ಕೊಳ್ಳೇಗಾಲ: ತಮಿಳುನಾಡು ಗಡಿಭಾಗದ ತಾಳವಾಡಿ ಪಿರ್ಕಾ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಶಿಕ್ಷಣಕ್ಕೆ ಒತ್ತಾಯಿಸಿ ಗಡಿನಾಡ ಉತ್ಸವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಕಪ್ಪುಬಾವುಟ ಪ್ರದರ್ಶನ ನಡೆಸಲಿವೆ ಎಂದು ನಾಗರಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಪುಟ್ಟರಾಜೇ ಅರಸ್ ತಿಳಿಸಿದರು.
ಕರ್ನಾಟಕ- ತಮಿಳುನಾಡು ಗಡಿಭಾಗದ ತಾಳವಾಡಿ ಪಿರ್ಕಾಗಳಲ್ಲಿ ಕನ್ನಡಿಗರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಇಲ್ಲಿನ ಶಾಲೆಗಳಲ್ಲಿ ತಮಿಳುನಾಡು ಸರ್ಕಾರ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿದೆ. ಈ ಬಗ್ಗೆ ಕನ್ನಡ ಪ್ರಾಧಿಕಾರವಾಗಲೀ, ಸರ್ಕಾರ ವಾಗಲೀ ಕ್ರಮಕ್ಕೆ ಮುಂದಾಗಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಕನ್ನಡ ಭಾಷೆ ಕಲಿಕೆಗೆ ಅವಕಾಶ ನೀಡಲು ತಮಿಳುನಾಡು ಸರ್ಕಾರ ಮುಂದಾಗದಿದ್ದರೆ, ಕೊಳ್ಳೇಗಾಲ ತಾಲ್ಲೂಕಿನ ಎಲ್ಲ ತಮಿಳು ಶಾಲೆಗಳಿಗೆ ಬೀಗಜಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಟ್ಟಣದಲ್ಲಿ ಎಂಎಸ್‌ಐಎಲ್ ಮದ್ಯಮಾರಾಟ ಕೇಂದ್ರವನ್ನು ತಕ್ಷಣ ಪ್ರಾರಂಭಿ ಸಬೇಕು. 15 ತಿಂಗಳಿಂದ ಎಂಎಸ್‌ಐಎಲ್ ಮದ್ಯಮಾರಾಟ ಕೇಂದ್ರ ತೆರೆಯು ತ್ತಿಲ್ಲ. ಮದ್ಯಮಾರಾಟ ಕೇಂದ್ರ ತೆರೆಯುವುದರಿಂದ ಮದ್ಯಪಾನಿಗಳ ಆರೋಗ್ಯ ಮತ್ತು ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಈ ಬಗ್ಗೆ ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕಿನ ಜಕ್ಕಳ್ಳಿ ವಿವಾದಕ್ಕೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳು ಸೇರಿ ಅಸ್ಥಿತ್ವಕ್ಕೆ ತಂದಿದ್ದ ಕೊಳ್ಳೇಗಾಲ ತಾಲ್ಲೂಕು ಪ್ರಗತಿಪರ ಒಕ್ಕೂಟ ರದ್ದುಗೊಳಿ ಸಲಾಗಿದೆ ಎಂದು ವೇದಿಕೆ ಸಂಚಾಲಕ ಪುಟ್ಟರಾಜೇ ಅರಸ್ ಘೋಷಿಸಿದರು. ಸುದ್ದಿಗೋಷ್ಠಿಯಲ್ಲಿ ನಾಗರಿಕ ಹಿತರಕ್ಷಣಾ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ನಟರಾಜ್ ಮಾಳಿಗೆ, ಜಯಕರ್ನಾಟಕ ವೇದಿಕೆ ಅಧ್ಯಕ್ಷ ಮಹೇಶ್ ರುದ್ರಸ್ವಾಮಿ, ಬೇಂದ್ರೆ ಕನ್ನಡ ಸಂಘದ ಅಧ್ಯಕ್ಷ ಚಂದ್ರಚೂಡ, ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಪ್ರಭು ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.