ADVERTISEMENT

ಬೆಳೆ ವಿವರ ಮೊಬೈಲ್‍ನಲ್ಲಿ ದಾಖಲಿಸಿ: ಜಿ.ಎಚ್. ತಾರಾಮಣಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2021, 4:37 IST
Last Updated 12 ಡಿಸೆಂಬರ್ 2021, 4:37 IST
ಔರಾದ್ ತಾಲ್ಲೂಕಿನ ನಾಗೂರ ಗ್ರಾಮದ ಪ್ರಗತಿಪರ ರೈತ ಬಾಲಾಜಿ ಮೇತ್ರೆ ಅವರ ಜಮೀನಿಗೆ ಜಂಟಿ ಕೃಷಿ ನಿರ್ದೇಶಕಿ ಜಿ.ಎಚ್. ತಾರಾಮಣಿ, ಉಪ ಕೃಷಿ ನಿದೇಶಕ ಎನ್. ಕೆಂಗೇಗೌಡ ಅವರು ಭೇಟಿ ನೀಡಿ ಬೆಳೆ ಸಮೀಕ್ಷೆಯ ವಿವರ ಪರಿಶೀಲಿಸಿದರು
ಔರಾದ್ ತಾಲ್ಲೂಕಿನ ನಾಗೂರ ಗ್ರಾಮದ ಪ್ರಗತಿಪರ ರೈತ ಬಾಲಾಜಿ ಮೇತ್ರೆ ಅವರ ಜಮೀನಿಗೆ ಜಂಟಿ ಕೃಷಿ ನಿರ್ದೇಶಕಿ ಜಿ.ಎಚ್. ತಾರಾಮಣಿ, ಉಪ ಕೃಷಿ ನಿದೇಶಕ ಎನ್. ಕೆಂಗೇಗೌಡ ಅವರು ಭೇಟಿ ನೀಡಿ ಬೆಳೆ ಸಮೀಕ್ಷೆಯ ವಿವರ ಪರಿಶೀಲಿಸಿದರು   

ಔರಾದ್: ‘ರೈತರು ತಮ್ಮ ಜಮೀನುಗಳಲ್ಲಿನ ಹಿಂಗಾರು ಬೆಳೆಗಳ ವಿವರವನ್ನು ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್‍ನಲ್ಲಿ ದಾಖಲಿಸಬೇಕು’ ಎಂದು ಜಂಟಿ ಕೃಷಿ ನಿರ್ದೇಶಕಿ ಜಿ.ಎಚ್. ತಾರಾಮಣಿ ಸಲಹೆ ಮಾಡಿದರು.

ತಾಲ್ಲೂಕಿನ ಜೋಜನಾ, ಸಂತಪುರ ಸೇರಿದಂತೆ ವಿವಿಧ ಗ್ರಾಮಗಳಿಗೆ ಈಚೆಗೆ ಭೇಟಿ ನೀಡಿದ ಅವರು, ಹಿಂಗಾರು ಬೆಳೆಗಳ ಸಮೀಕ್ಷೆ ಮಾಹಿತಿ ಪಡೆದು ಮಾತನಾಡಿದರು.

ರೈತರು ತಮ್ಮ ಜಮೀನುಗಳ ಬೆಳೆ ಸಮೀಕ್ಷೆಯನ್ನು ತಾವೇ ಮಾಡುವಂತೆ ಸರ್ಕಾರ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ಬೆಳೆ ಸಮೀಕ್ಷೆ ಆ್ಯಪ್‍ನಲ್ಲಿ ರೈತರು ತಮ್ಮ ಹೆಸರು, ಗ್ರಾಮ, ಮೊಬೈಲ್ ಸಂಖ್ಯೆ, ಪಹಣಿಯ ಮಾಹಿತಿ ದಾಖಲಿಸುವಂತೆ’ ತಿಳಿಸಿದರು.

ADVERTISEMENT

ಜೋಜನಾ ಗ್ರಾಮದಲ್ಲಿ ರಿಲಾಯನ್ಸ್ ಪ್ರತಿಷ್ಠಾನದ ಸಹಯೋಗದಲ್ಲಿ ಸ್ಥಾಪಿಸಲಾದ ಕೃಷಿ ಯಂತ್ರೋಪಕರಣ ಘಟಕಕ್ಕೆ ಭೇಟಿ ನೀಡಿದರು. ‘ರೈತರಿಗೆ ಸಕಾಲಕ್ಕೆ ಬೀಜ, ಗೊಬ್ಬರ, ಸುಧಾರಿತ ಯಂತ್ರ ಪೂರೈಸುವಲ್ಲಿ ಈ ಘಟಕ ಅನುಕೂಲವಾಗಿದೆ. ಎಲ್ಲ ರೈತರು ಇದರ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ನಾಗೂರ (ಎಂ) ಗ್ರಾಮದ ಪ್ರಗತಿಪರ ರೈತ ಬಾಲಾಜಿ ಮೇತ್ರೆ ಅವರ ಜಮೀನಿಗೆ ಭೇಟಿ ನೀಡಿ, ಇಲ್ಲಿನ ಹನಿ ನೀರಾವರಿ ಪದ್ಧತಿ ಹಾಗೂ ಪಂಪ್‌ಸೆಟ್ ಮೋಟಾರ್‌ಗೆ ಸೋಲಾರ್ ಅಳವಡಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ರೈತರು ಆಧುನಿಕ ಪದ್ಧತಿ ಅಳವಡಿಸಿಕೊಂಡು ಕೃಷಿ ಮಾಡಿದರೆ ಖಂಡಿತ ಲಾಭ ಸಿಗುತ್ತದೆ’ ಎಂದು ತಿಳಿಸಿದರು.

ಉಪ ಕೃಷಿ ನಿದೇರ್ಶಕಎನ್.ಕೆಂಗೇಗೌಡ ಮಾತನಾಡಿ, ‘ತಾಲ್ಲೂಕಿನ ರೈತರು ಬುದ್ಧಿವಂತರು. ಕಡಿಮೆ ನೀರಿನಲ್ಲಿ ವೈವಿದ್ಯ ಬೆಳೆಗಳು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ’ ಎಂದು ಪ್ರಶಂಸಿಸಿದರು.

ಕೃಷಿ ಅಧಿಕಾರಿ ಅಮರೇಶ, ಕೃಷಿ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ನವನಾಥ, ಮುಖಂಡ ಘಾಳರೆಡ್ಡಿ, ರಾಜಕುಮಾರ ಬಿರಾದಾರ ಇದ್ದರು.

ಸಹಾಯಕ ಕೃಷಿ ನಿರ್ದೇಶಕ ಎಂಎಕೆ ಅನ್ಸಾರಿ ನೇತೃತ್ವದ ತಂಡ ಬಾಲೂರ್, ತೋರಣಾ, ಕಮಲನಗರ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ಮಾಡಿದರು. ಕೃಷಿ ಇಲಾಖೆ ತಾಂತ್ರಿಕ ವ್ಯವಸ್ಥಾಪಕ ಪಾಂಡುರಂಗ ಪಾಟೀಲ, ಕೃಷಿ ಅಧಿಕಾರಿ ಇಂದಿರಾ ಅಕ್ಕಲಕೋಟ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.