ADVERTISEMENT

ಬೀದರ್‌: ಕುಮಾರಸ್ವಾಮಿ ಹೇಳಿಕೆಗೆ ಕಾರ್ಯಕರ್ತರ ತಳಮಳ

ಜೆಡಿಎಸ್‌ ಟಿಕೆಟ್‌ಗೆ ಪೈಪೋಟಿ ಮುಂದುವರಿಸಿರುವ ಮುಖಂಡರು

ಚಂದ್ರಕಾಂತ ಮಸಾನಿ
Published 23 ನವೆಂಬರ್ 2020, 16:53 IST
Last Updated 23 ನವೆಂಬರ್ 2020, 16:53 IST

ಬೀದರ್‌: ಸದ್ಯದ ಪರಿಸ್ಥಿತಿಯಲ್ಲಿ ಬಸವಕಲ್ಯಾಣದಲ್ಲಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ವ್ಯರ್ಥ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಬೆಂಗಳೂರಲ್ಲಿ ಹೇಳಿಕೆ ನೀಡಿರುವ ಬೆನ್ನಲ್ಲೇ ಜಿಲ್ಲೆಯ ಜೆಡಿಎಸ್‌ ಕಾರ್ಯಕರ್ತರು ತಳಮಳಗೊಂಡಿದ್ದಾರೆ. ಅವರ ಹೇಳಿಕೆ ಪಕ್ಷದ ಅಂತಿಮ ನಿರ್ಧಾರ ಅಲ್ಲ ಎಂದಿರುವ ಕೆಲ ಮುಖಂಡರು ಜೆಡಿಎಸ್ ಟಿಕೆಟ್‌ಗೆ ಪೈಪೋಟಿ ಮುಂದುವರಿಸಿದ್ದಾರೆ.

ಈಗಾಗಲೇ ಮೂವರು ಜೆಡಿಎಸ್ ಟಿಕೆಟ್‌ ಕೋರಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಶಾಸಕ ಮಾರುತಿರಾವ್ ಮುಳೆ ಅವರು ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಟಿಕೆಟ್‌ ಆಕಾಂಕ್ಷಿಗಳು ಸೋಮವಾರ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ನೇರವಾಗಿಯೇ ಕರೆ ಮಾಡಿ ಗೊಂದಲ ನಿವಾರಿಸಿಕೊಂಡಿದ್ದಾರೆ. ಬಸವಕಲ್ಯಾಣದಲ್ಲಿ ಜೆಡಿಎಸ್‌ ಅಭ್ಯರ್ಥಿ ಕಣಕ್ಕಿಳಿಯುವುದು ಖಚಿತ ಎನ್ನುವುದನ್ನು ಖಾತರಿ ಪಡಿಸಿಕೊಂಡಿದ್ದಾರೆ.

‘ಶಿರಾ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಆದ ಹಿನ್ನಡೆ ಹಾಗೂ ಅಲ್ಲಿನ ಮತದಾರರ ಮನಸ್ಥಿತಿಯನ್ನು ಅವಲೋಕಿಸಿ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ, ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ, ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ಉಪ ನಾಯಕ ಬಂಡೆಪ್ಪ ಕಾಶೆಂಪೂರ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದಾರೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ತಿಳಿಸಿದ್ದಾರೆ.

ADVERTISEMENT

‘ಬಸವಕಲ್ಯಾಣದಲ್ಲಿ ಜೆಡಿಎಸ್‌ ಏಳು ಬಾರಿ ಗೆಲುವು ಸಾಧಿಸಿದೆ. ಬಿಜೆಪಿ ಒಂದೇ ಬಾರಿ ಗೆದ್ದಿದೆ. ಬಸವಕಲ್ಯಾಣ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಜೆಡಿಎಸ್‌ ಕಾರ್ಯಕರ್ತರ ಪಡೆ ಇದೆ. ಕುಮಾರಸ್ವಾಮಿ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿರಬಹುದು. ಅದಕ್ಕೆ ಅಪಾರ್ಥ ಕಲ್ಪಿಸುವ ಅಗತ್ಯ ಇಲ್ಲ’ ಎಂದು ಹೇಳಿದ್ದಾರೆ.

‘ಜೆಡಿಎಸ್‌ನ ಹಿರಿಯ ಮುಖಂಡ ಪಿ.ಜಿ.ಆರ್‌.ಸಿಂಧ್ಯ ಅವರು ಈ ಬಾರಿ ಬಸವಕಲ್ಯಾಣದಿಂದ ಸ್ಪರ್ಧಿಸುವ ಇಚ್ಛೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ವರಿಷ್ಠರು ನನಗೇ ಟಿಕೆಟ್‌ ಕೊಡುವ ಭರವಸೆ ಇದೆ. ಈಗಾಗಲೇ ತಯಾರಿ ಆರಂಭಿಸಿದ್ದೇನೆ’ ಎಂದು ಮಾಜಿ ಶಾಸಕ ಮಾರುತಿರಾವ್ ಮುಳೆ ಹೇಳಿದ್ದಾರೆ.

ಶಾಸಕ ಬಂಡೆಪ್ಪ ಕಾಶೆಂಪೂರ ಅವರಿಗೆ ಮತ್ತೆ ಕೋವಿಡ್‌ ಸೋಂಕು ತಗುಲಿದ್ದು, ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಗುಣಮುಖರಾದ ನಂತರ ಪಕ್ಷದ ವರಿಷ್ಠರ ಸಭೆ ನಡೆಯಲಿದ್ದು, ಸಭೆಯಲ್ಲಿ ಅಭ್ಯರ್ಥಿಯ ಹೆಸರು ಅಂತಿಮವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿಜೆಪಿ, ಕಾಂಗ್ರೆಸ್‌ನಲ್ಲೂ ಪೈಪೋಟಿ:‘ಬಿಜೆಪಿಯಲ್ಲಿ ಟಿಕೆಟ್‌ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಟಿಕೆಟ್‌ಗಾಗಿ ಅನೇಕ ಮುಖಂಡರು ಪೈಪೋಟಿ ನಡೆಸಿದ್ದಾರೆ. ಮೈಸೂರಿನಲ್ಲಿ ಈಚೆಗೆ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ವಿಷಯ ಪ್ರಸ್ತಾಪವಾಗಿದೆ. ಕಮಿಟಿಯು ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ ನಂತರ ಟಿಕೆಟ್‌ ಯಾರಿಗೆ ದೊರೆಯಲಿದೆ ಎನ್ನುವುದು ಸ್ಪಷ್ಟವಾಗಲಿದೆ’ ಎಂದು ಪಕ್ಷದ ಮುಖಂಡ ರಘುನಾಥರಾವ್‌ ಮಲ್ಕಾಪುರೆ ಹೇಳುತ್ತಾರೆ.

ಕಾಂಗ್ರೆಸ್‌ನಲ್ಲಿ ಸಹ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಅಧಿಕ ಇದೆ. ಕಳೆದ ಚುನಾವಣೆಯಲ್ಲಿ ಅಹಿಂದ ಮತಗಳು ನಿರ್ಣಾಯಕ ಪಾತ್ರ ವಹಿಸಿದ್ದವು. ಈ ಬಾರಿಯೂ ಅಹಿಂದ ಮತಗಳು ಪಕ್ಷಕ್ಕೆ ಗೆಲುವು ತಂದುಕೊಡಲಿದೆ ಎನ್ನುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಮುಖಂಡರು ಇದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ನ.24ರಂದು ಬಸವಕಲ್ಯಾಣಕ್ಕೆ ಭೇಟಿ ಕೊಡುತ್ತಿದ್ದು, ಟಿಕೆಟ್‌ ಆಕಾಂಕ್ಷಿಗಳು ಶಕ್ತಿ ಪ್ರದರ್ಶನ ನಡೆಸುವ ಸಾಧ್ಯತೆ ಇದೆ.

‘ಕಾಂಗ್ರೆಸ್‌ ಟಿಕೆಟ್‌ ಬಯಸಿ 16 ಜನ ಅರ್ಜಿ ಸಲ್ಲಿಸಿದ್ದಾರೆ. ಪಕ್ಷ‌ ಅರ್ಜಿ ಪರಿಶೀಲನೆ ನಡೆಸಿ ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಯನ್ನು ಗುರುತಿಸಿ 10 ದಿನಗಳಲ್ಲಿ ಹೆಸರು ಪ್ರಕಟಿಸಲಿದೆ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.