ADVERTISEMENT

ಕೆಆರ್‌ಐಡಿಎಲ್‌ ಕಾರ್ಯವೈಖರಿಗೆ ಗೀತಾ ಅಸಮಾಧಾನ

ಜಿ.ಪಂ ಸಭಾಂಗಣದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 15:40 IST
Last Updated 27 ನವೆಂಬರ್ 2019, 15:40 IST
ಬೀದರ್‌ನ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ನಡೆದ ಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ ಮಾತನಾಡಿದರು
ಬೀದರ್‌ನ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ನಡೆದ ಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ ಮಾತನಾಡಿದರು   

ಬೀದರ್: ‘ಅನುದಾನ ಲಭ್ಯವಿದ್ದರೂ ಕೆಆರ್‌ಐಡಿಎಲ್‌ ಎರಡು ವರ್ಷಗಳಿಂದ ಶಾಲಾ ಕಟ್ಟಡಗಳ ದುರಸ್ತಿ ಮಾಡುತ್ತಿಲ್ಲ. ಕೆಲಸ ಮಾಡದ ಏಜೆನ್ಸಿಗಳು ನಮಗೆ ಅಗತ್ಯವಿಲ್ಲ. ಕೆಲಸ ಮಾಡುವ ಏಜೆನ್ಸಿಗಳಿಗೆ ಕಾಮಗಾರಿ ವಹಿಸಿಕೊಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೆಆರ್‌ಐಡಿಎಲ್‌ ನೀಡಿದ ಹಣವನ್ನು ಮರಳಿ ಪಡೆಯಬೇಕು. ಜಿಲ್ಲೆಯ ಕೆಲವು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಕೊಠಡಿಗಳ ನಿರ್ಮಾಣ ಮತ್ತು ದುರಸ್ತಿ ಕಾರ್ಯವನ್ನು ಬೇರೆ ಏಜೆನ್ಸಿಗೆ ವಹಿಸಿ ಕೆಲಸ ಆರಂಭಿಸಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

‘ಅನುದಾನ ಲಭ್ಯವಿದ್ದರೂ ಕೆಆರ್‌ಐಡಿಎಲ್ ಎರಡು ವರ್ಷಗಳಿಂದ ಜಿಲ್ಲೆಯ ಕೆಲ ಸರ್ಕಾರಿ ಪ್ರಾಥಮಿಕ ಶಾಲೆಯ 43 ಮತ್ತು 20 ಪ್ರೌಢಶಾಲೆಗಳ 29 ಕೊಠಡಿಗಳ ನಿರ್ಮಾಣ ಹಾಗೂ ದುರಸ್ತಿ ಕಾರ್ಯವನ್ನು ಕೈಗೊತ್ತಿಕೊಳ್ಳುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗೆ ಹಣಕಾಸಿನ ಕೊರತೆ ಇಲ್ಲ. ಹನಿ ನೀರಾವರಿ ಮಾಡಬಯಸುವವರಿಗೆ ಇಲಾಖೆಯಲ್ಲಿ ಸಾಕಷ್ಟು ಅನುದಾನ ಲಭ್ಯವಿದೆ. ಆನ್‍ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಬಾವಗಿ ತಿಳಿಸಿದರು.

‘ತೋಟಗಾರಿಕಾ ಬೆಳೆ ಬೆಳೆಯುವ ರೈತರಿಗೆ ಯಾಂತ್ರೀಕರಣದಲ್ಲಿ ಸಹಾಯಧನ ಲಭ್ಯವಿದೆ. ರೈತರು ಆಯಾ ತಾಲ್ಲೂಕಿನಲ್ಲಿ ಅರ್ಜಿ ಸಲ್ಲಿಸಿ, ಯೋಜನೆಗಳ ಲಾಭ ಪಡೆಯಬೇಕು’ ಎಂದು ಹೇಳಿದರು.

ಕೃಷಿ ಇಲಾಖೆಯ ಯೋಜನೆಯಗಳ ಕುರಿತು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿದ್ಯಾನಂದ ಸಿ. ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಣರಾವ ಬುಲ್ಲಾ, ಜಿಲ್ಲಾ ಪಂಚಾಯಿತಿ ಸಿಇಒ ಜ್ಞಾನೇಂದ್ರಕುಮಾರ ಗಂಗ್ವಾರ್, ಶಿಕ್ಷಣ ಅಧಿಕಾರಿ ಶಿವಕುಮಾರ ಸ್ವಾಮಿ ಹಾಗೂ ಆರೋಗ್ಯ ಇಲಾಖೆಯ ಡಾ.ರವೀಂದ್ರ ಸಿರಸಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.