ADVERTISEMENT

ಕಡೆ ಶ್ರಾವಣ ಸೋಮವಾರ ದೇಗುಲಗಳಲ್ಲಿ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2023, 16:02 IST
Last Updated 12 ಸೆಪ್ಟೆಂಬರ್ 2023, 16:02 IST
ಶ್ರಾವಣ ಮಾಸದ ಕೊನೆಯ ಸೋಮವಾರ ಭಕ್ತರು ಬೀದರ್‌ನ ಪಾಪನಾಶಕ್ಕೆ ತೆರಳಿ ಶಿವಲಿಂಗದ ದರ್ಶನ ಪಡೆದರು
ಶ್ರಾವಣ ಮಾಸದ ಕೊನೆಯ ಸೋಮವಾರ ಭಕ್ತರು ಬೀದರ್‌ನ ಪಾಪನಾಶಕ್ಕೆ ತೆರಳಿ ಶಿವಲಿಂಗದ ದರ್ಶನ ಪಡೆದರು   

ಬೀದರ್‌: ಶ್ರಾವಣ ಮಾಸದ ಕೊನೆಯ ಸೋಮವಾರ ನಗರದ ವಿವಿಧ ದೇವಸ್ಥಾನಗಳಲ್ಲಿ ಭಕ್ತರ ದಂಡು ಕಂಡು ಬಂತು.

ಸೋಮವಾರ ಬೆಳಕು ಹರಿಯುತ್ತಿದ್ದಂತೆ ಜನರೆಲ್ಲ ಬರಿಗಾಲಿನಲ್ಲಿ ದೇವಸ್ಥಾನಗಳತ್ತ ಹೆಜ್ಜೆ ಹಾಕಿದರು. ಪ್ರಮುಖ ರಸ್ತೆಗಳಲ್ಲಿ ಭಕ್ತರು ಹೆಜ್ಜೆ ಹಾಕುತ್ತಿರುವುದು ಕಂಡು ಬಂತು. ಅದರಲ್ಲೂ ನಗರದ ಪಾಪನಾಶ ಶಿವಲಿಂಗ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ದಿನವಿಡೀ ದೇವಸ್ಥಾನದ ಪರಿಸರದಲ್ಲಿ ಜಾತ್ರೆಯ ವಾತಾವರಣ ಇತ್ತು.

ಬೆಳಿಗ್ಗೆ ದೇವಸ್ಥಾನದ ಪೂಜಾರಿ ಶಿವಲಿಂಗಕ್ಕೆ ವಿಶೇಷ ಅಭಿಷೇಕ ಮಾಡಿ ಪೂಜೆ ನೆರವೇರಿಸಿದರು. ಅನಂತರ ವಿವಿಧ ಕಡೆಗಳಿಂದ ಬಂದಿದ್ದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಶಿವಲಿಂಗವನ್ನು ಸ್ಪರ್ಶಿ ಹೂ, ಹಣ್ಣು ಕಾಯಿ, ನೈವೇದ್ಯ ಸಮರ್ಪಿಸಿ ಹರಕೆ ತೀರಿಸಿದರು.

ADVERTISEMENT

ಶ್ರಾವಣದ ಕಡೆಯ ದಿನ ನಗರದ ಮೈಲೂರ ಕ್ರಾಸ್‌, ಹಾರೂರಗೇರಿಯಲ್ಲಿ ಏರ್ಪಡಿಸಿದ್ದ ಪ್ರವಚನದಲ್ಲಿ ನೂರಾರು ಜನ ಪಾಲ್ಗೊಂಡಿದ್ದರು. 

ಬೀದರ್‌ನ ಪಾಪನಾಶದಲ್ಲಿ ದೇವರ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ನಿಂತಿದ್ದರು
ಶ್ರಾವಣ ಸೋಮವಾರದ ಕೊನೆಯ ದಿನ ಕೇಂದ್ರ ಸಚಿವ ಭಗವಂತ ಖೂಬಾ ಅವರು ಕುಟುಂಬ ಸದಸ್ಯರೊಂದಿಗೆ ಶ್ರೀಶೈಲಕ್ಕೆ ತೆರಳಿ ಮಲ್ಲಿಕಾರ್ಜುನ ದೇವರ ದರ್ಶನ ಪಡೆದು ಶ್ರೀಶೈಲದ ಪೀಠಾಧಿಪತಿ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದ ಪಡೆದರು

ಶ್ರೀಶೈಲದಲ್ಲಿ ಸಚಿವ ಖೂಬಾ ಪೂಜೆ

ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಶ್ರಾವಣ ಮಾಸದ ಕೊನೆಯ ಸೋಮವಾರ ಕುಟುಂಬ ಸದಸ್ಯರೊಂದಿಗೆ ಶ್ರೀಶೈಲಕ್ಕೆ ತೆರಳಿ ಮಲ್ಲಿಕಾರ್ಜುನ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು. ಅನಂತರ ಶ್ರೀಶೈಲದ ಪೀಠಾಧಿಪತಿ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದ ಪಡೆದರು. ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಬೇಕು. ಸರ್ವರು ಸುಖ ಶಾಂತಿ ನೆಮ್ಮದಿಯಿಂದ ಬದುಕಬೇಕು. ಎಲ್ಲರೂ ಸಹೋದರತೆಯಿಂದ ಬಾಳಿ ಬದುಕಬೇಕೆಂದು ದೇವರಲ್ಲಿ ಪ್ರಾರ್ಥಿಸಿಕೊಂಡರು. ನಂತರ ಶ್ರೀಶೈಲದಲ್ಲಿರುವ ಅಕ್ಕಮಹಾದೇವಿ ಚೈತನ್ಯ ಪೀಠಕ್ಕೆ ತೆರಳಿ ಕರುಣಾದೇವಿ ಮಾತಾ ಹೇಮರೆಡ್ಡಿ ಮಲ್ಲಮ್ಮ ಸಾಕ್ಷಿ ಗಣಪತಿಯ ದರ್ಶನ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.