ADVERTISEMENT

ತಂತ್ರಜ್ಞಾನದ ಮೊರೆ ಹೋದ ಹುರಿಯಾಳುಗಳು

ವಾಟ್ಸ್‌ಆ್ಯಪ್, ಫೇಸ್‌ಬುಕ್‌ಗಳಿಗಿಂತ ಹೆಚ್ಚಾಗಿ ಧ್ವನಿಸಂದೇಶಗಳ ಬಳಕೆ

ಕೆ.ಎಸ್.ಗಿರೀಶ್
Published 5 ಏಪ್ರಿಲ್ 2018, 6:52 IST
Last Updated 5 ಏಪ್ರಿಲ್ 2018, 6:52 IST

ಚಾಮರಾಜನಗರ: ಜಿಲ್ಲೆಯಲ್ಲಿ ರಾಜಕೀಯ ದಿನೇ ದಿನೇ ಕಾವು ಪಡೆಯುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳು ಜನರನ್ನು ತಲುಪಲು ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಗಡಿ ಜಿಲ್ಲೆ, ಅತ್ಯಂತ ಹಿಂದುಳಿದ ಜಿಲ್ಲೆ ಎಂದೆನಿಸಿದ ಚಾಮರಾಜನಗರದಲ್ಲಿ ತಂತ್ರಜ್ಞಾನ ಜೋರು ಧ್ವನಿಯಲ್ಲಿ ಸದ್ದು ಮಾಡುತ್ತಿರುವುದು ಕುತೂಹಲ ಕೆರಳಿಸಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲ ರಾಜಕೀಯ ಮುಖಂಡರ ಒಂದೇ ಗುರಿ ಜನರನ್ನು ತಲುಪುವುದು. ಇದಕ್ಕಾಗಿ ಅವರು ನಡೆಸುವ ಕಸರತ್ತು ನಾನಾ ರೀತಿಯದ್ದು. ಒಂದೆಡೆ ಸಭೆ ಮಾಡುವುದು, ಊರೂರು ಸುತ್ತುವುದು, ಸಮಾವೇಶ ನಡೆಸುವುದು, ಕರಪತ್ರ ಹೊರಡಿಸುವುದು... ಹೀಗೆ, ಅನೇಕ ಸಾಂಪ್ರದಾಯಿಕ ವಿಧಾನಗಳು ಇದ್ದಾಗ್ಯೂ ರಾಜಕೀಯ ಹುರಿಯಾಳುಗಳು ಈ ಬಾರಿ ಹೆಚ್ಚಾಗಿ ತಂತ್ರಜ್ಞಾನವನ್ನೇ ಆಶ್ರಯಿಸಿದ್ದಾರೆ.

ವಾಟ್ಸ್‌ಆ್ಯಪ್‌ ಮತ್ತು ಫೇಸ್‌ಬುಕ್‌ ಬಳಕೆ ಇದ್ದರೂ ಬೇರೆ ಜಿಲ್ಲೆಯ ರಾಜಕೀಯ ಮುಖಂಡರಿಗೆ ಹೋಲಿಸಿದರೆ ಅಷ್ಟು ಪರಿಣಾಮಕಾರಿಯಾಗಿಲ್ಲ. ಕೆಲವು ಮುಖಂಡರ ಫೇಸ್‌ಬುಕ್‌ ಪುಟಗಳು ಹೆಚ್ಚಾಗಿ ಅಪ್‌ಡೇಟ್‌ ಆಗದೇ ಇರುವುದು, ಮತದಾರರು ಅಥವಾ ರಾಜಕೀಯ ಪಕ್ಷಗಳ ಎಲ್ಲ ಕಾರ್ಯಕರ್ತರು ಫೇಸ್‌ಬುಕ್‌ ಬಳಸದೇ ಇರುವುದು ಇದರ ಬಹು ದೊಡ್ಡ ಮಿತಿ. ವಾಟ್ಸ್‌ಆ್ಯಪ್‌ ಬಳಕೆ ಇದ್ದರೂ, ಇನ್ನೂ ಈ ಭಾಗದಲ್ಲಿ ಹೆಚ್ಚಾಗಿ ಜನರು ಇದನ್ನು ಬಳಸುತ್ತಿಲ್ಲ. ಯುವ ತಲೆಮಾರಷ್ಟೇ ಈ ತಂತ್ರಾಂಶವನ್ನು ಬಳಸುತ್ತಿದೆ. ಮಧ್ಯವಯಸ್ಕರು, ಹಿರಿಯರು ಸೇರಿದಂತೆ ಹೆಚ್ಚಿನವರ ಬಳಿ ಇನ್ನೂ ಸ್ಮಾರ್ಟ್‌ಫೋನ್‌ ಇಲ್ಲ. ಇದರಿಂದ ವಾಟ್ಸ್‌ಆ್ಯಪ್ ಸಂದೇಶವೂ ಬಹುತೇಕ ಮಂದಿಯನ್ನು ತಲುಪುತ್ತಿಲ್ಲ ನೂರಾರು ಮಂದಿಗೆ ಫೋನ್‌ ಮಾಡಿ ಸಭೆ, ಸಮಾರಂಭಗಳಿಗೆ ಕರೆಯುವುದು ಕಷ್ಟದ ಕೆಲಸ. ಮತ್ತೆ ಮತ್ತೆ ಅವರಿಗೆ ನೆನಪಿಸುವುದು ಮತ್ತೂ ಕಷ್ಟದ ಕೆಲಸ. ಇದಕ್ಕೆಲ್ಲ ಪರಿಹಾರದ ರೂಪದಲ್ಲಿ ಸಿಕ್ಕಿರುವುದು ಧ್ವನಿಸಂದೇಶ ರವಾನೆ.

ಏನಿದು ಧ್ವನಿಸಂದೇಶ ರವಾನೆ?

ADVERTISEMENT

ಏಕಕಾಲಕ್ಕೆ ಹಲವು ಮಂದಿಗೆ ಧ್ವನಿಸಂದೇಶವನ್ನು ರವಾನಿಸುವ ತಾಂತ್ರಿಕತೆಯನ್ನು ಹೆಚ್ಚಿನ ರಾಜಕೀಯ ಮುಖಂಡರು ಅನುಸರಿಸುತ್ತಿದ್ದಾರೆ. ತಂತ್ರಜ್ಞಾನ ಸೇವೆ ನೀಡುವ ಕೆಲವು ಸಂಸ್ಥೆಗಳು ಅಗ್ಗದ ದರಕ್ಕೆ ಇಂತಹ ಸೇವೆ ಒದಗಿಸುತ್ತಿವೆ. ಇದರಿಂದ ಆಕರ್ಷಿತರಾಗಿರುವ ಮುಖಂಡರು ಈ ವಿಧಾನದಲ್ಲೇ ಸಂದೇಶಗಳನ್ನು ರವಾನಿಸುತ್ತಿದ್ದಾರೆ.ಒಮ್ಮೆ ಸಂದೇಶವನ್ನು ರೆಕಾರ್ಡ್‌ ಮಾಡಿ, ಈ ಸಂದೇಶವನ್ನು ಕಳುಹಿಸಬೇಕಾದ ಮೊಬೈಲ್ ಸಂಖ್ಯೆಗಳ  ಪಟ್ಟಿಯನ್ನು ನೀಡಿದರೆ ಸಾಕು. ಕಂಪೆನಿಯೇ ಅಷ್ಟೂ ಸಂಖ್ಯೆಗಳಿಗೆ ಒಮ್ಮೆಗೆ ಸಂದೇಶಗಳನ್ನು ರವಾನಿಸುತ್ತದೆ.

ಕಾರ್ಯನಿರ್ವಹಣೆ ಹೇಗೆ?:  ಮೊದಲು ಒಂದು ನಿರ್ದಿಷ್ಟ ಸಂಖ್ಯೆಯಿಂದ ಮೊಬೈಲ್ ಕರೆ ಬರುತ್ತದೆ. ಅದನ್ನು ಸ್ವೀಕರಿಸಿದಾಕ್ಷಣ ‘ನಾನು ನಿಮ್ಮ....‘ ಎಂಬ ಸಂದೇಶ ಕೇಳಿ ಬರುತ್ತದೆ. ಒಂದು ಅಥವಾ ಎರಡು ನಿಮಿಷದ ಧ್ವನಿಸಂದೇಶ ಮುಗಿದ ಬಳಿಕ ಕೊನೆಯಲ್ಲಿ ಈ ತಂತ್ರಜ್ಞಾನ ಸೇವೆ ನೀಡಿದ ಕಂಪೆನಿಯ ಹೆಸರು ಕೇಳಿ ಬರುತ್ತದೆ.

ಜನರಲ್ಲಿ ಜಾಗೃತಿ ಮೂಡಿಸಲು ಬಳಕೆ

*ಕೇವಲ ರಾಜಕೀಯ ನಾಯಕರಷ್ಟೇ ಅಲ್ಲ ಪೊಲೀಸ್ ಇಲಾಖೆ ಸಹ ಧ್ವನಿಸಂದೇಶ ಸೌಲಭ್ಯವನ್ನು ಜನರಲ್ಲಿ ಜಾಗೃತಿ ಮೂಡಿಸಲು ಬಳಕೆ ಮಾಡುತ್ತಿದೆ. ಕುಲದೀಪ್‌ಕುಮಾರ್ ಜೈನ್‌ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಅವಧಿಯಲ್ಲಿ ಆನ್‌ಲೈನ್ ಮೂಲಕ ದೂರು ನೀಡುವ ಹೊಸ ವ್ಯವಸ್ಥೆ ಕುರಿತು ಜನರಲ್ಲಿ ಅರಿವು ಮೂಡಿಸಲು ಇದನ್ನು ಬಳಕೆ ಮಾಡಿಕೊಂಡಿದ್ದರು.

*ವಿವಿಧ ಪಕ್ಷಗಳು ತಮ್ಮ ಬೂತ್‌ಮಟ್ಟದ ಕಾರ್ಯಕರ್ತರಿಗೆ ಸಭೆ ಕುರಿತು ಮಾಹಿತಿ ರವಾನಿಸಲು ಇದನ್ನು ಬಳಕೆ ಮಾಡಿಕೊಳ್ಳಲಾಗಿದೆ.

*ಎ.ಆರ್.ಕೃಷ್ಣಮೂರ್ತಿ ಕಾಂಗ್ರೆಸ್ ಸೇರುವ ವಿಚಾರವನ್ನು ತಲುಪಿಸಲು ಇದು ಬಳಕೆಯಾಗಿದೆ.

*ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳು ಈಚೆಗೆ ನಡೆಸಿದ ಸಮಾವೇಶದ ಮಾಹಿತಿ ತಲುಪಿಸಲು, ಮತ್ತೆ ಮತ್ತೆ ಕಾರ್ಯಕರ್ತರಿಗೆ, ಮುಖಂಡರಿಗೆ ನೆನಪಿಸಲು ಇದನ್ನು ಬಳಸಿಕೊಂಡಿದ್ದಾರೆ.

*ಹರವೆ ಮಠದಲ್ಲಿ ಈಚೆಗೆ ನಡೆದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 102ನೇ ಜಯಂತ್ಯುತ್ಸವ ಕುರಿತ ಕಾರ್ಯಕ್ರಮದಲ್ಲಿ ಈ ಸೌಲಭ್ಯ ಬಳಕೆ ಮಾಡಲಾಗಿದೆ.

*ಮದುವೆ ಮೊದಲಾದ ಖಾಸಗಿ ಕಾರ್ಯಕ್ರಮಗಳಿಗೆ ಆಹ್ವಾನ ನೀಡಲೂ ಇದನ್ನು ಬಳಸಿಕೊಳ್ಳಲಾಗುತ್ತಿದೆ.

ಕಿರಿಕಿರಿ ಎನಿಸಿದರೆ?

ಒಂದು ವೇಳೆ ಇಂತಹ ಧ್ವನಿಸಂದೇಶಗಳು ಕಿರಿಕಿರಿ ಎನಿಸಿದರೆ ಟ್ರಾಯ್ ನಿಯಮಾವಳಿ ಪ್ರಕಾರ ಅತ್ಯಂತ ಸರಳವಾಗಿ ಬ್ಲಾಕ್ ಮಾಡುವ ಅವಕಾಶವೂ ಇದೆ. ಧ್ವನಿಸಂದೇಶ ರವಾನಿಸುವವರು ನೀಡುವ ಮೊಬೈಲ್ ಸಂಖ್ಯೆಗಳಿಗಷ್ಟೇ ಕರೆ ಹೋಗುವುದರಿಂದ ಎಲ್ಲರಿಗೂ ಕಿರಿಕಿರಿ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.