ADVERTISEMENT

ಆತಂಕ ಸೃಷ್ಟಿಸಿದ ಎಚ್‌ಐವಿ ಸೋಂಕಿತರ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 7:15 IST
Last Updated 4 ಫೆಬ್ರುವರಿ 2011, 7:15 IST

ವಿಶೇಷ ವರದಿ
ಚಾಮರಾಜನಗರ:
ಗಡಿ ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಆತಂಕ ಸೃಷ್ಟಿಸಿದೆ.2012ರೊಳಗೆ ಎಚ್‌ಐವಿ ಹರಡುವ ಪ್ರಮಾಣ ತಗ್ಗಿಸಲು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯ ಕ್ರಮ-3(ಎನ್‌ಎಸಿಪಿ-3) ಅನುಷ್ಠಾನಗೊಂಡಿದೆ. ಇದರಡಿ ಜಾರಿಗೊಳಿಸಿರುವ ನಿಯಂತ್ರಣ ಕ್ರಮಗಳ ನಡುವೆಯೂ ತಹಬಂದಿಗೆ ಬಂದಿಲ್ಲ. ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದೊಂದಿಗೆ ಸ್ವಯಂಸೇವಾ ಸಂಸ್ಥೆಗಳು ಕೂಡ ಎಚ್‌ಐವಿ ಸೋಂಕು ತಡೆಗೆ ದುಡಿಯುತ್ತಿವೆ. ಆದರೆ, ಸಾರ್ವ ಜನಿಕರಲ್ಲಿರುವ ಅರಿವಿನ ಕೊರತೆ ಏಡ್ಸ್ ಮಾರಿಯನ್ನು ಆಹ್ವಾನಿಸುತ್ತಿದೆ.

ಕಳೆದ ವರ್ಷ ಜಿಲ್ಲೆಯಲ್ಲಿ ಒಟ್ಟು 13,547 ಮಂದಿಗೆ ಆಪ್ತ ಸಮಾಲೋಚನೆ ಮತ್ತು ಎಚ್‌ಐವಿ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 429 ಮಂದಿ ಸೋಂಕಿಗೆ ತುತ್ತಾಗಿರುವ ಅಂಶ ಬಯಲಿಗೆ ಬಂದಿದೆ. 10,646 ಗರ್ಭಿಣಿಯರನ್ನು ಆಪ್ತ ಸಮಾಲೋಚನೆ ಮತ್ತು ಎಚ್‌ಐವಿ ಪರೀಕ್ಷೆಗೆ ಒಳಪಡಿಸಿದ್ದು, 22 ಮಹಿಳೆಯರಿಗೆ ಎಚ್‌ಐವಿ ಸೋಂಕು ಇದೆ. ಈ ಅಂಕಿ- ಅಂಶ ಅವಲೋಕಿಸಿದರೆ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಕಳವಳಕಾರಿ ಯಾಗಿದೆ.

ಜಿಲ್ಲೆಯಲ್ಲಿ ಏಡ್ಸ್ ಮತ್ತು ಎಚ್‌ಐವಿ ಸೋಂಕಿತರ ಸಂಖ್ಯೆ ಸುಮಾರು 2 ಸಾವಿರದಷ್ಟಿದೆ. ಗ್ರಾಮೀಣ ಪ್ರದೇಶದಲ್ಲೂ ರೋಗಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚಿದೆ. ಜತೆಗೆ, ಸಾಮಾ ಜಿಕ ಸ್ಥಾನಮಾನದ ಹಿನ್ನೆಲೆಯಲ್ಲಿ ಎಚ್‌ಐವಿ ಸೋಂಕು ಇರುವ ಬಗ್ಗೆ ಯಾರೊಬ್ಬರು ಬಾಯಿಬಿಡುವುದಿಲ್ಲ. ಸ್ವಯಂಪ್ರೇರಿತ ಆಪ್ತ ಸಮಾಲೋಚನೆ, ರಕ್ಷ ಪರೀಕ್ಷೆ (ಐಸಿಟಿಸಿ) ಹಾಗೂ ತಾಯಿಯಿಂದ ಮಗುವಿಗೆ ಎಚ್‌ಐವಿ ಹರಡುವುದನ್ನು ತಡೆಗಟ್ಟುವ ಕೇಂದ್ರ (ಪಿಪಿಟಿಸಿಟಿ)ಗಳಿಗೂ ಬರಲು ಹಿಂದೇಟು ಹಾಕುತ್ತಿದ್ದಾರೆ.

ಜಲ್ಲಾ ಏಡ್ಸ್ ನಿಯಂತ್ರಣ ಘಟಕ ಹಾಗೂ ಸ್ವಯಂಸೇವಾ ಸಂಸ್ಥೆಗಳ ಕಾರ್ಯಕರ್ತರು ಸೋಂಕಿತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿವೆ. ಆದರೆ, ಹಿಂಜರಿಕೆ ಪರಿಣಾಮ ರೋಗಿಗಳು ಹಿಂದೇಟು ಹಾಕುವುದೇ ಹೆಚ್ಚು.ಇನ್ನೂ ಎಚ್‌ಐವಿ ಸೋಂಕಿತರ ಮಕ್ಕಳ ಸ್ಥಿತಿಯೂ ಕರುಣೆ ಹುಟ್ಟಿಸುತ್ತದೆ. ಪೋಷಕರ ಹಿಂಜರಿಕೆ ಮಕ್ಕಳ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ದುರಂತವೆಂದರೆ ಈ ಮಕ್ಕಳಿಗೆ ಸರ್ಕಾರದಿಂದ ಪ್ರೋಟಿನ್‌ಯುಕ್ತ ಆಹಾರ ನೀಡುವ ಕಾರ್ಯಕ್ರಮ ಅನುಷ್ಠಾನಗೊಂಡಿಲ್ಲ. ಏಡ್ಸ್‌ಪೀ ಡಿತರ ಪರವಾಗಿ ಕೆಲಸ ಮಾಡುವಂಥ ಸಂಸ್ಥೆಗಳು ಈ ಬಗ್ಗೆ ಸರ್ಕಾರಕ್ಕೆ ಒತ್ತಾಯಿಸುತ್ತಲೇ ಬಂದಿವೆ. ಬೇಡಿಕೆ ಮಾತ್ರ ಈಡೇರಿಲ್ಲ.

ಪ್ರಸ್ತುತ ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿತರ 450 ಮಕ್ಕಳನ್ನು ಗುರುತಿಸಲಾಗಿದೆ. ಇದರಲ್ಲಿ ಕೆಲವು ಚಿಣ್ಣರು ಸೋಂಕಿಗೆ ತುತ್ತಾಗಿದ್ದಾರೆ. ಪ್ರತಿ ಮಗುವಿಗೂ ಗ್ರಾಮ ಪಂಚಾಯಿತಿಯಿಂದ ಮಾಸಿಕವಾಗಿ ಹಣಕಾಸಿನ ನೆರವು ನೀಡುವಂಥ ಯೋಜನೆಯಿದೆ. ಸೋಂಕಿತ ಮಗುವಿಗೆ 950 ರೂ ನೀಡಲಾಗುತ್ತದೆ. ತಂದೆ- ತಾಯಿ ಸೋಂಕಿಗೆ ತುತ್ತಾಗಿದ್ದರೂ ಕೆಲವೊಮ್ಮೆ ಮಗುವಿಗೆ ಸೋಂಕು ತಗುಲಿರು ವುದಿಲ್ಲ. ಅಂಥ ಮಕ್ಕಳಿಗೂ 850 ರೂ ನೀಡಲಾಗುತ್ತದೆ.

ಆ ಮಗುವಿಗೆ 18ವರ್ಷ ತುಂಬುವವರೆಗೂ ಆರ್ಥಿಕ ನೆರವು ನೀಡುವುದು ಸ್ಥಳೀಯ ಸಂಸ್ಥೆಗಳ ಹೊಣೆ. ಆದರೆ, ನೆರವು ಪಡೆಯಲು ಮಕ್ಕಳ ಪೋಷಕರು ಮನಸ್ಸು ಮಾಡುತ್ತಿಲ್ಲ. ಗ್ರಾಮದಲ್ಲಿ ಸೋಂಕಿರುವ ಸುದ್ದಿ ತಿಳಿದರೆ ತಿರಸ್ಕಾರದಿಂದ ನೋಡುತ್ತಾರೆಂಬುದು ಅವರ ಆತಂಕಕ್ಕೆ ಮೂಲ ಕಾರಣ.ಜಿಲ್ಲೆಯಲ್ಲಿ 2002ರಲ್ಲಿ ಪ್ರಥಮ ಆಪ್ತ ಸಮಾಲೋಚನಾ ಕೇಂದ್ರ ತೆರೆಯಲಾಗಿದೆ. ಪ್ರಸ್ತುತ 15 ಕೇಂದ್ರ  ಕಾರ್ಯ ನಿರ್ವಹಿಸುತ್ತಿವೆ. ತಾಯಿಯಿಂದ ಮಗುವಿಗೆ ಎಚ್‌ಐವಿ ಹರಡುವುದನ್ನು ತಡೆಗಟ್ಟಲು ಗರ್ಭಿಣಿಯರಿಗೆ ‘ನೆವರಪಿನ್’ ಔಷಧಿ ನೀಡಲಾಗುತ್ತಿದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಈ ಔಷಧಿಯ ನಿರ್ವಹಣೆಗೆ ನುರಿತ ಸಿಬ್ಬಂದಿ ಇದ್ದಾರೆ.

‘ಎಚ್‌ಐವಿ ಸೋಂಕಿತರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಾಗುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ ಏಡ್ಸ್ ಮತ್ತು ಎಚ್‌ಐವಿ ಸೋಂಕಿತರ 8 ಸ್ವಸಹಾಯ ಸಂಘ ರಚಿಸಲಾಗಿದೆ. ಕೆಲವು ಸಂಘಗಳಲ್ಲಿ 6ರಿಂದ 7 ಸಾವಿರ ರೂಪಾಯಿವರೆಗೂ ಉಳಿತಾಯವಾಗಿದೆ. ಯುವಜನರು ಅರಿವು ಹೊಂದಿದರೆ ಈ ರೋಗಕ್ಕೆ ತುತ್ತಾಗುವವರ ಸಂಖ್ಯೆಯನ್ನು ಕಡಿಮೆಗೊಳಿಸ ಬಹುದು’ ಎನ್ನುತ್ತಾರೆ ಚೈತನ್ಯ ನೆಟ್‌ವರ್ಕ್‌ನ ಭಾಗ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT