ADVERTISEMENT

ಕುಡಿಯುವ ನೀರಿಗೆ ಒತ್ತಾಯಿಸಿ ನೀರೆಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 8:55 IST
Last Updated 3 ಜನವರಿ 2012, 8:55 IST
ಕುಡಿಯುವ ನೀರಿಗೆ ಒತ್ತಾಯಿಸಿ ನೀರೆಯರ ಪ್ರತಿಭಟನೆ
ಕುಡಿಯುವ ನೀರಿಗೆ ಒತ್ತಾಯಿಸಿ ನೀರೆಯರ ಪ್ರತಿಭಟನೆ   

ಕೊಳ್ಳೇಗಾಲ: ತಾಲ್ಲೂಕಿನ ಹನೂರು ಪಟ್ಟಣದ ನೀರೆಯರು ನೀರಿಗಾಗಿ ಒತ್ತಾಯಿಸಿ ಸೋಮವಾರ ಪಟ್ಟಣ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪಟ್ಟಣದ ನೂರಕ್ಕೂ ಹೆಚ್ಚು ಮನೆಗಳಿರುವ 3ನೇ ವಾರ್ಡ್‌ನಲ್ಲಿ ದೇವಾಂಗ ಜನಾಂಗದವರು ವಾಸಿಸುತ್ತಿದ್ದಾರೆ. ಈ ಮನೆಗಳ ಪೈಕಿ 45ಕ್ಕೂ ಹೆಚ್ಚು ಮನೆಗಳಿಗೆ ಕಾವೇರಿ ನೀರು ಪೂರೈಕೆ ಯಾಗುತ್ತಿಲ್ಲ. ಬೀದಿ ದೀಪಗಳಿಲ್ಲದೆ ಜನತೆ ಕತ್ತಲೆ ಯಲ್ಲೇ ಓಡಾಡುವ ಸ್ಥಿತಿ ಇದೆ. ಚರಂಡಿ ಸ್ವಚ್ಛತೆ ಇಲ್ಲದೆ ದುರ್ನಾತ ಬೀರುತ್ತಿದ್ದು, ಅಧಿಕಾರಿಗಳು ಸಮರ್ಪಕ ಸೇವೆ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಮಹಿಳೆಯರು ದೂರಿದರು.

3ನೇ ವಾರ್ಡ್ ಸದಸ್ಯ ವೆಂಕಟೇಶ್ ನೇತೃತ್ವದಲ್ಲಿ ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿದ ಮಹಿಳೆಯರು ಅಧಿಕಾರಿಗಳಿಗೆ ದಿಗ್ಬಂಧನ ಹಾಕಿ ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯ ಒದಗಿಸಲು ಆಗ್ರಹಿಸಿದರು.

12.5 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಸಹ ಮುಗಿದರೂ ಇನ್ನೂ ಕೆಲಸ ಪ್ರಾರಂಭವಾಗದಿರುವ ಬಗ್ಗೆ ಮಹಿಳೆಯರು ಕಿಡಿಕಾರಿದರು.

13ನೇ ವಾರ್ಡ್ ಸದಸ್ಯ ಮುದ್ದುಗಾಮಶೆಟ್ಟಿ ಮಾತನಾಡಿ, ತಮ್ಮ ವಾರ್ಡ್‌ನಲ್ಲೂ ಸಹ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.

ಉಪಾಧ್ಯಕ್ಷ ಮಾದೇಶ ಮಾತನಾಡಿ, ಪಟ್ಟಣದ ಇತರೆ ಬಡಾವಣೆಗಳಲ್ಲೂ ಸಹ ನೀರಿನ ಸಮಸ್ಯೆ ಇದ್ದು, ಕೆಲವೆಡೆ ಕಾವೇರಿ ನೀರಿನ ಜೊತೆ ಗಡಸು ನೀರನ್ನು ಪೂರೈಸಲಾಗುತ್ತಿದೆ. ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ ಬೀದಿ ದೀಪಗಳು ಕೆಟ್ಟಿದ್ದು, ಜನತೆ ಪಟ್ಟಣ ಪಂಚಾಯಿತಿ ಆಡಳಿತ ವೈಖರಿಗೆ ಹಿಡಿಶಾಪ ಹಾಕುವಂತಾಗಿದೆ.
 
ನಗರಸಭೆ ಅಧಿಕಾರಿಗಳು ಈಗಲಾದರೂ ಎಚ್ಚೆತ್ತು ಪಟ್ಟಣದ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಕ್ರಮಕೈಗೊಳ್ಳದಿದ್ದರೆ ಪಟ್ಟಣ ಪಂಚಾಯಿತಿ ಮುಂದೆ ಮತ್ತೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನಾರರನ್ನು ಉದ್ದೇಶಿಸಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚೇತನ್‌ಕೊಳವಿ ಮಾತನಾಡಿ, ಕುಡಿಯುವ ನೀರು, ಸ್ವಚ್ಛತೆ ಹಾಗೂ ವಿದ್ಯುತ್ ದೀಪದ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ರಾಮಣ್ಣ, ದನು, ಮಂಜು, ನಂಜಪ್ಪ, ವೆಂಕಟೇಗೌಡ, ಮಂಗಳಮ್ಮ, ಶೇಖರ್ ಇತರರು  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.