ADVERTISEMENT

ಮಹಿಳೆಯರಿಗೆ ಅಂಚೆ ಚೀಟಿ ಉಡುಗೊರೆ

ಅಂಚೆ ಇಲಾಖೆಯಿಂದ ವಿಭಿನ್ನ ಮಹಿಳಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2019, 14:32 IST
Last Updated 16 ಮಾರ್ಚ್ 2019, 14:32 IST
ಬೀದರ್‌ನ ಪ್ರಧಾನ ಅಂಚೆ ಕಚೇರಿಯಲ್ಲಿ ಮಹಿಳೆಯರಿಗೆ ಅವರದೇ ಭಾವಚಿತ್ರ ಇರುವ ಅಂಚೆ ಚೀಟಿಗಳನ್ನು ಉಡುಗೊರೆಯಾಗಿ ಕೊಟ್ಟು ಮಹಿಳಾ ದಿನ ಆಚರಿಸಲಾಯಿತು
ಬೀದರ್‌ನ ಪ್ರಧಾನ ಅಂಚೆ ಕಚೇರಿಯಲ್ಲಿ ಮಹಿಳೆಯರಿಗೆ ಅವರದೇ ಭಾವಚಿತ್ರ ಇರುವ ಅಂಚೆ ಚೀಟಿಗಳನ್ನು ಉಡುಗೊರೆಯಾಗಿ ಕೊಟ್ಟು ಮಹಿಳಾ ದಿನ ಆಚರಿಸಲಾಯಿತು   

ಬೀದರ್: ಅಂಚೆ ಇಲಾಖೆಯ ಸಿಬ್ಬಂದಿ ತಮ್ಮ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದ ಮಹಿಳೆಯರಿಗೆ ಅವರದೇ ಭಾವಚಿತ್ರ ಇರುವ ಅಂಚೆ ಚೀಟಿಗಳನ್ನು ಉಡುಗೊರೆಯಾಗಿ ಕೊಡುವ ಮೂಲಕ ಇಲ್ಲಿಯ ಪ್ರಧಾನ ಅಂಚೆ ಕಚೇರಿಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ವಿಭಿನ್ನವಾಗಿ ಆಚರಿಸಿದರು.

ಸಾಧಕರು, ಗಣ್ಯರ ಭಾವಚಿತ್ರ ಇರುವ ಅಂಚೆ ಚೀಟಿಗಳನ್ನು ಹೊರ ತರುವುದು ಸಾಮಾನ್ಯ. ಆದರೆ, ಅದರಲ್ಲಿ ಈಗ ತಮ್ಮ ಭಾವಚಿತ್ರಕ್ಕೂ ಅವಕಾಶ ದೊರೆತಿದ್ದಕ್ಕೆ ಮಹಿಳೆಯರು ಅಭಿಮಾನದಿಂದ ಬೀಗಿದರು.

ಕುಟುಂಬದ ಯೋಗಕ್ಷೇಮಕ್ಕಾಗಿ ಹಗಲಿರುಳು ಶ್ರಮಿಸುವ ತಮ್ಮ ಸೇವೆಯನ್ನು ಗುರುತಿಸಿ ವಿಶಿಷ್ಟ ಕೊಡುಗೆ ನೀಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.

ADVERTISEMENT

ಅಂಚೆ ಅಧೀಕ್ಷಕ ವಿ.ಎಸ್.ಎಲ್. ನರಸಿಂಹರಾವ್ ಮಾತನಾಡಿ, ‘ಜೀವನದಲ್ಲಿ ಮಹಿಳೆ ತಾಯಿ, ಸಹೋದರಿ, ಪತ್ನಿ, ಸ್ನೇಹಿತೆ, ಮಗಳಾಗಿ ಪುರುಷರಿಗೆ ನೆರವಾಗುತ್ತಾಳೆ. ಅಂತಹ ಮಹಿಳೆಗೆ ಗೌರವ, ಕೃತಜ್ಞತೆ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ’ ಎಂದು ಹೇಳಿದರು.

‘ಹೂವು, ದೇವಸ್ಥಾನ, ತಾಜಮಹಲ್, ವಿವಿಧ ರಾಶಿ ಚಿನ್ಹೆ, ಚಿಟ್ಟೆಗಳ ಚಿತ್ರ ಇರುವ ‘ನನ್ನ ಸ್ಟ್ಯಾಂಪ್’ ಅಂಚೆ ಚೀಟಿಯ ಫಲಕಗಳು ಲಭ್ಯ ಇವೆ. ತಮ್ಮ ಪ್ರೀತಿ ಪಾತ್ರರಿಗೆ ಕೊಡಲು ಇಚ್ಛಿಸುವವರು ಸಂದರ್ಭಕ್ಕೆ ಅನುಸಾರವಾಗಿ ಫಲಕಗಳನ್ನು ಆಯ್ಕೆ ಮಾಡಿಕೊಂಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಪ್ರಧಾನ ಅಂಚೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಅಂಚೆ ಚೀಟಿ ಪಡೆದುಕೊಳ್ಳಬಹುದು’ ಎಂದು ತಿಳಿಸಿದರು.

‘₹ 300ರ ಮೌಲ್ಯದ ಫಲಕದಲ್ಲಿ ₹ 5 ಮೌಲ್ಯದ 12 ಅಂಚೆ ಚೀಟುಗಳು ಇರುತ್ತವೆ. ಅವುಗಳನ್ನು ಯಾವುದೇ ಲಕೋಟೆಗೆ ಲಗತ್ತಿಸಿ ರವಾನೆ ಮಾಡಬಹುದು. ನೆನಪಿನ ಕಾಣಿಕೆಯ ರೂಪದಲ್ಲೂ ಬಳಸಬಹುದು’ ಎಂದು ಹೇಳಿದರು.

ಸಹಾಯಕ ಅಂಚೆ ಅಧೀಕ್ಷಕ ರವೀಂದ್ರ ಮಾತನಾಡಿ, ‘ಜನ್ಮದಿನ, ಮದುವೆ ವಾರ್ಷಿಕೋತ್ಸವ, ಸೇವಾ ನಿವೃತ್ತಿಯ ಸಂದರ್ಭದಲ್ಲಿ ನನ್ನ ಸ್ಟ್ಯಾಂಪ್ ಫಲಕವನ್ನು ನೆನಪಿನ ಕಾಣಿಕೆಯಾಗಿ ಕೊಡುವ ಹೊಸ ಟ್ರೆಂಡ್ ಈಗ ಶುರುವಾಗಿದೆ’ ಎಂದು ತಿಳಿಸಿದರು.

ಪ್ರಧಾನ ಅಂಚೆಪಾಲಕ ಗುಂಡಪ್ಪ ಕನಕ ಮಾತನಾಡಿ, ‘ವಾಟ್ಸ್‍ಆ್ಯಪ್, ಫೇಸ್‌ಬುಕ್‌; ಇ-ಮೇಲ್‌ನಂತಹ ತಾತ್ಕಾಲಿಕ ಸಂದೇಶಗಳ ಯುಗದಲ್ಲಿ ದಾಖಲೆಯಾಗಿ ಉಳಿಯಬಲ್ಲ ಇಂತಹ ಅಂಚೆ ಚೀಟಿಗಳು ಸಂಬಂಧಗಳನ್ನು ಬೆಸೆಯುವ ಕೊಂಡಿಯಾಗಿವೆ’ ಎಂದು ಹೇಳಿದರು.

‘ಕುಟುಂಬದ ಒಳಿತಿಗಾಗಿ ದುಡಿಯುತ್ತಿರುವ ನಮಗೆ ನಮ್ಮದೇ ಅಂಚೆ ಚೀಟಿಯ ಗೌರವ ದೊರೆತಿರುವುದು ಸಂತಸ ಉಂಟು ಮಾಡಿದೆ. ಇದರಿಂದ ಅಂಚೆ ಇಲಾಖೆಯ ಮೇಲಿನ ಗೌರವ ಇಮ್ಮಡಿಯಾಗಿದೆ. ಮಹಿಳೆಯಾಗಿ ಜನಿಸಿದ್ದಕ್ಕೆ ನನಗೆ ಹೆಮ್ಮೆ ಇದೆ’ ಎಂದು ಲಕ್ಷ್ಮಿ ಕಾಮೇಶ್ವರಿ ನುಡಿದರು. 81 ಸಿಬ್ಬಂದಿ ಅಂಚೆ ಚೀಟಿಗಳನ್ನು ಉಡುಗೊರೆಯಾಗಿ ನೀಡಿದರು.

ಅಂಚೆ ಇಲಾಖೆಯ ಅಧಿಕಾರಿ ಮಂಗಲಾ ಭಾಗವತ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.