ADVERTISEMENT

ಕೆರೆಯಲ್ಲಿ ಹೂಳು... ತೆಗೆಯೋರು ಯಾರು ?

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2011, 6:25 IST
Last Updated 27 ಮಾರ್ಚ್ 2011, 6:25 IST
ಕೆರೆಯಲ್ಲಿ ಹೂಳು... ತೆಗೆಯೋರು ಯಾರು ?
ಕೆರೆಯಲ್ಲಿ ಹೂಳು... ತೆಗೆಯೋರು ಯಾರು ?   

ಯಳಂದೂರು: ನೂರಾರು ಎಕರೆ ಪ್ರದೇಶದಲ್ಲಿ ಹಬ್ಬಿರುವ ಈ ಕೆರೆ ಇಡೀ ಬೆಟ್ಟಕ್ಕೆ ಕುಡಿಯುವ ನೀರು ಒದಗಿಸುವ ಸೆಲೆ. ಕಾಡು ಪ್ರಾಣಿಗಳಿಗೂ ನೀರುಣಿಸುವ ತಾಣ. ಸುತ್ತ ಬೆಟ್ಟಗುಡ್ಡಗಳಿಂದ ಆವರಿಸಿ ಪ್ರಕೃತಿ ಸೌಂದರ್ಯವನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿದೆ. ಈ ಕೆರೆ ಈಗ ಮಾತ್ರ ಹೂಳು ತುಂಬಿಕೊಂಡು ಅಂಗಳವಾಗಿ ಮಾರ್ಪಟ್ಟಿರುವುದು ವಿಪರ್ಯಾಸ.

ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ‘ಸೋಮೇಶ್ವರ’ ಕೆರೆಯ ದುಃಸ್ಥಿತಿ ಇದು. ವಿಶಿಷ್ಟ ಪ್ರಾಣಿ- ಪಕ್ಷಿ ಸಂಕುಲ, ಭಿನ್ನವಾದ ಕಾಡುಗಳಿಂದ ವಿಶ್ವ ಪ್ರಸಿದ್ಧಿ ಪಡೆದ ಈ ರಮ್ಯ ತಾಣದಲ್ಲಿ ಅನೇಕ ಕೆರೆ ಕಟ್ಟೆಗಳಿವೆ. ಇಲ್ಲಿನ ಶಿಲಾಸ್ತರ 260 ಕೋಟಿ ವರ್ಷದ ಹಿಂದಿನದು ಎಂದು ಹೇಳಲಾಗಿದೆ. 25ಕ್ಕೂ ಹೆಚ್ಚು ನಾಲೆ ಹಳ್ಳ ಕೊಳ್ಳಗಳಿವೆ. ಕೆಲವೆಡೆ ನೀರಿನ ಊಟೆಗಳೂ, 35ಕ್ಕೂ ಹೆಚ್ಚಿನ ಚಿಕ್ಕ ತೊರೆಗಳಿವೆ. ಬಿ.ಆರ್.ಟಿಯ ಅರಣ್ಯದ ಗುಡ್ಡ ಇಳಿಜಾರು ಹೆಚ್ಚು. ಇಲ್ಲಿನ ಹವಾಮಾನ ಭೂಭಾಗದ ಏರಿಳಿತಗಳಿಂದ ಬಹು ಪಾಲು ರೂಪಿತವಾಗಿದೆ. ಕೆರೆ ಹಳ್ಳಕೊಳ್ಳಗಳ ಸುತ್ತ ಗ್ರಾನೈಟ್ ಶಿಲಾಪದರವಿದೆ. ಇದರಲ್ಲಿ ಲ್ಯಾಟರೈಟ್ ಅಂಶ ಹೆಚ್ಚು. ಇದರಿಂದ ಹೆಚ್ಚು ಮೆಕ್ಕಲು ಮಣ್ಣು ಮಳೆ ನೀರಿನಲ್ಲಿ ಹರಿದು ಬಂದು ಸಂಚಯವಾಗುತ್ತದೆ.
 

ಯಾವಾಗಲೂ ನೀರಿನಿಂದ ತುಂಬಿರುತ್ತಿದ್ದ ಈ ಕೆರೆಯಲ್ಲಿ ಈಗ ಹೂಳು ತುಂಬಿಕೊಂಡಿದೆ. ಇದರ ಪಕ್ಕದ ಕೊಳೆವೆ ಬಾವಿ ಸದಾ ಸಿಹಿ ನೀರು ಒಸರುತ್ತದೆ. ಪ್ರಸ್ತುತ ಇಡೀ ಬೆಟ್ಟಕ್ಕೆ ಇಲ್ಲಿಂದಲೇ ನೀರು ಸರಬರಾಜು ಆಗುತ್ತಿದೆ. ಆದರೆ ಈಚಿನ ಕೆಲ ವರ್ಷಗಳಿಂದ ಇಲ್ಲಿ ನೀರು ನಿಲ್ಲುತ್ತಿಲ್ಲ. ಇಲ್ಲಿನ ಹವಾಮಾನ ಭೂಭಾಗಗಳ ಏರಿಳಿತಗಳಿಂದ ಬಹುಪಾಲು ರೂಪಿತವಾಗಿದೆ. ಕನಿಷ್ಟ 10 ಡಿ.ಸೆ.ನಿಂದ ಗರಿಷ್ಟ 39 ಡಿ.ಸೆ. ಉಷ್ಣಾಂಶವಿದೆ. ಸರಾಸರಿ ಮಳೆ ವಾರ್ಷಿಕ 100ರಿಂದ 150 ಸೆಂ.ಮಿ. ಇದೆ. ಜನವರಿಯಿಂದ ಮಾರ್ಚ್ ತನಕ ಶುಷ್ಕ ವಾತಾವರಣವಿರುತ್ತದೆ. ಏಪ್ರಿಲ್- ಜೂನ್‌ನಲ್ಲಿ ಬೇಸಿಗೆ ಹೆಚ್ಚು ಜುಲೈ- ಅಕ್ಟೋಬರ್ ನಡುವೆ ಹೆಚ್ಚು ಮಳೆ ಬೀಳುತ್ತದೆ.
 

ADVERTISEMENT

ನಿಂತಲ್ಲೇ ನಡೆಯುವ ತೆಪ್ಪೋತ್ಸವ: ಅನಾದಿ ಕಾಲದಿಂದ ದೊಡ್ಡ ರಥೋತ್ಸವ ನಡೆದ ತಿಂಗಳ ನಂತರ ಇಲ್ಲಿ ಒಂದು ವಾರ ಕಾಲ ತೆಪ್ಪೋತ್ಸವ ನಡೆಯುತ್ತದೆ. ದೇವರ ಉತ್ಸವ ಮೂರ್ತಿಯನ್ನು ತಂದು ಕೆರೆಯೊಳಗೆ ನಿರ್ಮಿಸಿರುವ ಅಲಂಕೃತ ತೆಪ್ಪದಲ್ಲಿ ಕುಳ್ಳಿರಿಸಿ ಕೆರೆಯ ಸುತ್ತ ಪ್ರದಕ್ಷಿಣೆ ಹಾಕುವ ವಾಡಿಕೆ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಂತಹ ದೃಶ್ಯ ಮರೀಚಿಕೆಯಾಗಿದೆ ಎಂದು ಸ್ಥಳೀಯ ಸಿದ್ದೇಗೌಡ ಹೇಳುತ್ತಾರೆ.
 

ಇದಕ್ಕೆಲ್ಲ ಕೆರೆಯಲ್ಲಿ ತುಂಬಿಕೊಂಡ ಹೂಳೇ ಕಾರಣ. ಮುಂದಿನ ತಿಂಗಳು ಬೆಟ್ಟದಲ್ಲಿ ದೊಡ್ಡ ಜಾತ್ರೆ ನಡೆಯಲಿದೆ. ಮಳೆಗಾಲವೂ ಸಮೀಪಿಸುತ್ತಿದೆ. ಇಲ್ಲಿ ನೀರು ಸಂಗ್ರಹವಾ ದರೆ ಅಂತರ್ಜಲ ಹೆಚ್ಚಾಗಿ ಅಕ್ಕಪಕ್ಕದ ಎಲ್ಲ ಕೊಳವೆ ಬಾವಿಗಳಿಗೂ ನೀರು ಸರಾಗವಾಗಿ ಹರಿಯುತ್ತದೆ. ಉದ್ಯೋಗ ಖಾತ್ರಿ ಯೋಜನೆಯಡಿ ಹೂಳೆತ್ತಲು ಅವಕಾಶಗಳಿದ್ದರೂ ಸಂಬಂಧಪಟ್ಟರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಇಲ್ಲಿಗೆ ಕಾಡು ಪ್ರಾಣಿಗಳು ನೀರು ಅರಸುತ್ತ ಬರುತ್ತದೆ. ಸುತ್ತಲಿನ ಪರಿಸರವೂ ಮನಮೋಹಕವಾಗಿದೆ. ದೋಣಿ ವಿಹಾರ ಕೇಂದ್ರವಾಗಿ ರೂಪಿಸುವ ವಿಪುಲ ಅವಕಾಶವಿದೆ. ಹಾಗಾಗಿ ಕೆರೆಗೆ ಕಾಯಕಲ್ಪ ನೀಡುವ ಕೆಲಸ ಆಗಬೇಕಿದೆ ಎಂದು ಗ್ರಾಪಂ ಸದಸ್ಯ ಶೇಷಾದ್ರಿ ಸೇರಿದಂತೆ ಗ್ರಾಮದ ಜಡೇಗೌಡ, ಮಾದೇಗೌಡ ಅವರ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.