ಔರಾದ್: ಯುವಕರು, ಮಹಿಳೆಯರು, ಕೃಷಿಕರ ಸ್ವಾವಲಂಬಿ ಬದುಕಿಗೆ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘವು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಹೇಳಿದರು.
ಔರಾದ್ ಪಟ್ಟಣದ ಸಾಯಿಬಾಬಾ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಔರಾದ್ ಹಾಗೂ ಕಮಲನಗರ ತಾಲ್ಲೂಕುಗಳ ಪ್ರಗತಿ ಹಾಗೂ ಕೌಶಲ ಕೇಂದ್ರಗಳ ಸಂಯೋಜಕಿಯರ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.
ಸಾವಯವ ಕೃಷಿ, ಸ್ವ ಉದ್ಯೋಗ ತರಬೇತಿ, ಕೌಶಲ ಕೇಂದ್ರಗಳು ಸಂಘದ ಪ್ರಮುಖ ಯೋಜನೆಗಳಲ್ಲಿ ಸೇರಿವೆ ಎಂದು ತಿಳಿಸಿದರು.
ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದ್ದಲ್ಲಿ ಮಾತ್ರ ಆದರ್ಶ ಕುಟುಂಬ, ಗ್ರಾಮ, ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ನಿರ್ಮಾಣ ಸಾಧ್ಯವಿದೆ. ಕಾರಣ, ಮಕ್ಕಳಿಗೆ ಸಂಸ್ಕಾರ ಕೊಡಲು ಪ್ರತಿ ಗ್ರಾಮಗಳಲ್ಲೂ ಬಾಲ ಸಂಸ್ಕಾರ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಹೇಳಿದರು.
ಸಂಘದ ಕೇಂದ್ರಗಳಲ್ಲಿ ತರಬೇತಿ ಪಡೆದವರು ಸ್ವ ಉದ್ಯೋಗ ಆರಂಭಿಸಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಸಲಹೆ ಮಾಡಿದರು.
ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಸಂಘವು ಶಿಕ್ಷಣ, ಯುವ ಸಬಲೀಕರಣ, ಕೃಷಿ, ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶವನ್ನು ನಂಬರ್ ಒನ್ ಆಗಿಸಲು ನಿರಂತರ ಶ್ರಮಿಸುತ್ತಿದೆ ಎಂದು ತಿಳಿಸಿದರು.
ವಿಕಾಸ ಅಕಾಡೆಮಿಯ ಔರಾದ್ ತಾಲ್ಲೂಕು ಸಂಚಾಲಕ ಗುರುನಾಥ ವಟಗೆ, ಕಮಲನಗರ ತಾಲ್ಲೂಕು ಸಂಚಾಲಕ ಯಶವಂತ ಬಿರಾದಾರ, ಸಮೃದ್ಧಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪುನೀತ್ ಸಾಳೆ, ಶಿವಶರಣಪ್ಪ ವಲ್ಲೇಪುರೆ, ಸಂಗಯ್ಯ ಸ್ವಾಮಿ ಉಪಸ್ಥಿತರಿದ್ದರು. ನವಚೇತನ ಗುರುಕುಲ ಶಾಲೆ ಸಂಸ್ಥಾಪಕ ಗುಂಡಯ್ಯ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಜಿಲ್ಲಾ ಪ್ರಮುಖ ರೇವಣಸಿದ್ದ ಜಾಡರ್ ನಿರೂಪಿಸಿದರು. ಜಿಲ್ಲಾ ಸಂಚಾಲಕ ಪ್ರಶಾಂತ ಸಿಂಧೆ ಸ್ವಾಗತಿಸಿದರು. ಔರಾದ್ ತಾಲ್ಲೂಕು ಸಂಚಾಲಕ ಮಹಾದೇವ ಮಸ್ಕಲ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.