ADVERTISEMENT

ಜನವರಿಯಲ್ಲಿ ಕ್ಯಾಮೆರಾ ಟ್ರ್ಯಾಪಿಂಗ್‌

ಹುಲಿ ಗಣತಿ: ಮೊದಲ ಹಂತ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 7:46 IST
Last Updated 24 ಡಿಸೆಂಬರ್ 2013, 7:46 IST

ಚಾಮರಾಜನಗರ: ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನ, ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯ, ಕಾವೇರಿ ಮತ್ತು ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ಕಳೆದ ಒಂದು ವಾರದಿಂದ ರಾಷ್ಟ್ರೀಯ ಹುಲಿ ಗಣತಿಯ ಅಂಗವಾಗಿ ನಡೆದ ಮೊದಲ ಹಂತದ ಗಣತಿ ಪ್ರಕ್ರಿಯೆ ಸೋಮವಾರ ಮುಕ್ತಾಯವಾಯಿತು.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಮಾರ್ಗಸೂಚಿ ಅನ್ವಯ ಗಣತಿ ನಡೆಯಿತು. ನಿಗದಿತ ಸೀಳುದಾರಿಯಲ್ಲಿ ಕಂಡಿರುವ ಮಾಂಸಾಹಾರಿ ಮತ್ತು ಸಸ್ಯಾಹಾರಿ ಪ್ರಾಣಿಗಳನ್ನು ಗಣತಿದಾರರು ತಮಗೆ ನೀಡಿರುವ ನಮೂನೆಗಳಲ್ಲಿ ದಾಖಲಿಸಿದ್ದಾರೆ.

ಈ ನಮೂನೆಗಳನ್ನು ಕ್ರೋಡೀಕರಿಸಿ ಡೆಹರಾಡೂನ್‌ ನಲ್ಲಿರುವ ರಾಷ್ಟ್ರೀಯ ವನ್ಯಜೀವಿ ಸಂಸ್ಥೆಗೆ ಕಳುಹಿಸಲಾಗುತ್ತದೆ. ಅಲ್ಲಿರುವ ವನ್ಯಜೀವಿ ತಜ್ಞರು ನಿರ್ದಿಷ್ಟ ಪ್ರದೇಶದಲ್ಲಿರುವ ಬಲಿ ಪ್ರಾಣಿಗಳು ಸೇರಿದಂತೆ ಹುಲಿಗಳ ಮಲ, ಹೆಜ್ಜೆಗುರುತು ಆಧರಿಸಿ ವರದಿ ಸಿದ್ಧಪಡಿಸಲಿದ್ದಾರೆ.

‘ಗಣತಿಯ ಮುಂದಿನ ಹಂತವಾಗಿ ಕ್ಯಾಮೆರಾ ಟ್ರ್ಯಾಪಿಂಗ್‌ ಅಳವಡಿಸಲಾಗುತ್ತದೆ. ಡಿ. 27ರಂದು ಬೆಂಗಳೂರಿನಲ್ಲಿ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರ ಅಧ್ಯಕ್ಷತೆ ಯಲ್ಲಿ ಸಭೆ ನಡೆಯಲಿದೆ. ಕ್ಯಾಮೆರಾ ಟ್ರ್ಯಾಪಿಂಗ್‌ ಅಳವಡಿಕೆ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ಜನವರಿ ಮೊದಲ ವಾರದಲ್ಲಿ ಕ್ಯಾಮೆರಾ ಟ್ರ್ಯಾಪಿಂಗ್‌ ಅಳವಡಿಸುವ ಸಾಧ್ಯತೆ ಯಿದೆ’ ಎಂದು ಬಂಡೀಪುರದ ಅರಣ್ಯ ಸಂರಕ್ಷಣಾಧಿ ಕಾರಿ ಮತ್ತು ನಿರ್ದೇಶಕ ಎಚ್‌.ಸಿ. ಕಾಂತರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗಣತಿದಾರರು ಭರ್ತಿ ಮಾಡಿರುವ ನಮೂನೆಗಳು ಒಂದು ವಾರದೊಳಗೆ ವಲಯ ಅರಣ್ಯಾಧಿಕಾರಿಗಳ ಮೂಲಕ ಕೇಂದ್ರ ಸ್ಥಾನಕ್ಕೆ ತಲುಪಲಿವೆ. ನಂತರ, ಅವುಗಳನ್ನು ರಾಷ್ಟ್ರೀಯ ವನ್ಯಜೀವಿ ಸಂಸ್ಥೆಗೆ ರವಾನಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.