ADVERTISEMENT

ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ: ರಾಮಚಂದ್ರನ್‌ ಸೂಚನೆ

ಟೆಲಿಕಾಂ ಸಭೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 14:27 IST
Last Updated 16 ಜುಲೈ 2021, 14:27 IST
ಬೀದರ್‌ನಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಟೆಲಿಕಾಂ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಮಾತನಾಡಿದರು. ರುದ್ರೇಶ ಘಾಳಿ, ನಾಗೇಶ ಡಿ.ಎಲ್‌. ಇದ್ದಾರೆ
ಬೀದರ್‌ನಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಟೆಲಿಕಾಂ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಮಾತನಾಡಿದರು. ರುದ್ರೇಶ ಘಾಳಿ, ನಾಗೇಶ ಡಿ.ಎಲ್‌. ಇದ್ದಾರೆ   

ಬೀದರ್‌: ‘ಟೆಲಿಕಾಂ ಕಂಪನಿ ಹಾಗೂ ಮೂಲಸೌಕರ್ಯ ಕಲ್ಪಿಸುವ ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿ ಗ್ರಾಹಕರಿಗೆ ಉತ್ತಮ ಸೇವೆ ಕೊಡಲು ಮುಂದಾಗಬೇಕು’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಸೂಚನೆ ನೀಡಿದರು.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಟೆಲಿಕಾಂ ಸಮನ್ವಯ ಸಮಿತಿಯ ಸಭೆ ನಡೆಸಿ ಅವರು ಮಾತನಾಡಿದರು.

‘ಜಿಲ್ಲಾ ಮಟ್ಟದ ಟೆಲಿಕಾಂ ಸಮನ್ವಯ ಸಮಿತಿ ಸಭೆ ಇನ್ನು ಪ್ರತಿ ತಿಂಗಳು ನಡೆಯಲಿದೆ. ಟಾವರ್ ಅಳವಡಿಸಲು ಅಡೆತಡೆಗಳು ಎದುರಾದರೆ ಹಾಗೂ ವಿದ್ಯುತ್ ಪೂರೈಕೆಯಲ್ಲಿ ತೊಂದರೆ ಉಂಟಾದರೆ ಟೆಲಿಕಾಂ ಕಂಪನಿಗಳು ಸಮಿತಿಗೆ ದೂರು ಕೊಡಬಹುದು’ ಎಂದು ತಿಳಿಸಿದರು.

ADVERTISEMENT

‘ಜಟಿಲವಾದ ಸಮಸ್ಯೆಗಳಿದ್ದರೆ ಸಭೆಯಲ್ಲಿ ಚರ್ಚಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

ಮೂಲಸೌಕರ್ಯ ಪಡೆಯಲು ಟೆಲಿಕಾಂ ಕಂಪನಿಗಳು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಅಗತ್ಯವಿರುವ ಸೌಕರ್ಯಗಳನ್ನು ಕಲ್ಪಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಇಂಡಸ್ ಟಾವರ್ (ಏರ್‌ಟೆಲ್) ಮತ್ತು ಜಿಯೊ ನೆಟ್‌ವರ್ಕನ ಪ್ರತಿನಿಧಿಗಳು ಮನವಿ ಮಾಡಿದರು.

ಕಡಿಮೆ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್‌ ಅಳವಡಿಸಿರುವ ಪ್ರದೇಶದಲ್ಲಿ ಲೋಡ್‌ ಹೆಚ್ಚಾಗುತ್ತಿದೆ. ಸಮರ್ಪಕ ವಿದ್ಯುತ್‌ ಪೂರೈಕೆಯಾಗದ ಕಾರಣ ಸೇವೆ ಒದಗಿಸಲು ತೊಂದರೆಯಾಗುತ್ತಿದೆ ಎಂದು ತಿಳಿಸಿದರು.

ಜೆಸ್ಕಾಂಗೆ ನಿಯಮಾನುಸಾರ ಶುಲ್ಕ ಪಾವತಿಸಿ ಹೊಸ ಟಿಸಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಇಂಡಸ್ ಟಾವರ್ ಪ್ರತಿನಿಧಿಗಳಿಗೆ ಸೂಚಿಸಿದರು.

ನಗರದಲ್ಲಿ ಜಿಯೊ ಟಾವರ್‌ ಅಳವಡಿಸಲು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಗುಣಮಟ್ಟದ ನೆಟ್‌ವರ್ಕ್‌ ಕೊಡಲು ಟಾವರ್‌ಗಳ ಅವಶ್ಯಕತೆ ಇದೆ. ಇದಕ್ಕೆ ಜಿಲ್ಲಾಡಳಿತದ ಸಹಕಾರ ಅಗತ್ಯವಿದೆ ಎಂದು ಜಿಯೊ ಕಂಪನಿ ಅಧಿಕಾರಿಗಳು ತಿಳಿಸಿದರು.

ಟಾವರ್ ಸ್ಥಾಪನೆಯಿಂದಾಗಿ ಯಾವ ತೊಂದರೆಯೂ ಇಲ್ಲ ಎಂದು ಜನರಿಗೆ ಮನವರಿಕೆ ಮಾಡಬೇಕು. ಆದರೂ ಜನ ಒಪ್ಪದಿದ್ದರೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈ ಬಗ್ಗೆ ಲಿಖಿತ ಮನವಿ ಸಲ್ಲಿಸಬೇಕು. ಅಧಿಕಾರಿಗಳ ಮೂಲಕ ಮನವರಿಕೆ ಮಾಡಿ ಟಾವರ್‌ ಸ್ಥಾಪನೆಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಜಿಲ್ಲಾ ಮಟ್ಟದ ಟೆಲಿಕಾಂ ಸಮನ್ವಯ ಸಮಿತಿ ಸದಸ್ಯರಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್., ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ನಗರಸಭೆ ಆಯುಕ್ತ ರವೀಂದ್ರನಾಥ ಅಂಗಡಿ, ಜೆಸ್ಕಾಂ ಎಂಜಿನಿಯರ್ ರಮೇಶ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.