ADVERTISEMENT

ಜನವರಿ ತಿಂಗಳ ಪಡಿತರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2011, 9:45 IST
Last Updated 13 ಜನವರಿ 2011, 9:45 IST

ಚಾಮರಾಜನಗರ: ಜಿಲ್ಲೆಯ ವಿವಿಧ ಪಡಿತರ ಚೀಟಿದಾರರಿಗೆ ಜನವರಿ ತಿಂಗಳಿಗೆ 36,570 ಕ್ವಿಂ. ಅಕ್ಕಿ, 8,540 ಕ್ವಿಂ. ಗೋಧಿ ಹಾಗೂ 2,205 ಕ್ವಿಂ. ಸಕ್ಕರೆ ಬಿಡುಗಡೆಯಾಗಿದೆ. ಭಾವಚಿತ್ರ ತೆಗೆಸಿರುವ ವಿವಿಧ ಕಾರ್ಡುದಾರರು, ನೆಮ್ಮದಿ ಪೂರ್ವ ಮತ್ತು ನೆಮ್ಮದಿ ಕೇಂದ್ರದಲ್ಲಿ ವಿತರಿಸಿರುವ ಪಡಿತರ ಚೀಟಿದಾರರಿಗೂ ಪಡಿತರ ಪದಾರ್ಥ ಬಿಡುಗಡೆ ಮಾಡಲಾಗಿದೆ. ಅಂತ್ಯೋ ದಯ ಕಾರ್ಡ್‌ಗೆ 29 ಕೆಜಿ ಅಕ್ಕಿ, 6 ಕೆಜಿ ಗೋಧಿ, 1ಕೆಜಿ ಸಕ್ಕರೆ ನಿಗದಿಪಡಿಸಲಾಗಿದೆ.

ನೆಮ್ಮದಿ ಪೂರ್ವ ಮತ್ತು ನೆಮ್ಮದಿ ಕಾರ್ಡ್ ಪಡೆದಿರುವ ಏಕಸದಸ್ಯರಿಗೆ 4ಕೆಜಿ ಅಕ್ಕಿ, 1ಕೆಜಿ ಗೋಧಿ, 1ಕೆಜಿ ಸಕ್ಕರೆ ನಿಗದಿಪಡಿಸಲಾಗಿದೆ. ದ್ವಿಸದಸ್ಯರಿಗೆ 8ಕೆಜಿ ಅಕ್ಕಿ, 1ಕೆಜಿ ಗೋಧಿ, 1ಕೆಜಿ ಸಕ್ಕರೆ, ತ್ರಿಸದಸ್ಯರಿಗೆ 12ಕೆಜಿ ಅಕ್ಕಿ, 2 ಕೆಜಿ ಗೋಧಿ, 1ಕೆಜಿ ಸಕ್ಕರೆ, ನಾಲ್ವರು ಸದಸ್ಯರಿಗೆ 16ಕೆಜಿ ಅಕ್ಕಿ, 3ಕೆಜಿ ಗೋಧಿ, 1ಕೆಜಿ ಸಕ್ಕರೆ ಹಾಗೂ ಐದು ಮತ್ತು ಅದಕ್ಕಿಂತ ಹೆಚ್ಚಿನ ಸದಸ್ಯರಿರುವ ಕುಟುಂಬಕ್ಕೆ 20ಕೆಜಿ ಅಕ್ಕಿ, 3ಕೆಜಿ ಗೋಧಿ, 1ಕೆಜಿ ಸಕ್ಕರೆ ನೀಡಲಾಗುತ್ತದೆ. ಪ್ರತಿ ಕೆಜಿ ಅಕ್ಕಿ, ಗೋಧಿಗೆ 3 ರೂ ಮತ್ತು ಸಕ್ಕರೆ ಪ್ರತಿ ಕೆಜಿಗೆ ರೂ 13.50 ರೂ ದರ ನಿಗದಿಪಡಿಸಲಾಗಿದೆ.

ಎಪಿಎಲ್ ಪಡಿತರ ಚೀಟಿದಾರರು ಪಡೆಯುವ ಪ್ರತಿ ಕೆಜಿ ಅಕ್ಕಿಗೆ 9.40 ರೂ, ಪ್ರತಿ ಕೆಜಿ ಗೋಧಿಗೆ 7.20 ರೂ ದರ ನಿಗದಿಯಾಗಿದೆ. ಜಿಲ್ಲೆಯ ಪಡಿತರದಾರರಿಗೆ 10.80 ಲಕ್ಷ ಲೀ. ಸೀಮೆಎಣ್ಣೆ ಬಿಡುಗಡೆಯಾಗಿದೆ. ಅನಿಲರಹಿತ ಎಪಿಎಲ್ ಕಾರ್ಡುದಾರರಿಗೆ ಸೀಮೆಎಣ್ಣೆ ಬಿಡುಗಡೆಯಾಗಿದೆ.

ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ಯಳಂದೂರು ಹಾಗೂ ಹನೂರು ಪಟ್ಟಣ ಪಡಿತರ ದಾರರಿಗೆ 5 ಲೀ. ಮತ್ತು ಹನೂರು ಹೊರತುಪಡಿಸಿ ಜಿಲ್ಲೆಯ ನಾಲ್ಕು ತಾಲ್ಲೂಕಿನ ಗ್ರಾಮೀಣ ಪಡಿತರ ದಾರರಿಗೆ 4 ಲೀ. ಸೀಮೆಎಣ್ಣೆ ವಿತರಿಸಲಾಗುತ್ತದೆ. ಚಾಮರಾಜನಗರ ಪಟ್ಟಣ ಪಡಿತರದಾರರಿಗೆ ಪ್ರತಿ ಲೀಟರ್‌ಗೆ 13.10 ರೂ ಹಾಗೂ ಗ್ರಾಮೀಣ ಪ್ರದೇಶಕ್ಕೆ 13.40 ರೂ, ಕೊಳ್ಳೇಗಾಲ ಪಟ್ಟಣಕ್ಕೆ 13 ರೂ ಮತ್ತು ಗ್ರಾಮಾಂತರಕ್ಕೆ ರೂ 13.30 ದರ ನಿಗದಿಯಾಗಿದೆ.

ಗುಂಡ್ಲುಪೇಟೆ ಪಟ್ಟಣಕ್ಕೆ 13.20 ರೂ ಹಾಗೂ ಗ್ರಾಮಾಂತರಕ್ಕೆ ರೂ 13.50, ಯಳಂದೂರು ಪಟ್ಟಣ ವ್ಯಾಪ್ತಿ ಪ್ರತಿ ಲೀಟರ್‌ಗೆ ರೂ 13.10 ಹಾಗೂ ಗ್ರಾಮಾಂತರಕ್ಕೆ 13.40 ರೂ ದರವಿದೆ. ಹನೂರು ಪಟ್ಟಣದಲ್ಲಿ ಪ್ರತಿ ಲೀಟರ್‌ಗೆ 13 ರೂ ದರ ನಿಗದಿಪಡಿಸಲಾಗಿದೆ. ಆದರೆ, ವಿತರಣೆಯಾಗದೆ ಬಾಕಿ ಉಳಿದಿರುವ ಕಾಯಂ ಗಣಕೀಕೃತ ಪಡಿತರ ಚೀಟಿಗಳಿಗೆ ಆಹಾರ ಧಾನ್ಯ ಹಾಗೂ ಸೀಮೆಎಣ್ಣೆ ಹಂಚಿಕೆ ಮಾಡಲಾಗಿಲ್ಲ. ಜ. 15ರೊಳಗೆ ಪಡಿತರ ವಿತರಿಸುವಂತೆ ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸೂಚಿಸಲಾಗಿದೆ.

ಅಂಗಡಿ ಮಾಲೀಕರು ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಪಡಿತರ ಮಾರಾಟ ಮಾಡಿದರೆ ಪಡಿತರ ದಾರರು ದೂರು ಸಲ್ಲಿಸಬಹುದು. ಜಿಲ್ಲಾಧಿಕಾರಿ ಕಾರ್ಯಾಲಯದ ಆಹಾರ ವಿಭಾಗಕ್ಕೆ (ದೂರವಾಣಿ 08226- 224660) ದೂರು ಸಲ್ಲಿಸುವಂತೆ ಆಹಾರ ಇಲಾಖೆಯ ಉಪ ನಿರ್ದೇಶಕ ಡಾ.ಎಸ್.ಇ. ಮಹದೇವಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.