ADVERTISEMENT

ಕಣ್ಣೇಗಾಲ: ಬಾಗಿಲು ತೆರೆಯದ ಉಪ ಆರೋಗ್ಯ ಕೇಂದ್ರ

ಆರೋಗ್ಯ ತಪಾಸಣೆಗೆ ಅಲೆದಾಡುತ್ತಿರುವ ಗ್ರಾಮಸ್ಥರು: ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಮೇ 2018, 10:39 IST
Last Updated 22 ಮೇ 2018, 10:39 IST
ಸಂತೇಮರಹಳ್ಳಿ ಸಮೀಪದ ಕಣ್ಣೇಗಾಲ ಗ್ರಾಮದಲ್ಲಿ ಮುಚ್ಚಿರುವ ಉಪ ಆರೋಗ್ಯ ಕೇಂದ್ರ
ಸಂತೇಮರಹಳ್ಳಿ ಸಮೀಪದ ಕಣ್ಣೇಗಾಲ ಗ್ರಾಮದಲ್ಲಿ ಮುಚ್ಚಿರುವ ಉಪ ಆರೋಗ್ಯ ಕೇಂದ್ರ   

ಸಂತೇಮರಹಳ್ಳಿ: ಸಮೀಪದ ಕಣ್ಣೇಗಾಲ ಗ್ರಾಮದಲ್ಲಿರುವ ಉಪ ಆರೋಗ್ಯ ಕೇಂದ್ರವನ್ನು ತೆರೆಯದ ಪರಿಣಾಮ ಪಾಳು ಬಿದ್ದಿದ್ದು, ಆರೋಗ್ಯ ತಪಾಸಣೆಗೆ ಜನರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವಂತಾಗಿದೆ.

ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಟ್ಟಿರುವ ಈ ಆರೋಗ್ಯ ಕೇಂದ್ರವನ್ನು ಸುತ್ತಮುತ್ತಲಿನ ಗ್ರಾಮಗಳ ರೋಗಿಗಳ ಅನುಕೂಲಕ್ಕಾಗಿ ಆರೋಗ್ಯ ಇಲಾಖೆ ವತಿಯಿಂದ 10 ವರ್ಷದ ಹಿಂದೆ ಆರಂಭಿಸಲಾಯಿತು. ಆದರೆ, ಸರಿಯಾಗಿ ವೈದ್ಯರು ಬರುತ್ತಿಲ್ಲ. ಅಲ್ಲದೇ 2 ವರ್ಷಗಳಿಂದ ಇಲ್ಲಿಗೆ ಕಾಯಂ ನರ್ಸ್‌ಗಳನ್ನು ಆರೋಗ್ಯ ಇಲಾಖೆ ನೇಮಿಸಿಲ್ಲ. ತಾತ್ಕಾಲಿಕವಾಗಿ ನೇಮಕವಾದವರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಾರೆ.  ಹೀಗಾಗಿ ಆಗೊಮ್ಮೆ ಈಗೊಮ್ಮೆ ಮಾತ್ರ ಉಪ ಕೇಂದ್ರದ ಬಾಗಿಲು ತೆರೆಯಲಾಗುತ್ತದೆ. ಇದರಿಂದ ರೋಗಿಗಳಿಗೆ ಚಿಕಿತ್ಸೆ ಸಿಗದಂತಾಗಿದೆ.

ಕಣ್ಣೇಗಾಲ, ಸಿಂಗನಪುರ, ಆಲೂರು ಹೊಮ್ಮ, ಕೆಂಪನಪುರ ಗ್ರಾಮದ ರೋಗಿಗಳು ದೂರದ ಚಾಮರಾಜನಗರ ಹಾಗೂ ಯಳಂದೂರು ಪಟ್ಟಣಕ್ಕೆ ತೆರಳಿ ಚಿಕಿತ್ಸೆ ಪಡೆಯಬೇಕಾಗಿದೆ. ಆಗಾಗ್ಗೆ ವೈದ್ಯಾಧಿಕಾರಿಗಳು ಈ ಉಪ ಕೇಂದ್ರಕ್ಕೆ ಭೇಟಿ ನೀಡಬೇಕು. ಆದರೆ ಇದುವರೆಗೂ ಇತ್ತ ತಿರುಗಿ ನೋಡಿಲ್ಲ. ಜಿಲ್ಲಾ ಆರೋಗ್ಯ ಇಲಾಖೆಯವರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ADVERTISEMENT

ಉಪ ಆರೋಗ್ಯ ಕೇಂದ್ರ ನಿರ್ವಹಣೆ ಇಲ್ಲದ ಪರಿಣಾಮ ಸುತ್ತಲೂ ಕಳೆ ಗಿಡ–ಗಂಟಿಗಳು ಬೆಳೆದು ನಿಂತಿವೆ. ಗಾಳಿಯ ಕಿಟಕಿ ಬಾಗಿಲುಗಳು ಅಭದ್ರವಾಗಿವೆ. ಪ್ರತಿದಿನ ರೋಗಿಗಳಿಗೆ ಚಿಕಿತ್ಸೆಯೂ ದೊರೆಯುತ್ತಿಲ್ಲ. ಕಟ್ಟಡದ ನಿರ್ವಹಣೆಯೂ ಇಲ್ಲದಂತಾಗಿದೆ ಎಂದು ಅಲ್ಲಿಯ ಪರಿಸ್ಥಿತಿ ವಿವರಿಸಿದರು ಸಾರ್ವಜನಿಕರು.

ಗರ್ಭಿಣಿ ಹಾಗೂ ಬಾಣಂತಿಯರು ಚಿಕಿತ್ಸೆ ಪಡೆದುಕೊಳ್ಳಲು ಖಾಸಗಿ ಆಸ್ಪತ್ರೆಗಳತ್ತ ತೆರಳಬೇಕಾಗಿದೆ. ಸುತ್ತಮುತ್ತಲಿನ ಗ್ರಾಮದ ರೋಗಿಗಳ ಅನುಕೂಲಕ್ಕಾಗಿ ಆರೋಗ್ಯ ಉಪಕೇಂದ್ರವನ್ನು ತೆರೆಯಬೇಕು ಎಂದು ಗ್ರಾಮಸ್ಥರಾದ ಸ್ವಾಮಿ, ಶಂಕರ್ ಒತ್ತಾಯಿಸಿದ್ದಾರೆ.

ಸಮಸ್ಯೆ ಬಗ್ಗೆ ಪ್ರತಿಕ್ರಿಯೆ ಗಾಗಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಶ್ರೀನಿವಾಸ್‌ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.