ADVERTISEMENT

ಲಿಂಗಾಯತ ಮಹಾಸಭಾ ಯಾರ ವಿರುದ್ಧವೂ ಅಲ್ಲ

ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಿ.ಬಿ. ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 2:27 IST
Last Updated 18 ಜನವರಿ 2021, 2:27 IST
ಬೀದರ್‌ನಲ್ಲಿ ನಡೆದ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಿ.ಬಿ. ಪಾಟೀಲ ಮಾತನಾಡಿದರು
ಬೀದರ್‌ನಲ್ಲಿ ನಡೆದ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಿ.ಬಿ. ಪಾಟೀಲ ಮಾತನಾಡಿದರು   

ಬೀದರ್: ಜಾಗತಿಕ ಲಿಂಗಾಯತ ಮಹಾಸಭಾ ಲಿಂಗಾಯತ ಧರ್ಮದ ಆಶಯಗಳನ್ನು ಜನಮನಕ್ಕೆ ಬಿತ್ತುವ ಸಂಘಟನೆ ಆಗಿದೆಯೇ ಹೊರತು ಯಾವುದೇ ಧರ್ಮ ಅಥವಾ ವೀರಶೈವದ ವಿರುದ್ಧ ಹುಟ್ಟಿಕೊಂಡ ಸಂಘಟನೆ ಅಲ್ಲ ಎಂದು ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಿ.ಬಿ. ಪಾಟೀಲ ಹೇಳಿದರು.

ಇಲ್ಲಿಯ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಯೇ ಜಾಗತಿಕ ಲಿಂಗಾಯತ ಮಹಾಸಭಾದ ಗುರಿಯಾಗಿದೆ ಎಂದರು.

ADVERTISEMENT

114 ವರ್ಷಗಳ ಹಿಂದಿನ ಅಖಿಲ ಭಾರತ ವೀರಶೈವ ಮಹಾಸಭಾ ತನ್ನ ಉದ್ದೇಶ ಮರೆತಿದ್ದರಿಂದಾಗಿಯೇ ಜಾಗತಿಕ ಲಿಂಗಾಯತ ಮಹಾಸಭಾ ಜನ್ಮ ತಳೆದಿದೆ ಎಂದು ಹೇಳಿದರು.

ಬಸವಣ್ಣನವರು 900 ವರ್ಷಗಳ ಹಿಂದೆ ಸ್ಥಾಪಿಸಿದ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಲಿಂಗಾಯತ ಧರ್ಮಕ್ಕೆ ಈವರೆಗೂ ಸ್ವತಂತ್ರ ಧರ್ಮದ ಮಾನ್ಯತೆ ದೊರಕದಿರುವುದು ಬೇಸರದ ಸಂಗತಿಯಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ನುಡಿದರು.

ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಹೋರಾಟದಲ್ಲಿ ಎಲ್ಲ ಬಸವ ಪರ ಸಂಘಟನೆಗಳನ್ನು ಒಂದೇ ವೇದಿಕೆಯಲ್ಲಿ ಕರೆದೊಯ್ಯಲು ಜಾಗತಿಕ ಲಿಂಗಾಯತ ಮಹಾಸಭಾ ರಚಿಸಲಾಗಿದೆ. ಸ್ವತಂತ್ರ ಧರ್ಮ ಮಾನ್ಯತೆ ಪಡೆಯಲು ಲಿಂಗಾಯತರು ಸಂಘಟಿತರಾಗಬೇಕು ಎಂದು ಸಲಹೆ ಮಾಡಿದರು.

ಮಹಾಸಭಾಕ್ಕೆ ಬೀದರ್ ಜಿಲ್ಲೆಯಲ್ಲಿ ಇಡೀ ರಾಜ್ಯದಲ್ಲೇ ಅತಿಹೆಚ್ಚು 2,000 ಜನರ ಸದಸ್ಯತ್ವ ಮಾಡಿಸಲಾಗಿದೆ ಎಂದು ಹೇಳಿದರು.

ನನ್ನ ನಾಲಿಗೆ ಹಾಗೂ ಹೃದಯ ಬಸವಣ್ಣನಿಗಾಗಿ ಇದೆ. ಸನಾತನಕ್ಕೆ ಅಲ್ಲ ಎಂದು ಗ್ರಂಥ ಬಿಡುಗಡೆ ಮಾಡಿದ ಬೈಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ತಿಳಿಸಿದರು.

ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದಿಂದ ಹಿಂದೆ ಸರಿಯಲು ಸ್ವಾಮೀಜಿಯೊಬ್ಬರು ತಮಗೆ ₹500 ಕೋಟಿಯ ಮಠ ವಹಿಸುವ ಆಮಿಷ ಒಡ್ಡಿದ್ದರು. ಆದರೆ, ಅದನ್ನು ತಿರಸ್ಕರಿಸಿ, ಅವರನ್ನು ಸನ್ಮಾನಿಸಿ ಕಳುಹಿಸಿದೆ ಎಂದು ಹೇಳಿದರು.

ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಎಂ. ಜಾಮದಾರ್ ಆನ್‍ಲೈನ್‍ನಲ್ಲಿ ಆಶಯ ನುಡಿ ಆಡಿದರು.

ರಾಜ್ಯ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ಎನ್‍ಎಸ್‍ಎಸ್‍ಕೆ ಅಧ್ಯಕ್ಷ ಡಿ.ಕೆ. ಸಿದ್ರಾಮ, ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಪ್ರಧಾನ ಕಾರ್ಯದರ್ಶಿ ಬಾಬುರಾವ್ ದಾನಿ ಅವರನ್ನು ಸನ್ಮಾನಿಸಲಾಯಿತು.

ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಸಾನಿಧ್ಯ, ಹುಲಸೂರಿನ ಶಿವಾನಂದ ಸ್ವಾಮೀಜಿ, ಬಸವಕಲ್ಯಾಣದ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿ, ಕೌಠಾ(ಬಿ)ದ ಸಿದ್ಧರಾಮ ಶರಣರು ಬೆಲ್ದಾಳ, ಲಿಂಗಾಯತ ಮಹಾಮಠದ ಡಾ. ಗಂಗಾಂಬಿಕೆ ಅಕ್ಕ, ಬೇಲೂರಿನ ಶಿವಕುಮಾರ ಸ್ವಾಮೀಜಿ, ಪಂಚಾಕ್ಷರಿ ಸ್ವಾಮೀಜಿ, ಬಸವ ಕೇಂದ್ರದ ಪಂಚಯ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಮುಖಂಡರಾದ ಶಿವಶರಣಪ್ಪ ವಾಲಿ, ಡಾ. ಬಸವರಾಜ ಪಾಟೀಲ ಅಷ್ಟೂರ, ಬಿ.ಜಿ. ಶೆಟಕಾರ, ಸುರೇಶ ಚನಶೆಟ್ಟಿ, ಶರಣಪ್ಪ ಮಿಠಾರೆ ಇದ್ದರು.

ಮಹಾಸಭಾ ಜಿಲ್ಲಾ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಜೊನ್ನಿಕೇರಿ ಸ್ವಾಗತಿಸಿದರು. ನವಲಿಂಗ ಪಾಟೀಲ, ಯೋಗೇಂದ್ರ ಯದಲಾಪುರೆ ನಿರೂಪಿಸಿದರು. ಸುರೇಶ ಸ್ವಾಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.