ಕೊಳ್ಳೇಗಾಲ: ಗ್ರಾಮದ ಕೆರೆಗಳಲ್ಲಿ ಸಮೃದ್ಧನೀರು, ಕೊಳವೆ ಬಾವಿಗಳಲ್ಲಿ ಹೆಚ್ಚಿನ ಅಂತರ್ಜಲ, ಹರ್ಷಚಿತ್ತ ರೈತ ಸಮುದಾಯ.. ಇದು ನೀರಿನಿಂದ ತತ್ತರಿ ಸುತ್ತಿದ್ದ ತಾಲ್ಲೂಕಿನ ದೊಡ್ಡಿಂದುವಾಡಿ, ಕಾಮಗೆರೆ, ಸಿಂಗಾನಲ್ಲೂರು, ಕಣ್ಣೂರು ಗ್ರಾಮಗಳ ಚಿತ್ರಣ.
19 ವರ್ಷಗಳಿಂದಲೂ ಒಣಗಿ ಬರಡಾಗಿ ನಿಂತ ಕೆರೆಗಳಿಗೆ ನೀರು ತುಂಬುವ ಮಾತನ್ನಾಡಿದಾಗ ಎಲ್ಲರೂ ನಕ್ಕವರೇ, ಒಣಗಿ ನಿಂತ ಈ ಕೆರೆಗಳಿಗೆ ನೀರನ್ನು ತುಂಬಲು ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿತ್ತು. ಗುಂಡಾಲ್ ಜಲಾಶಯದಿಂದ ಈ ಕೆರೆಗಳಿಗೆ ನೀರು ತುಂಬುವ ವ್ಯವಸ್ಥೆ ಇದೆ.
ಆದರೆ, ಗುಂಡಾಲ್ ಜಲಾಶದಿಂದ ಬಿಡುವ ನೀರು ಕೇವಲ 5 ಮತ್ತು 6ನೇ ತೂಬಿನವರೆಗೆ ಮಾತ್ರ ಬಂದು ಹೂಳಿನಿಂದ ಚಾನಲ್ ತುಂಬಿದ್ದರಿಂದ ಅಲ್ಲಿಂದ ಮುಂದೆ ಬರದಂತಾಗಿತ್ತು. ಶಾಸಕ ಆರ್.ನರೇಂದ್ರ ಅವರು 35 ಲಕ್ಷ ವೆಚ್ಚದಲ್ಲಿ ಗುಂಡಾಲ್ ಜಲಾಶಯದಿಂದ ಕೆರೆಗಳಿಗೆ ನೀರು ತುಂಬಿಸುವ ಚಾನಲ್‌ನ ಹೂಳು ತೆಗೆಸಿದರು.
ಕೆರೆ ತುಂಬಿಸಲು ಬಿಡುವ ನೀರನ್ನು ಚಾನಲ್ ಅಕ್ಕಪಕ್ಕದ ರೈತರು ಬೆಳೆಗಳಿಗೆ ಬಳಸದಂತೆ ಶಾಸಕ ಆರ್.ನರೇಂದ್ರ ಹಾಗೂ ಜಿ. ಪಂ ಸದಸ್ಯ ಡಿ.ದೇವರಾಜು ಮನವೊಲಿಸಿದರು. ಈ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಬರದ ದಿನಗಳಲ್ಲಿ ಈ ಭಾಗದ ಅಂತರ್ಜಲ ಮಟ್ಟ ಏರಿಸುವ ಈ ಯೋಜನೆ ಫಲಕೊಟ್ಟು ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟು ನೋಡುತ್ತಿದ್ದಾರೆ.
ಬರಗಾಲದಿಂದ ಜನ ಕುಡಿಯುವ ನೀರಿಗೆ ತತ್ವಾರ ಪಡುವ, ಜನಜಾನುವಾರುಗಳಿಗೆ ನೀರು ಇಲ್ಲವೇ ಇಲ್ಲ ಎಂಬಂತಹ ಸ್ಥಿತಿ ಇದ್ದ ಈ ಗ್ರಾಮಗಳ ಜನರ ಮೊಗದಲ್ಲಿ ನಗುಮೂಡಿದೆ. 19 ವರ್ಷಗಳ ನಂತರ ಕೆರೆಯಲ್ಲಿ ತುಂಬಿದ ಸ್ಚಚ್ಛ ನೀರು ಜನಜಾನುವಾರುಗಳ ಬವಣೆ ನೀಗಿಸಿದೆ. ಅಂತರ್ಜಲ ಮಟ್ಟ ಹೆಚ್ಚಳಗೊಂಡು ರೈತರು ಹರ್ಷಚಿತ್ತರಾಗಿದ್ದಾರೆ. ಅಕ್ಕಪಕ್ಕದ ರೈತರ ಜಮೀನಿನ ಕೊಳವೆ ಬಾವಿಗಳಲ್ಲಿ ನೀರು ಹೆಚ್ಚಳಗೊಂಡು ಕೃಷಿ ಮತ್ತು ತೋಟಗಾರಿಕೆಗೆ ಉತ್ತೇಜನ ಸಿಕ್ಕಿದೆ. ಮಳೆಗಾಲದಲ್ಲಿ ಉಕ್ಕಿಹರಿಯುವ ಜಲಾಶಯಗಳಿಗೆ ಬಾಗಿನ ಸಮರ್ಪಿಸುವುದು ಸಾಮಾನ್ಯ.
ಆದರೆ, ನೀರಿನಿಂದ ತತ್ತರಿಸುತ್ತಿರುವ ಗ್ರಾಮಗಳಲ್ಲಿ ಕೆರೆಗೆ ಬಾಗಿನ ಅರ್ಪಿಸುವ ವಿಶೇಷ ದೃಶ್ಯ ವೀಕ್ಷಿಸಲು ನೂರಾರು ಜನರು ಸಮಾವೇಶಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.