ADVERTISEMENT

ಜನಸ್ನೇಹಿಯಾಗಿ ಪೊಲೀಸ್ ಇಲಾಖೆ

ಜನಸಂಪರ್ಕ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 6:38 IST
Last Updated 26 ಅಕ್ಟೋಬರ್ 2017, 6:38 IST
ಜನಸ್ನೇಹಿಯಾಗಿ ಪೊಲೀಸ್ ಇಲಾಖೆ
ಜನಸ್ನೇಹಿಯಾಗಿ ಪೊಲೀಸ್ ಇಲಾಖೆ   

ಯಳಂದೂರು: ಪೊಲೀಸ್ ಇಲಾಖೆಯು ಸಾರ್ವಜನಿಕರೊಂದಿಗೆ ಉತ್ತಮ ಸಂಬಂಧ ಹೊಂದುವ ನಿಟ್ಟಿನಲ್ಲಿ ಅನೇಕ ಹೊಸ ಕ್ರಮಗಳನ್ನು ಅನುಸರಿಸುತ್ತಿದೆ ಹಾಗೂ ಜನಸ್ನೇಹಿಯಾಗಿ ಕೆಲಸ ಮಾಡಲು ಸನ್ನದ್ಧಗೊಂಡಿದೆ ಎಂದು ಚಾಮರಾಜನಗರ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ ಹೇಳಿದರು.

ಕೊಳ್ಳೇಗಾಲ ಉಪವಿಭಾಗದ ವತಿಯಿಂದ ಪಟ್ಟಣದ ರಾಘವೇಂದ್ರ ಮಠದಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಹಿಂದಿನಿಂದಲೂ ಗ್ರಾಮಗಳಲ್ಲಿ ಬೀಟ್ ವ್ಯವಸ್ಥೆ ಜಾರಿಯಲ್ಲಿತ್ತು. ಆದರೆ, ಗ್ರಾಮದೊಂದಿಗೆ ನಿರಂತರ ಸಂಪರ್ಕ ಇರಲಿಲ್ಲ. ಹಾಗಾಗಿ, ಪ್ರತಿ ಗ್ರಾಮಗಳಿಗೂ ಒಬ್ಬೊಬ್ಬ ಕಾನ್‌ಸ್ಟೆಬಲ್‌ ನೇಮಿಸಲಾಗಿದೆ. ಅವರಿಗೆ ಪ್ರತ್ಯೇಕ ಮೊಬೈಲ್ ಸಂಖ್ಯೆಯನ್ನು ನೀಡಲಾಗಿದ್ದು ಊರಿನ ಮುಖಂಡರು, ಸಂಘಸಂಸ್ಥೆಗಳ ಪ್ರಮುಖರೊಂದಿಗೆ ಸದಾ ಸಂಪರ್ಕದಲ್ಲಿ ಇರುತ್ತಾರೆ. ಗ್ರಾಮಾಂತರ ಪ್ರದೇಶದಲ್ಲಿ ಜೂಜಾಟ, ಅಕ್ರಮ ಸಾರಾಯಿ ಮಾರಾಟ, ಮರಳಿಗೆ ಸಂಬಂಧಪಟ್ಟ ದೂರುಗಳೇ ಹೆಚ್ಚಿರುತ್ತವೆ. ಜನರ ಸಲಹೆ, ಸೂಚನೆ ಪಡೆದು ಅಗತ್ಯ ಕ್ರಮ ವಹಿಸಲು ಅನುಕೂಲವಾಗುತ್ತದೆ ಎಂದರು.

ADVERTISEMENT

ಡಿವೈಎಸ್‌ಪಿ ಪುಟ್ಟಮಾದಯ್ಯ ಮಾತನಾಡಿ, ಮಾಂಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 43 ಗ್ರಾಮಗಳು ಸೇರುತ್ತವೆ. ಇಲ್ಲಿ 70 ಬೀಟ್‌ಗಳನ್ನು ಗುರುತಿಸಲಾಗಿದೆ. ಪ್ರತಿಯೊಂದು ಬೀಟ್‌ಗೂ ಒಬ್ಬೊಬ್ಬ ಕಾನ್‌ಸ್ಟೆಬಲ್‌ ನಿಯೋಜಿಸಲಾಗಿದೆ.

ಅಕ್ರಮ ಮಾರಾಟ ಮದ್ಯ ಹಾಗೂ ಮರುಳುಗಾರಿಕೆ ಹತೋಟಿಗೆ ತರಬೇಕು. ಮೆಳ್ಳಹಳ್ಳಿ ಗೇಟ್‌ನಿಂದ ಪಟ್ಟಣದ ನಾಡಮೇಗಲಮ್ಮ ದೇಗುಲ ತನಕ ಹೆಚ್ಚು ಅಪಘಾತ ಸಂಭವಿಸುತ್ತಿದೆ. ಬಸ್ ನಿಲ್ದಾಣದಲ್ಲಿ ಹೆಣ್ಣು ಮಕ್ಕಳಿಗೆ ಆಗುತ್ತಿರುವ ಕಿರುಕುಳ ತಪ್ಪಿಸಬೇಕು. ಆದರ್ಶ ಶಾಲೆಯ ಬಳಿ ಬಸ್‌ ನಿಲ್ಲಿಸುವ ವ್ಯವಸ್ಥೆ ಮಾಡಬೇಕು. ಸಂಚಾರ ಸಮಸ್ಯೆ, ಆಟೊ ನಿಲ್ದಾಣದ ಸಮಸ್ಯೆ, ಪಾರ್ಕಿಂಗ್ ಸಮಸ್ಯೆಗಳು ನಿವಾರಿಸುವುದೂ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತಂದರು.

ಸಿಪಿಐ ಎ.ಕೆ. ರಾಜೇಶ್, ಪಿಎಸ್‌ಐಗಳಾದ ಮಂಜು, ಪುಷ್ಪಲತಾ ತಾ.ಪಂ ಉಪಾಧ್ಯಕ್ಷೆ ಪದ್ಮಾವತಿ ಮಹದೇವನಾಯಕ, ಪ.ಪಂ ಉಪಾಧ್ಯಕ್ಷ ಭೀಮಪ್ಪ, ಸದಸ್ಯರಾದ ಜೆ.ಶ್ರೀನಿವಾಸ್, ವೈ.ವಿ.ಉಮಾಶಂಕರ, ಮುಖಂಡರಾದ ಲಿಂಗರಾಜಮೂರ್ತಿ, ಚಕ್ರವರ್ತಿ, ನಂಜನಾಯಕ, ರಾಮು, ಮಹೇಶ್, ಕಾನ್‌ಸ್ಟೆಬಲ್‌ಗಳಾದ ಸೂರ್ಯಪ್ರಕಾಶ್, ರಾಜೇಂದ್ರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.