ADVERTISEMENT

ಅಧಿಕಾರಿಗಳ ಗೈರು: ಜಿ.ಪಂ ಅಧ್ಯಕ್ಷೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 9:15 IST
Last Updated 14 ಜೂನ್ 2011, 9:15 IST
ಅಧಿಕಾರಿಗಳ ಗೈರು: ಜಿ.ಪಂ ಅಧ್ಯಕ್ಷೆ ಆಕ್ರೋಶ
ಅಧಿಕಾರಿಗಳ ಗೈರು: ಜಿ.ಪಂ ಅಧ್ಯಕ್ಷೆ ಆಕ್ರೋಶ   

ಚಾಮರಾಜನಗರ: ಕೆಡಿಪಿ ಸಭೆಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ಇಲ್ಲ ಸಲ್ಲದ ಸಬೂಬು ಹೇಳಿ ಗೈರು ಹಾಜರಾಗುವುದನ್ನು ಸಹಿಸುವುದಿಲ್ಲ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ. ರಾಜೇಶ್ವರಿ ಎಚ್ಚರಿಸಿದರು.

ಜಿಲ್ಲಾಡಳಿತ ಭವನದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಗತಿ ಪರಿಶೀಲನಾ ಸಭೆಗೆ ಎಲ್ಲಾ ಇಲಾಖೆ ಅಧಿಕಾರಿಗಳು ಹಾಜರಾಗಿಲ್ಲ. ಅಧಿಕಾರಿಗಳು ಸಭೆಗೆ ಭಾಗವಹಿಸಿದಲ್ಲಿ ಮಾತ್ರ ಸಭೆ ನಡೆಯಲಿದೆ, ಇಲ್ಲದಿದ್ದರೆ ಸಭೆ ನಡೆಸುವುದರಲ್ಲಿ ಅರ್ಥವಿಲ್ಲ. ಸಭೆಯನ್ನು ಮುಂದೂಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆ ಆರಂಭಗೊಳ್ಳುತ್ತಿದ್ದಂತೆ ಖಾಲಿ ಕುರ್ಚಿಗಳನ್ನು ನೋಡಿದ ಅಧ್ಯಕ್ಷೆ, `ಎರಡು ಸಭೆಗಳಿಂದಲೂ ಕೆಲವು ಅಧಿಕಾರಿಗಳು ಸಭೆಗೆ ಗೈರು ಹಾಜರಾಗುತ್ತಿದ್ದಾರೆ ಅವರ ಬಗ್ಗೆ ಏನ್ ಕ್ರಮ ತಗೊಂಡಿದ್ದಿರಾ? ಅಧ್ಯಕ್ಷರು ಮುಗ್ದೆ ಎಂದು ನಿರ್ಲಕ್ಷ್ಯೆವಹಿಸುತ್ತಿದ್ದಿರಾ?~ ಎಂದು ಪ್ರಭಾರ ಸಿಇಓ ಅವರನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಇಓ ಗೂಡೂರು ಭೀಮಸೇನ, `ಜಲಾನಯನ ಅಭಿವೃದ್ಧಿ ಇಲಾಖೆ ಅಧಿಕಾರಿ ಸಂಬಂಧಿಕರೊಬ್ಬರು ಮೃತಪಟ್ಟಿದ್ದಾರೆ. ಆಗಾಗಿ ಅವರಿಗೆ ರಜೆ ನೀಡಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಿಲ್ಲಾಧಿಕಾರಿ ಜತೆ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಉಳಿದವರು ಅನುಮತಿ ಕೇಳಿಲ್ಲ.~ ಎಂದು  ಉತ್ತರಿಸಿದರು.

`ಉಳಿದ ಇಲಾಖೆಯ ಎಲ್ಲಾ ಅಧಿಕಾರಿಗಳು ಸಭೆಗೆ ಹಾಜರಾಗಿರುವುದರಿಂದ ಸಭೆ ನಡೆಸಬಹುದು. ಸಭೆಗೆ ಗೈರು ಹಾಜರಾಗಿರುವ ಅಧಿಕಾರಿಗಳಿಂದ ವಿವರಣೆ ಪಡೆಯಲಾಗುವುದು. ತುರ್ತು ಸಭೆ ಇದ್ದಲ್ಲಿ ಲಿಖಿತವಾಗಿ  ತಿಳಿಸಬೇಕು, ಜಿ.ಪಂ. ಕೆಡಿಪಿ ಸಭೆ ನಡೆಯುವ ದಿನಗಳಂದು ಯಾವುದೇ ಸಭೆಗಳನ್ನು ನಡೆಸಬಾರದು~ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇದೇ ವೇಳೆ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಪಿ. ಪುಟ್ಟಬುದ್ದಿ ಮಾತನಾಡಿ, ಗ್ರಾಮ ಸಭೆಗಳಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೂಡೂರು ಭೀಮಸೇನ, ಇನ್ನು ಮುಂದೆ ಜಿಲ್ಲಾ ಪಂಚಾಯತ್ ಸಭೆಗಳಿಗೆ ತುರ್ತು ಅಥವಾ ಕಾರ್ಯನಿಮಿತ್ತ ಗೈರು ಹಾಜರಾಗಬೇಕಾದ ಸಂದರ್ಭದಲ್ಲಿ ಅಧ್ಯಕ್ಷರು ಹಾಗೂ ಸಿಇಓ ಅವರಿಂದ ಪೂರ್ವಾನುಮತಿ ಪಡೆಯಬೇಕು. ಇಲ್ಲವಾದಲ್ಲಿ ನಿಯಮದ ಪ್ರಕಾರ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಾವಿರಾರು ಪ್ರವಾಸಿಗರು ಆಗಮಿಸುವ ಮಲೆಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಕೇಂದ್ರ ಸ್ಥಾನದಲ್ಲೇ ವಾಸ್ತವ್ಯ ಹೂಡಿದ್ದಾರೆ. ಆದರೆ ವಸತಿ ವ್ಯವಸ್ಥೆ ಇಲ್ಲವಾದ್ದರಿಂದ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಪುಟ್ಟಬುದ್ದಿ ಸಭೆ ಗಮನಕ್ಕೆ ತಂದರು.

ಕುಡಿಯುವ ನೀರು ಹಾಗೂ ಗಂಗಾ ಕಲ್ಯಾಣ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸವನ್ನು ಸೆಸ್ಕ್ ವಿಳಂಬ ಮಾಡುತ್ತಿದೆ. ಈ ಕಾರ್ಯ ತ್ವರಿತಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಉಪಾಧ್ಯಕ್ಷ ಸಿದ್ದರಾಜು ತಿಳಿಸಿದರು.

ಸಂಪೂರ್ಣ ಸ್ವಚ್ಛತಾ ಆಂದೋಲನಾ ಕುರಿತು ಸಭೆಯಲ್ಲಿ ವಿವರವಾದ ಚರ್ಚೆ ನಡೆಯಿತು. ಇದೇ ವೇಳೆ ಮಾತನಾಡಿದ ಮುಖ್ಯ ಯೋಜನಾಧಿಕಾರಿ ವೇಣುಗೋಪಾಲ್, ಸ್ವಚ್ಛತಾ ಆಂದೋಲನಾ ಕಾರ್ಯಕ್ರಮಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಆದರೆ ಕೆಲ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ.

ಆರೋಗ್ಯ ಇಲಾಖೆ ಅಧಿಕಾರಿಗಳು ನಿರೀಕ್ಷೆಗೆ ತಕ್ಕಂತೆ ಸ್ಪಂದಿಸಬೇಕು, ಇತರೆ ಇಲಾಖೆ ಅಧಿಕಾರಿಗಳು ಸ್ವಚ್ಛತಾ ಆಂದೋಲನಾ ಸಂಬಂಧ ನಡೆಯುವ ಸಭೆಗೆ ತಪ್ಪದೆ ಹಾಜರಾಗುವ ಮೂಲಕ ಕಾರ್ಯಕ್ರಮ ಅನುಷ್ಠಾನಕ್ಕೆ ಕೈ ಜೋಡಿಸಬೇಕು ಎಂದರು.

ಪಡಿತರ ಚೀಟಿಗಳ ಗಣಕೀಕರಣಗೊಳಿಸುವ ಪಂಚತಂತ್ರ ಯೋಜನೆಗೆ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ವಿಳಂಬ ಮಾಡದೇ, ಶೀಘ್ರವಾಗಿ ಕೆಲಸ ಪೂರ್ಣಗೊಳಿಸಬೇಕು ಎಂದು ಭಿಮಸೇನಾ ಸೂಚಿಸಿದರು.

ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶು ಸಂಗೋಪನೆ, ಖಾದಿ ಮತ್ತು ಗ್ರಾಮೋದ್ಯೋಗ ಸೇರಿದಂತೆ ಇನ್ನೀತರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಮಹದೇವ, ಅಂಬಿಕಾ, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.