ADVERTISEMENT

ಹಲ್ಲೆ: ಕ್ರೈಸ್ತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 8:47 IST
Last Updated 29 ಜನವರಿ 2020, 8:47 IST
ರಾಜ್ಯದ ವಿವಿಧೆಡೆ ಚರ್ಚ್‌ ಹಾಗೂ ಫಾಸ್ಟರ್‌ಗಳ ಮೇಲೆ ಹಲ್ಲೆ ನಡೆದಿರುವುದನ್ನು ಖಂಡಿಸಿ ಬೀದರ್‌ನಲ್ಲಿ ಮಂಗಳವಾರ ಇಂಡಿಯನ್‌ ಕ್ರಿಶ್ಚನ್ ವೆಲ್‌ಫೇರ್‌ ಅಸೋಸಿಯೇಶನ್ ನೇತೃತ್ವದಲ್ಲಿ ಕ್ರೈಸ್ತರು ನಗರದಲ್ಲಿ ಮೆರವಣಿಗೆ ನಡೆಸಿದರು
ರಾಜ್ಯದ ವಿವಿಧೆಡೆ ಚರ್ಚ್‌ ಹಾಗೂ ಫಾಸ್ಟರ್‌ಗಳ ಮೇಲೆ ಹಲ್ಲೆ ನಡೆದಿರುವುದನ್ನು ಖಂಡಿಸಿ ಬೀದರ್‌ನಲ್ಲಿ ಮಂಗಳವಾರ ಇಂಡಿಯನ್‌ ಕ್ರಿಶ್ಚನ್ ವೆಲ್‌ಫೇರ್‌ ಅಸೋಸಿಯೇಶನ್ ನೇತೃತ್ವದಲ್ಲಿ ಕ್ರೈಸ್ತರು ನಗರದಲ್ಲಿ ಮೆರವಣಿಗೆ ನಡೆಸಿದರು   

ಬೀದರ್: ರಾಜ್ಯದಲ್ಲಿ ಕ್ರೈಸ್ತರು, ಪಾಸ್ಟರ್‌ ಹಾಗೂ ಚರ್ಚ್‌ಗಳ ಮೇಲೆ ಹಲ್ಲೆ ನಡೆಸುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಕ್ರೈಸ್ತರಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿ ಇಂಡಿಯನ್‌ ಕ್ರಿಶ್ಚನ್ ವೆಲ್‌ಫೇರ್‌ ಅಸೋಸಿಯೇಶನ್ ನೇತೃತ್ವದಲ್ಲಿ ಕ್ರೈಸ್ತರು ನಗರದಲ್ಲಿ ಮೆರವಣಿಗೆ ನಡೆಸಿದರು.

ಬೀದರ್‌ ತಾಲ್ಲೂಕಿನ ಬಗದಲ್‌ ಹಾಗೂ ಮರ್ಜಾಪುರದಲ್ಲಿ ಕಿಡಿಗೇಡಿಗಳು ಶಿಲುಬೆಯನ್ನು ಕಿತ್ತೆಸೆದಿದ್ದಾರೆ.
ಗದಗಿನ ಮನೆಯೊಂದರಲ್ಲಿ ಕ್ರೈಸ್ತರು ಪ್ರಾರ್ಥನೆ ನಡೆಸುತ್ತಿದ್ದಾಗ ಪಾಸ್ಟರ್ ಹಾಗೂ ಭಕ್ತಾದಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ಬೆಂಗಳೂರಿನ ಕೆಂಗೇರಿಯಲ್ಲಿನ ಸೇಂಟ್ ಫ್ರಾನ್ಸಿಸ್ ಚರ್ಚ್‌ ಮೇಲೆ ದಾಳಿ ಮಾಡಿ ಕ್ರೈಸ್ತರಲ್ಲಿ ಭಯ ಹುಟ್ಟಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಿಡಿಗೇಡಿಗಳ ವಿರುದ್ಧ ದೂರು ಕೊಟ್ಟರೂ ಆರೋಪಿಗಳನ್ನು ಬಂಧಿಸಿಲ್ಲ. ರಾಜ್ಯ ಸರ್ಕಾರ ಕ್ರೈಸ್ತರಿಗೆ ರಕ್ಷಣೆ ಕೊಡವಲ್ಲಿ ವಿಫಲವಾಗಿದೆ. ಆದ್ದರಿಂದ ರಾಜ್ಯ ಸರ್ಕಾರದ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ADVERTISEMENT

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಲಿನ ಕಪಾಲಿಬೆಟ್ಟದ ಮೇಲೆ ಯೇಸು ಕ್ರೈಸ್ತನ ಪ್ರತಿಮೆ ಸ್ಥಾಪನೆಗಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಸಾಯಿನಗರ ಬಡಾವಣೆಯಲ್ಲಿ ಚರ್ಚ್‌ ನಿರ್ಮಿಸಲು ಆಕ್ಷೇಪ ವ್ಯಕ್ತಪಡಿಸುತ್ತಿರುವ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬೀದರ್ ತಾಲ್ಲೂಕಿನ ಗುಮ್ಮಾ ಗ್ರಾಮದಲ್ಲಿ ಕ್ರೈಸ್ತರು ಶಿಲುಬೆ ಪ್ರತಿಷ್ಠಾಪಿಸಿರುವ ಜಾಗವನ್ನು ಕೆಲವರು ಅತಿಕ್ರಮಣ ಮಾಡಿದ್ದು, ಅದನ್ನು ತೆರವುಗೊಳಿಸಬೇಕು. ಕಬೀರವಾಡಾದ ಸರ್ವೆ ನಂ.8 ರಲ್ಲಿ ಕ್ರೈಸ್ತರಿಗೆ ಸರ್ಕಾರ ಮಂಜೂರು ಮಾಡಿದ ಸ್ಮಶಾನ ಭೂಮಿಯನ್ನು ಬಳಸಲು ಅನುವು ಮಾಡಿಕೊಡಬೇಕು. ಇಸ್ಲಾಂಪುರದಲ್ಲಿ ಸ್ಮಶಾನ ಭೂಮಿ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಫಾದರ್ ಜೈಪೌಲ್, ಫಾದರ್‌ ವಿಲ್ಸನ್, ಸಾವನ್‌ ಪೌಲ್, ಪಾಸ್ಟರ್‌ಗಳಾದ ಅಬ್ರಾಹಂ ಅಮೃತ, ಸೀಜು, ನೋವಾ, ಮನೋಜ, ಸಬಾಸ್ಟಿಯನ್ ಚಿದ್ರಿ, ಸಂಜಯ ಜಾಗೀರದಾರ್‌ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.