ADVERTISEMENT

ಅಂಗವಿಕಲರನ್ನು ಮದುವೆಯಾದರೆ ಭತ್ಯೆ

ಪ್ರಜಾವಾಣಿ ವಿಶೇಷ
Published 20 ಸೆಪ್ಟೆಂಬರ್ 2013, 10:34 IST
Last Updated 20 ಸೆಪ್ಟೆಂಬರ್ 2013, 10:34 IST

ಚಾಮರಾಜನಗರ: ಅಂಗವಿಕಲರನ್ನು ಮದುವೆ ಆಗುವ ಸಾಮಾನ್ಯ ವ್ಯಕ್ತಿಗೆ ಪ್ರತಿ ತಿಂಗಳು ಭತ್ಯೆ ನೀಡುವ ಹೊಸ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ.

ಪ್ರಸಕ್ತ ಸಾಲಿನಡಿ ಈ ಯೋಜನೆಯ ಜತೆಗೆ ಶಿಶುಪಾಲನಾ ಭತ್ಯೆ, ಪ್ರತಿಭಾವಂತ ಅಂಗವಿಕಲ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹ ನೀಡುವ ಯೋಜನೆಗಳು ಕೂಡ ಜಾರಿಗೊಂಡಿವೆ. 2013-14ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಅಂಗವಿಕಲರ ಶ್ರೇಯೋಭಿವೃದ್ಧಿಗೆ ಹೊಸ ಕಾರ್ಯಕ್ರಮ ಘೋಷಿಸಿತ್ತು. ಇದರಲ್ಲಿ ಅಂಗವಿಕಲ ವ್ಯಕ್ತಿಯೊಂದಿಗೆ ಸಾಮಾನ್ಯ ವ್ಯಕ್ತಿ ವಿವಾಹವಾಗಲು ಉತ್ತೇಜಿಸಲು ಭತ್ಯೆ ನೀಡುವ ಯೋಜನೆಯೂ ಒಂದಾಗಿದೆ.

ಅಂಗವಿಕಲ ವ್ಯಕ್ತಿಯ ಹೆಸರಿನಲ್ಲಿ ₨ 50 ಸಾವಿರವನ್ನು ಸರ್ಕಾರ ಹೂಡಿಕೆ ಮಾಡಲಿದೆ. ಇದರಿಂದ ಬರುವ ಬಡ್ಡಿ ಹಣವನ್ನು ಅಂಗವಿಕಲರನ್ನು ಮದುವೆ ಆಗುವ ಸಾಮಾನ್ಯ ವ್ಯಕ್ತಿಯ ಭತ್ಯೆ ರೂಪದಲ್ಲಿ ಪ್ರತಿ ತಿಂಗಳು ಪಡೆಯಬಹುದು.
ಇತ್ತೀಚಿನ ದಿನಗಳಲ್ಲಿ ಅಂಗವಿಕಲರನ್ನು ಸಾಮಾನ್ಯ ವ್ಯಕ್ತಿಗಳು ವಿವಾಹವಾಗಲು ನಿರ್ಲಕ್ಷ್ಯವಹಿಸುತ್ತಿರುವುದು ಹೆಚ್ಚಿದೆ. ಈ ನಿಟ್ಟಿನಲ್ಲಿ, ಸಾಮಾನ್ಯ ವ್ಯಕ್ತಿಗಳು ಅಂಗವಿಕಲರೊಂದಿಗೆ ವೈವಾಹಿಕ ಜೀವನ ನಡೆಸಲು ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರ ಈ ಯೋಜನೆ ಜಾರಿಗೊಳಿಸಿದೆ.

ಪ್ರಸಕ್ತ ಸಾಲಿನಿಂದ ಅಂಗವಿಕಲ ಯುವಕ, ಯುವತಿಯರನ್ನು ಮದುವೆಯಾಗುವ ಸಾಮಾನ್ಯ ಯುವಕ, ಯುವತಿಯರಿಗೆ ನಿರಂತರವಾಗಿ ಮಾಸಿಕ ಆದಾಯ ದೊರಕಿಸಲು ಅಂಗವಿಕಲ ವ್ಯಕ್ತಿಯ ಹೆಸರಿನಲ್ಲಿ ₨ 50 ಸಾವಿರವನ್ನು ಸರ್ಕಾರ 5 ವರ್ಷದ ಅವಧಿಗೆ ಬ್ಯಾಂಕ್‌ನಲ್ಲಿ ಠೇವಣಿ ಇಡಲಿದೆ.

ಈ ಠೇವಣಿಯಿಂದ ಬರುವ ಬಡ್ಡಿ ಹಣವನ್ನು ಮದುವೆಯಾಗುವ ದಂಪತಿ ಅವರ ಜೀವನ ನಿರ್ವಹಣೆಗೆ ಉಪಯೋಗಿಸಬಹುದು.5 ವರ್ಷದ ನಂತರ ಠೇವಣಿ ಹಣ  ಪಡೆಯಲು ಅವಕಾಶವಿದೆ. ಜತೆಗೆ, ಮುಂದುವರಿಸಿ ಬಡ್ಡಿ ಕೂಡ ಪಡೆಯಬಹುದು. ಅರ್ಹ ಅಂಗವಿಕಲರಿಗೆ ಈ ಎಲ್ಲ ಯೋಜನೆಗಳ ಮಂಜೂರಾತಿ ಮಾಡುವ ಅಧಿಕಾರವನ್ನು ಜಿಲ್ಲೆಯ ಅಂಗವಿಕಲರ ಕಲ್ಯಾಣಾಧಿಕಾರಿಗೆ ನೀಡಲಾಗಿದೆ. ಅಂಗವಿಕಲರ ಕಲ್ಯಾಣಕ್ಕೆ ಜಾರಿಗೊಳಿಸಿರುವ ಈ ಹೊಸ ಕಾರ್ಯಕ್ರಮಗಳ  ಅನುಷ್ಠಾನಗೊಳಿಸುವ ಪ್ರಕ್ರಿಯೆಗೆ ಇಲಾಖೆಯೂ ಸಿದ್ಧವಾಗಿದೆ.

‘ಪ್ರಸ್ತಾವನೆ ಸ್ವೀಕರಿಸಿ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತದೆ. ಜಿಲ್ಲೆಯಲ್ಲಿ ಅಂಗವಿಕಲರು ನೂತನ ಯೋಜನೆಗಳ ಸೌಲಭ್ಯ ಪಡೆಯುವ ದಿಸೆಯಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಮೂಲಕ ತಾಲ್ಲೂಕುಗಳಲ್ಲಿ ಮಾಹಿತಿ ನೀಡಲಾಗುತ್ತಿದೆ. ಅರ್ಹರು ಇಲಾಖೆಯ ಜಿಲ್ಲಾ ಕಚೇರಿ ಸಂಪರ್ಕಿಸಿ ಮಾಹಿತಿ ಮತ್ತು ಯೋಜನೆಯ ಪ್ರಯೋಜನ ಪಡೆಯಲು ಅವಕಾಶ ಕಲ್ಪಿಸಲಾಗಿದೆ’ ಎನ್ನುತ್ತಾರೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎಚ್‌.ಕೆ. ರೇವಣೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.