ADVERTISEMENT

ಅಂಗಡಿ ಬೀದಿ: ಸಂಚಾರ ಬಲು ದುಸ್ತರ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 5:44 IST
Last Updated 23 ಅಕ್ಟೋಬರ್ 2017, 5:44 IST

ಚಾಮರಾಜನಗರ: ನಗರದ ಜನರ ಪಾಲಿಗೆ ದೊಡ್ಡ ಅಂಗಡಿ ಬೀದಿ ಶಾಪಿಂಗ್‌ ಕಾಂಪ್ಲೆಕ್ಸ್‌ ಇದ್ದಂತೆ. ಮಾಲ್‌ ಸಂಸ್ಕೃತಿ ಇನ್ನೂ ಪರಿಚಯವಾಗದ ಇಲ್ಲಿನ ಜನರಿಗೆ ನೆಚ್ಚಿನ ಖರೀದಿ ತಾಣವಿದು. ದೈನಂದಿನ ಬಳಕೆಯ ಸಾಮಗ್ರಿಗಳು, ಮನೆ, ಕಚೇರಿ ಬಳಕೆಯ ಅಗತ್ಯ ಮತ್ತು ಐಷಾರಾಮಿ ವಸ್ತುಗಳೆಲ್ಲವೂ ಸಾಲು ಸಾಲು ಅಂಗಡಿಗಳಲ್ಲಿ ಲಭ್ಯ.

ಆದರೆ, ಕಿರಿದಾಗಿರುವ ಮತ್ತು ಸಂಚಾರ ದಟ್ಟಣೆಯಿರುವ ಈ ಬೀದಿಯ ಒಳಹೊಕ್ಕು ಹೊರಬರುವುದು ಹರಸಾಹಸವೇ ಸರಿ. ಕಿತ್ತು ಹೋದ ರಸ್ತೆಯಿಂದ ಪಾದಚಾರಿಗಳು ಮತ್ತು ವಾಹನ ಸವಾರರು ಹೈರಾಣಾಗುತ್ತಿದ್ದಾರೆ.

ಈ ರಸ್ತೆಯಲ್ಲಿ ಗುಂಡಿಗಳು ಬಿದ್ದು ವರ್ಷಗಳೇ ಕಳೆದಿವೆ. ಅದನ್ನು ಮುಚ್ಚುವ ಕೆಲಸವನ್ನು ಅಧಿಕಾರಿಗಳು ಮಾಡಿಲ್ಲ ಎನ್ನುವುದು ಸ್ಥಳೀಯರ ಆರೋಪ.
ಇತ್ತೀಚೆಗೆ ಯುಜಿಡಿ ಕಾಮಗಾರಿಯಡಿ ಮ್ಯಾನ್‌ಹೋಲ್‌ಗೆ ಕೊಳವೆ ಅಳವಡಿಸಲು ರಸ್ತೆಯನ್ನು ಅಗೆಯಲಾಗಿತ್ತು.

ADVERTISEMENT

ಕೆಲಸ ಮುಗಿದ ಬಳಿಕ, ಮನಬಂದಂತೆ ಮಣ್ಣು ತುಂಬಿಸಿ ಹೋಗಿದ್ದಾರೆ. ಇದರಿಂದ ರಸ್ತೆಯಲ್ಲಿ ಹಳ್ಳಗಳು ಉಂಟಾಗಿದ್ದು, ಪಾದಚಾರಿಗಳು ಮತ್ತು ಬೈಕ್‌ ಸವಾರರು ಬಿದ್ದು ಗಾಯಗೊಂಡ ನಿದರ್ಶನಗಳಿವೆ.

‘ಯುಜಿಡಿ ಕಾಮಗಾರಿ ನಡೆಸಿದವರು ಹಾಕಿದ ಮಣ್ಣನ್ನೂ ಸಮತಟ್ಟು ಮಾಡಿಲ್ಲ. ಅಲ್ಲದೆ ಚೂಪಾದ ಕಲ್ಲುಗಳನ್ನು ಹಾಕಿದ್ದಾರೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ’ ಎಂದು ಸ್ಥಳೀಯರು ದೂರಿದರು.

‘ಸರಕು ಸಾಗಣೆ ಲಾರಿಗಳು ಬೆಳಿಗ್ಗೆ 7 ರಿಂದ9 ಗಂಟೆ ಬಂದು ಹೋಗಬೇಕು ಎಂಬ ನಿಯಮ ಮಾಡಿದ್ದಾರೆ. ಲಾರಿಗಳನ್ನು ನಿಲ್ಲಿಸಿ ಸರಕು ಇಳಿಸಲು ಸರಿಯಾದ ಜಾಗವಿಲ್ಲ. ತಡವಾದರೆ, ಸಂಜೆ 7 ಗಂಟೆವರೆಗೆ ಕಾಯಬೇಕು.

ಮಹಾರಾಷ್ಟ್ರ, ಬೆಳಗಾವಿ ಮುಂತಾದೆಡೆಯಿಂದ ಬರುವ ಲಾರಿಗಳಿಗೆ ವೇಟಿಂಗ್‌ ಚಾರ್ಜ್‌ ನೀಡುವಂತಾದರೆ ಹೆಚ್ಚುವರಿ ಹೊರೆಯಾಗುತ್ತದೆ. ಅದನ್ನು ನಾವು ಗ್ರಾಹಕರ ಮೇಲೆ ವರ್ಗಾಯಿಸಬೇಕಾಗುತ್ತದೆ’ ಎಂದು ವ್ಯಾಪಾರಿ ಪದ್ಮಪ್ರಸಾದ್‌ ತಿಳಿಸಿದರು.

‘ಇಕ್ಕಟ್ಟಾದ ರಸ್ತೆಯಲ್ಲಿ ಚಾಲನೆ ಮಾಡುವುದು ಕಷ್ಟ. ಎದುರಿನಿಂದ ಬೈಕ್‌ ಬಂದರೂ ತೆರಳಲು ಜಾಗವಿರುವುದಿಲ್ಲ. ಒಮ್ಮೊಮ್ಮೆ 100 ಅಡಿ ಚಲಿಸಲು ಅರ್ಧಗಂಟೆ ಬೇಕಾಗುತ್ತದೆ’ ಎಂದು ಲಾರಿ ಮಾಲೀಕ ಶಿವಣ್ಣ ಬೇಸರ ವ್ಯಕ್ತಪಡಿಸಿದರು.

ರಸ್ತೆ ವಿಸ್ತರಣೆ ಸಂಘರ್ಷ: ದೊಡ್ಡ ಅಂಗಡಿ ಬೀದಿಗೆ ಹಲವು ದಶಕಗಳ ಇತಿಹಾಸವಿದೆ. ತಲೆಮಾರುಗಳಿಂದಲೂ ನಗರದ ಜನರು ವ್ಯಾಪಾರ ವಹಿವಾಟಿಗೆ ಹೆಚ್ಚಾಗಿ ಇಲ್ಲಿಗೇ ಬರುತ್ತಾರೆ. ನಗರ ಬೆಳೆದಂತೆ ದಟ್ಟಣೆಯೂ ಹೆಚ್ಚುತ್ತದೆ. ಅಭಿವೃದ್ಧಿಯ ದೃಷ್ಟಿಯಿಂದ ಈಗಲೇ ಬೀದಿಯನ್ನು ವಿಸ್ತರಿಸಿದರೆ ಅನುಕೂಲವಾಗಲಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.

ನಗರೋತ್ಥಾನ ಯೋಜನೆಯಡಿ ಸಂತೇಮರಹಳ್ಳಿ ವೃತ್ತದಿಂದ ಚಿಕ್ಕ ಅಂಗಡಿ ಬೀದಿ, ದೊಡ್ಡ ಅಂಗಡಿ ಬೀದಿ ಮಾರ್ಗವಾಗಿ ಗುಂಡ್ಲುಪೇಟೆ ವೃತ್ತದವರೆಗೆ ₹2 ಕೋಟಿ ವೆಚ್ಚದಲ್ಲಿ 40 ಅಡಿಯ ರಸ್ತೆ ನಿರ್ಮಿಸಲು ಕ್ರಿಯಾ ಯೋಜನೆ ಸಿದ್ಧವಾಗಿದೆ.

ಬೆಂಗಳೂರಿನ ಚಿಕ್ಕಪೇಟೆ, ಬಳೆಪೇಟೆಯಂತಹ ಪ್ರಮುಖ ವ್ಯಾಪಾರಿ ಬೀದಿಗಳನ್ನೇ ಒಡೆದು ವಿಸ್ತರಣೆ ಮಾಡುತ್ತಿಲ್ಲ. ಹೀಗಿರುವಾಗ ಇಲ್ಲಿ ಒಡೆಯುವುದೇಕೆ? ಇರುವ ರಸ್ತೆಗೆ ಸರಿಯಾಗಿ ಡಾಂಬರು ಹಾಕಿ, ಚರಂಡಿ ನಿರ್ಮಿಸಿದರೆ ಸಾಕು ಎನ್ನುವುದು ಸ್ಥಳೀಯರ ವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.