ADVERTISEMENT

ಕಲಾವಿದರ ಕುಣಿತಕ್ಕೆ ಬೆರಗಾದ ಸೂರ್ಯ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2011, 8:00 IST
Last Updated 25 ಮಾರ್ಚ್ 2011, 8:00 IST

ಚಾಮರಾಜನಗರ: ನೇಸರ ನೆತ್ತಿಯ ಮೇಲೆ ಬಂದಿದ್ದ. ಮೋಡದ ಮರೆಯಲ್ಲಿ ಅವಿತು ಕುಳಿತುಕೊಳ್ಳಲು ಹಿಂದೇಟು ಹಾಕಿದ. ಅರೆಕ್ಷಣದಲ್ಲಿ ಮಹದೇಶ್ವರ ಕ್ರೀಡಾಂಗಣ ಕೆಂಡವಾ ಯಿತು. ಸುಡುಬಿಸಿಲಿನ ನಡುವೆ ಗಡಿನಾಡ ಜನರು ನೆರಳಿನ ಆಸರೆಯತ್ತ ಹೆಜ್ಜೆ ಇಟ್ಟಿದ್ದರು. ಆ ನಡುವೆಯೇ ಜಾನಪದದ ನಿನಾದ ಕೇಳಿಸಿತು!

ಬೆರಗುಗಣ್ಣಿನಿಂದ ಕ್ರೀಡಾಂಗಣದ ಗೇಟ್‌ನತ್ತ ಜನರ ನೋಟ ಹೊರಳಿತು. ಡೊಳ್ಳಿನ ಶಬ್ದ ಕಿವಿಗೆ ರಿಂಗಾಣಿಸಿತು. ಅದರ ಹಿಂದೆಯೇ ಕರಡಿ ಮಜಲು ಅನುರಣಿಸಿತು. ದೂರದ ರಾಣೇಬೆನ್ನೂರಿನಿಂದ ಬಂದಿದ್ದ  ಪುರವಂತಿಕೆ ಕಲಾವಿದರ ವೇಷಕ್ಕೆ ಜನರು ಮಾರುಹೋದರು. ಅವರ ಪಕ್ಕದಲ್ಲಿಯೇ ಉಡುಪಿಯಿಂದ ಬಂದಿದ್ದ ಭೂತದ ಕೋಲ ಕಲಾವಿದರ ನೃತ್ಯಕ್ಕೆ ಮನಸೋತರು.

ಗಾಡಿ ಗೊಂಬೆಯ ಕುಣಿತಕ್ಕೆ ಶಾಲಾ ಮಕ್ಕಳು ಬೆಕ್ಕಸ ಬೆರಗಾದರು. ಗೊಂಬೆಯ ಹಿಂದೆಯೇ ಮೈಗೆಲ್ಲಾ ಹಳದಿ ಬಣ್ಣ ಬಳಿದುಕೊಂಡು ಬಾಯಲ್ಲಿ ನಿಂಬೆಹಣ್ಣು ಕಚ್ಚಿಕೊಂಡು ಕುಣಿಯುತ್ತಿದ್ದ ಹುಲಿ ವೇಷಧಾರಿಗಳನ್ನು ಕಂಡ ಮಕ್ಕಳ ಹೃದಯದ ಬಡಿತ ಹೆಚ್ಚಿತು. ಕರಡಿ ಮಜಲು, ಡೊಳ್ಳಿನ ಶಬ್ದಕ್ಕೆ ನೆರೆದಿದ್ದವರು ಮನದಲ್ಲಿಯೇ ಕುಣಿದರು. ಕಂಸಾಳೆ ಪ್ರದರ್ಶನಕ್ಕೆ ಮನದಲ್ಲೇ ವಂದಿಸಿದರು.

19 ಜಿಲ್ಲೆಗಳಿಂದ ಬಂದಿದ್ದ ವಿವಿಧ ಜಾನಪದ ಕಲಾ ತಂಡದ ಸದಸ್ಯರ ಕುಣಿತಕ್ಕೆ ಬಿಸಿಲು ಕೂಡ ಸೋತಿತು. ಕಲಾವಿದರು ಬರಿಗಾಲಿನಲ್ಲಿಯೇ ಹೆಜ್ಜೆ ಹಾಕಿದರು. ಅವರ ನೃತ್ಯಕ್ಕೆ ಸೋತು ಹೋದ ಕ್ರೀಡಾಂಗಣವೂ ತಣ್ಣಗಾಯಿತು. ಗಡಿನಾಡಿನಲ್ಲಿ ಸಾಂಸ್ಕೃತಿಕ ರಸದೌತಣ ಉಣಬಡಿಸಲು ದೂರದ ಬಾಗಲಕೋಟೆಯಿಂದ ಕರಡಿ ಮಜಲು ಕುಣಿತದ ಸಂಗಪ್ಪ ಚನ್ನೂರು ಬಂದಿದ್ದರು. ಮಂಗಳೂರಿನ ತಂಗಿಲ್ ಕುಣಿತದೊಂದಿಗೆ ಸ್ಥಳೀಯ ಗೊರವರ ಕಲಾವಿದರು ಜನರಿಗೆ ಮೋಡಿ ಮಾಡಿದರು.

ಒಂದು ಗಂಟೆಯಷ್ಟು ಕಾಲ ತಡವಾಗಿ ಉತ್ಸವ ಆರಂಭವಾದರೂ ಜಾನಪದ ಕಲಾವಿದರ ಆಗಮನ ಜನರಲ್ಲಿ ಉತ್ಸಾಹ ತಂದಿತು. ಅತಿಥಿಗಳು ಭವ್ಯವಾದ ವೇದಿಕೆ ಏರುವ ವೇಳೆಗೆ ಮಧ್ಯಾಹ್ನ 1 ಗಂಟೆಯಾಗಿತ್ತು. ಶಾಲಾ ಮಕ್ಕಳು ಶಿಸ್ತುಬದ್ಧರಾಗಿ ಬಂದು ಕ್ರೀಡಾಂಗಣದ ಪೆವಿಲಿಯನ್ ಮೆಟ್ಟಿಲು ಹತ್ತಿದರು. ಅದಾಗಲೇ, ಕುಣಿತ ಮುಗಿಸಿ ಕ್ರೀಡಾಂಗಣದ ಮೆಟ್ಟಿಲುಗಳ ಮೇಲೆ ಆಸೀನರಾಗಿದ್ದ ಕಲಾವಿದರತ್ತ ಅತಿಥಿ ಮಹೋದ ಯರು ಹೆಜ್ಜೆ ಹಾಕಿ ಅಭಿನಂದನೆ ಸಲ್ಲಿಸಿದರು. ಕಲಾವಿದರ ಮೊಗದಲ್ಲೂ ಧನ್ಯತಾ ಭಾವ ಇಣುಕಿತು.ಜಲಾನಯನ, ತೋಟಗಾರಿಕೆ, ಕೃಷಿ, ಪಶುಪಾಲನಾ ಇಲಾಖೆಯಿಂದ ರೈತರಿಗೆ ಮಾಹಿತಿ ನೀಡಲು ವಸ್ತುಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.