಿ ಕಟ್ಟಡ ಕಾಮಗಾರಿ ಕಳಪೆಯಾಗಬಾರದು. ಗುಣಮಟ್ಟದ ಕಾಮಗಾರಿ ಕೈಗೊಳ್ಳವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ತಾಲ್ಲೂಕಿನ ಅತಿವಾಳದಿಂದ ಉಡಬಾಳ, ಹಳ್ಳೆಖೇಡ(ಬಿ) ವರೆಗೆ ₹49ಲಕ್ಷಗಳ ವೆಚ್ಚದಲ್ಲಿ ನಿರ್ಮಾಣಗೊಂಡ ಡಾಂ ಬರಿಕರಣ ರಸ್ತೆಯನ್ನು ವೀಕ್ಷಿಸಿದರು.

ಹಳ್ಳಿಖೇಡ(ಬಿ) ಪಟ್ಟಣದ ಪುರಸಭೆ ಹತ್ತಿರದಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿ ನಿಗಮ ನಿಯಮಿತದಿಂದ ಸ್ಥಾಪಿಸಿದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಟಿ ಪರಿಶೀಲಿಸಿದ ನಂತರ ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಹಣೆಗಾಗಿ ಪುರಸಭೆ ಆಧೀನಕ್ಕೆ ನೀಡಬೇಕು. ಜನರ ಆರೋಗ್ಯದ ದೃಷ್ಠಿಯಿಂದ ಪುರಸಭೆಯವರು ಘಟಕದ ನಿರ್ವಹಣೆಯನ್ನು ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹಳ್ಳಿಖೇಡ(ಬಿ) ಪಟ್ಟಣದಿಂದ ಮರಕಲ್ ಗ್ರಾಮಕ್ಕೆ ಹೋಗುವ ಮುಖ್ಯರಸ್ತೆಯಲ್ಲಿ ಹೈದರಾಬಾದ್ ಕರ್ನಾಟಕ ಪ್ರಾದೇಶಿಕ ಗ್ರಾಮೀಣ ಅಭಿವೃದ್ದಿ ಮಂಡಳಿಯಿಂದ ನಿರ್ಮಾಣಗೊಂಡ ಒಳಚರಂಡಿ ಕಾಮಗಾರಿ ಮತ್ತು ಎಚ್‌ಕೆಆರ್‌ಡಿಬಿ ಅನುದಾನದಲ್ಲಿ ಹಳ್ಳಿಖೇಡ(ಬಿ)ಯಿಂದ ಅಲ್ಲೂರಾ(ದರ್ಗಾ)ವರೆಗೆ ಪೂರ್ಣಗೊಂಡ ರಸ್ತೆ ಮತ್ತು ಸೇತುವೆ ಕಾಮಗಾರಿ ಪರಿಶೀಲಿಸಿದರು.

ದುಬಲಗುಂಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಮತ್ತು ಕುಂದು ಕೊರತೆಗಳನ್ನು ಆಲಿಸಿದರು.

ಸಹಾಯಕ ಆಯುಕ್ತ ಭಂವರಸಿಂಗ್ ಮೀನಾ, ತಹಶೀಲ್ದಾರ್ ನಾಗಯ್ಯ ಹಿರೇಮಠ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈಜಿನಾಥ ಫುಲೆ, ಕೆಆರ್‍ಐಡಿಇಎಲ್ ಇಇ ಕಾರ್ಯನಿರ್ವಾಹಕ ಅಭಿಯಂತರ ಶಂಕರ ಬಿರಾದಾರ್, ಸಹಾಯ ಕಾರ್ಯನಿರ್ವಾಹಕ ಅಭಿಯಂತರರಾದ ರಘುನಾಥ ಘಂಟೆ, ರಾಚಪ್ಪ ಪಾಟೀಲ, ವಾಮನರಾವ್ ಜಾಧವ, ಪಿಡಿಓ ಹಣಮಂತ, ಯೋಜನಾಧಿಕಾರಿ ಶಂಕರ ಕನಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.