ADVERTISEMENT

ಅಂಚೆ ಇಲಾಖೇತರ ನೌಕರರ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 7:35 IST
Last Updated 18 ಅಕ್ಟೋಬರ್ 2012, 7:35 IST

ಚಾಮರಾಜನಗರ: ಸೇವೆ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಮಂಗಳವಾರ ಅಖಿಲ ಭಾರತ ಅಂಚೆ ಇಲಾಖೇತರ ನೌಕರರ ಸಂಘದಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.

ಅಂಚೆ ಕಚೇರಿಯಿಂದ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿದ ನೌಕರರು, ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನ್ಯಾ.ತಲವಾರ್ ಸಮಿತಿ ನೀಡಿರುವ ವರದಿ ಅನ್ವಯ 5ಗಂಟೆಗಿಂತಲೂ ಹೆಚ್ಚು ಅವಧಿವರೆಗೆ ಕೆಲಸ ಮಾಡುವ ನೌಕರರನ್ನು ಕಾಯಂಗೊಳಿಸಬೇಕು. ಅನುಕಂಪದ ಆಧಾರದ ಮೇಲೆ ತೆಗೆದುಕೊಳ್ಳುವ ನೌಕರರಿಗೆ ಈಗಿರುವ ಪದ್ಧತಿ ಕೈಬಿಟ್ಟು ಹಿಂದಿನಂತೆ ಎಲ್ಲ ವಾರಸುದಾರರಿಗೆ ಉದ್ಯೋಗ ನೀಡಬೇಕು.
 
ಅಂಚೆ ಪೇದೆ ಮತ್ತು ಎಂಟಿಎಸ್ ಕೆಲಸಕ್ಕೆ ಇಲಾಖೇತರ ನೌಕರರನ್ನು ಸೇವಾ ಜ್ಯೇಷ್ಠತೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬೇಕು. ಖಾಲಿ ಇರುವ ಇಲಾಖೇತರ ನೌಕರರ ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಕಾಲದಲ್ಲಿ ವೇತನ ಪಾವತಿ ಮಾಡಬೇಕು. ತಡೆಹಿಡಿದಿರುವ ವೇತನವನ್ನು ಮರುಪಾವತಿ ಮಾಡಬೇಕು. ಶೀಘ್ರವೇ, ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಸಚಿವ ಸಂಪುಟದ ಅನುಮೋದನೆ ಪಡೆಯಬೇಕು. ದಿನಗೂಲಿ ನೌಕರರಿಗೆ 2006ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಿಸಿ ಎಲ್ಲ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.

ಸಂಘದ ಮುಖಂಡರಾದ ಶೇಖಣ್ಣ, ಎನ್.ಬಿ. ಕುಮಾರ್, ಚಿಕ್ಕಲಿಂಗಪ್ಪ, ಶಿವಣ್ಣ, ನಿಜಲಿಂಗಮೂರ್ತಿ, ರಾಜಣ್ಣ, ಸುಬ್ಬಣ್ಣ, ಮಹೇಶ್, ರಾಜಪ್ಪ, ನಟರಾಜು, ನಾಗೇಂದ್ರ, ರಾಜಮ್ಮ, ಗಾಯತ್ರಿದೇವಿ, ಉಮಾ ಸೇರಿದಂತೆ ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ, ತಿ. ನರಸೀಪುರದ ಗ್ರಾಮೀಣ ಅಂಚೆ ನೌಕರರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.