ADVERTISEMENT

ಜಿಲ್ಲೆಯ ಅಭಿವೃದ್ಧಿಗೆ ರೂ 669ಕೋಟಿ ಸಾಲ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 7:35 IST
Last Updated 10 ಮಾರ್ಚ್ 2012, 7:35 IST
ಜಿಲ್ಲೆಯ ಅಭಿವೃದ್ಧಿಗೆ ರೂ 669ಕೋಟಿ ಸಾಲ
ಜಿಲ್ಲೆಯ ಅಭಿವೃದ್ಧಿಗೆ ರೂ 669ಕೋಟಿ ಸಾಲ   

ಚಾಮರಾಜನಗರ:ಜಿಲ್ಲೆಯಲ್ಲಿ 2012-13ನೇ ಸಾಲಿಗೆ ಒಟ್ಟು 669.36 ಕೋಟಿ ರೂ ಮೊತ್ತದ ವಾರ್ಷಿಕ ಸಾಲ ಯೋಜನೆ ನಿಗದಿಯಾಗಿದೆ.

ನಗರದ ಜಿ.ಪಂ. ಕೆಡಿಪಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಿಂದ ಹಮ್ಮಿಕೊಂಡಿದ್ದ ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ ಸಮಾರಂಭದಲ್ಲಿ ಬ್ಯಾಂಕ್‌ನ ಮುಖ್ಯ ಕಚೇರಿಯ ಪ್ರಧಾನ ವ್ಯವಸ್ಥಾಪಕ ಡಾ.ಕೆ. ಲಕ್ಷ್ಮೀಶ ವಾರ್ಷಿಕ ಸಾಲ ಯೋಜನೆ ಬಗ್ಗೆ ಮಾಹಿತಿ ನೀಡಿದರು.

`ಯೋಜನಾ ವೆಚ್ಚದಲ್ಲಿ ಆದ್ಯತಾ ವಲಯಕ್ಕೆ 635.03 ಕೋಟಿ ರೂ ಹಾಗೂ ಇತರೇ ವಲಯಕ್ಕೆ 34.33 ಕೋಟಿ ರೂ ಮೀಸಲಿಡಲಾಗಿದೆ. ಮುಖ್ಯವಾದ ಬೆಳೆ ಸಾಲಕ್ಕೆ 316.89 ಕೋಟಿ ರೂ, ಬಡತನ ನಿವಾರಣೆಯ ಸರ್ಕಾರಿ ಪ್ರಾಯೋಜಿತ ಯೋಜನೆಗಳಿಗೆ 98.47 ಕೋಟಿ ರೂ ನಿಗದಿಪಡಿಸಲಾಗಿದೆ~ ಎಂದರು.

ಆದ್ಯತಾ ವಲಯಗಳಿಗೆ ಕಳೆದ ಸಾಲಿಗಿಂತ ಹೆಚ್ಚಿನ ಸಾಲ ನೀಡುವ ಗುರಿ ಹೊಂದಲಾಗಿದೆ. ಆದರೆ, ಬ್ಯಾಂಕ್‌ಗಳು ಸಾಲ ವಸೂಲಿಯಲ್ಲಿ ನಿಗದಿತ ಗುರಿ ಮುಟ್ಟದಿರುವುದು ಕಳವಳ ಉಂಟು ಮಾಡಿದೆ. ಸಾಲ ಪಡೆದವರು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೆ ಬ್ಯಾಂಕ್‌ಗಳ ಸಾಲ ಯೋಜನೆ ಪ್ರಕ್ರಿಯೆ ಬಲಗೊಳ್ಳಲಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ 8 ಸಾವಿರಕ್ಕೂ ಹೆಚ್ಚಿನ ಸ್ವಸಹಾಯ ಸಂಘಗಳಿಗೆ 80 ಕೋಟಿ ರೂ ಸಾಲ ನೀಡಲಾಗಿತ್ತು. ಎಲ್ಲ ಸಂಘಗಳು ನಿಗದಿತ ಅವಧಿಯೊಳಗೆ ಶೇ. 100ರಷ್ಟು ಮರುಪಾವತಿ ಮಾಡಿವೆ. ಜಿಲ್ಲೆಯ ಸ್ವಸಹಾಯ ಸಂಘಗಳಿಗೆ ಇನ್ನು ಹೆಚ್ಚು ಸಾಲ ನೀಡುವ ಅವಕಾಶವಿದೆ. ಸ್ವಂತ ವ್ಯವಹಾರ ನಡೆಸಬಲ್ಲ ಆರ್ಥಿಕ ಸದೃಢ ಘಟಕಗಳೆಂದು ಪರಿಗಣಿಸಿ ಸ್ವಸಹಾಯ ಸಂಘಗಳಿಗೆ ಎಲ್ಲ ಬ್ಯಾಂಕ್‌ಗಳು ಹೆಚ್ಚಿನ ಸಾಲಸೌಲಭ್ಯ ನೀಡಬೇಕು ಎಂದು ಸಲಹೆ ನೀಡಿದರು.

ಆರ್‌ಬಿಐ ನೀಡಿರುವ ಮಾರ್ಗಸೂಚಿ ಹಾಗೂ ಸೂಚನೆ ಅನ್ವಯ 2012-13ರ ಜಿಲ್ಲಾ ಸಾಲ ಯೋಜನೆ ತಯಾರಿಸಲಾಗಿದೆ. 2 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಎಲ್ಲ ಗ್ರಾಮಗಳನ್ನು ಸೇರ್ಪಡೆ ಮಾಡಿಕೊಂಡು ಯೋಜನೆ ತಯಾರಿಸಬೇಕೆಂಬ ನಿರ್ದೇಶನ ಪಾಲಿಸಲಾಗಿದೆ. ಬ್ಯಾಂಕ್ ಶಾಖೆ ತೆರೆಯುವುದು, ವ್ಯವಹಾರ ಪ್ರತಿನಿಧಿಗಳ ನೇಮಕ ಸೇರಿದಂತೆ ಇತರೇ ಬ್ಯಾಂಕಿಂಗ್ ಸೌಕರ್ಯ ನೀಡಲಾಗುತ್ತಿದೆ. ಆರ್‌ಬಿಐ ಈ ಸೌಲಭ್ಯ ಒದಗಿಸಲು ಗಡುವು ನೀಡಿತ್ತು. ನಿಗದಿತ ದಿನಾಂಕಕ್ಕೂ ಮೊದಲೇ ಗುರಿ ಸಾಧಿಸಲಾಗಿದೆ ಎಂದರು.

ಸೇವಾ ಕ್ಷೇತ್ರದ ನಿಯಮಗಳಲ್ಲಿ ಆರ್‌ಬಿಐ ಸ್ವಲ್ಪಮಟ್ಟಿಗೆ ರಿಯಾಯಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ನಿಗದಿತ ಗುರಿ ತಲುಪಲು ಬ್ಯಾಂಕರ್‌ಗಳು ಗರಿಷ್ಠ ಪ್ರಯತ್ನ ಮಾಡಲಿದ್ದಾರೆ. ಈ ಬಗ್ಗೆ ವಿಶ್ವಾಸವಿದೆ. ಬ್ಯಾಂಕ್‌ಗಳೊಂದಿಗೆ ಇತರೇ ಸಂಸ್ಥೆಗಳು, ಇಲಾಖೆಗಳು ಸಹಕಾರ ನೀಡಬೇಕು ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಎಸ್‌ಬಿಎಂ ಮೈಸೂರು ವಲಯದ ಉಪ ಪ್ರಧಾನ ವ್ಯವಸ್ಥಾಪಕ ಜೆ. ರಾಮಕೃಷ್ಣನ್, ವೆಂಕಟನಾರಾಯಣನ್, ಸಹಾಯಕ ಪ್ರಧಾನ ವ್ಯವಸ್ಥಾಪಕ ವಿ. ಜನಾರ್ದನಯ್ಯ, ಕಾವೇರಿ ಕಲ್ಪತರು ಬ್ಯಾಂಕ್ ಅಧ್ಯಕ್ಷೆ ಎಲ್.ಟಿ. ಅಂಬುಜಾಕ್ಷಿ, ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಆರ್. ಮುರಳಿ, ಆರ್‌ಬಿಐನ ಬೆಂಗಳೂರು ಶಾಖೆಯ ವ್ಯವಸ್ಥಾಪಕ ಹಸನ್ ತಾಹೆರ್, ಲೀಡ್ ಬ್ಯಾಂಕ್ ಮ್ಯೋನೇಜರ್ ಲಕ್ಷುಕುಮಾರ್  ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.