ADVERTISEMENT

ತಬ್ಬಿಬ್ಬುಗೊಳಿಸುವ ಜಿಲ್ಲಾಡಳಿತ ವೆಬ್‌ಸೈಟ್

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 6:55 IST
Last Updated 17 ಫೆಬ್ರುವರಿ 2011, 6:55 IST

ಚಾಮರಾಜನಗರ: ಜಿಲ್ಲೆಯ ಬಗ್ಗೆ ಮಾಹಿತಿ ಪಡೆಯಲು ಜಿಲ್ಲಾಡಳಿತದ ಅಂತರ್ಜಾಲ ತಾಣ ಜಾಲಾಡುವ ಸಾರ್ವಜನಿಕರು ಈಗ ತಬ್ಬಿಬ್ಬುಗೊಳ್ಳುವಂತಾಗಿದೆ. ವೆಬ್‌ಸೈಟ್‌ನಲ್ಲಿ ಹಳೆಯ ಮಾಹಿತಿಗಳೇ ತುಂಬಿರು ವುದು ಇದಕ್ಕೆ ಮೂಲ ಕಾರಣ!  ಜಿಲ್ಲಾಡಳಿತದ ವೆಬ್‌ಸೈಟ್ (chamrajnagar.nic.in) ಅಧ್ವಾನದ ಮೂಟೆಯಾಗಿದೆ. ಇಂದಿಗೂ ಅಪ್‌ಡೇಟ್ ಮಾಡುವ ಪ್ರಕ್ರಿಯೆ ನಡೆದಿಲ್ಲ. ಅದರಲ್ಲಿ ದಾಖಲಿಸಿರುವ ಕೆಲವು ಮಾಹಿತಿ ಕೂಡ ಅಪೂರ್ಣವಾಗಿವೆ. ಜಿಲ್ಲೆಯ ಬಗ್ಗೆ ಮಾಹಿತಿ ಪಡೆಯಲು ಈ ವೆಬ್‌ಸೈಟ್‌ಗೆ ಹೋಗುವುದು ಸಾಮಾನ್ಯ. ಆದರೆ, ಅಲ್ಲಿ ಸಿಗುವ ವಿವರ ತಪ್ಪಾಗಿರುತ್ತದೆ ಅಷ್ಟೇ.

ಪ್ರಸ್ತುತ ಕೆ. ಅಮರನಾರಾಯಣ ಜಿಲ್ಲಾಧಿಕಾರಿಯಾಗಿದ್ದಾರೆ. ಅವರು ಅಧಿಕಾರ ಸ್ವೀಕರಿಸಿ ಹಲವು ತಿಂಗಳು ಕಳೆದಿವೆ. ಆದರೆ, ವೆಬ್‌ಸೈಟ್‌ನ ದಾಖಲೆ ಪ್ರಕಾರ ಚಾಮರಾಜ ನಗರದ ಜಿಲ್ಲಾಧಿಕಾರಿ ಚಕ್ರವರ್ತಿ ಮೋಹನ್! ಹೆಚ್ಚುವರಿ ಜಿಲ್ಲಾಧಿಕಾರಿ ಬದಲಾಗಿದ್ದರೂ ಹಳೆಬರ ಹೆಸರೇ ರಾರಾಜಿಸುತ್ತಿದೆ. ಜಿ.ಪಂ. ಉಪ ಕಾರ್ಯದರ್ಶಿ ಕೂಡ ಬದಲಾಗಿದ್ದಾರೆ. ಆದರೆ, ಈ ಹಿಂದಿನ ಶಂಕರರಾಜ್ ಅವರ ಹೆಸರೇ ಇದೆ.

ಈ ವೆಬ್‌ಸೈಟ್‌ನ ಅವ್ಯವಸ್ಥೆ ಇಷ್ಟಕ್ಕೇ ಕೊನೆಯಾಗುವುದಿಲ್ಲ. ಜಿಲ್ಲೆಯ ರಾಜಕಾರಣದ ಬಗ್ಗೆ ಮಾಹಿತಿ ನೀಡುವ ವಿಭಾಗ ಜಾಲಾಡಿ ದರೂ ಹಳೆಯ ಮಾಹಿತಿಗಳೇ ಕಣ್ಣಿಗೆ ರಾಚುತ್ತವೆ. ಜಿಲ್ಲೆಯನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯರ ಅವಧಿ ಮುಗಿದಿದೆ. ಚುನಾವಣೆ ನಡೆದು ನೂತನ ಸದಸ್ಯರು ಸಹ ಆಯ್ಕೆಯಾಗಿದ್ದಾರೆ. ಆದರೆ, ಹೊಸ ಸದಸ್ಯರ ಹೆಸರು ಇನ್ನೂ ವೆಬ್‌ಸೈಟ್‌ಗೆ ಸೇರಿಲ್ಲ.

ಸರ್ಕಸ್ ಮಾಡಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ 21 ಮಂದಿ ನೂತನ ಸದಸ್ಯರು ಚುನಾಯಿತರಾಗಿದ್ದಾರೆ. ಈಚೆಗೆ ಜಿ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯೂ ನಡೆದಿದೆ.ಆದರೆ, ವೈಬ್‌ಸೈಟ್‌ನಲ್ಲಿ ಇನ್ನೂ ಮಾಜಿ ಸದಸ್ಯರ ಹೆಸರಿದೆ. ನೂತನ ಸದಸ್ಯರ ಬಗ್ಗೆ ನಾಗರಿಕರು ಮಾಹಿತಿ ಪಡೆಯಲು ವೆಬ್‌ಸೈಟ್‌ಗೆ ಹೋದರೆ ಪೆಚ್ಚಾಗುವುದು ನಿಶ್ಚಿತ.
ಜಿಲ್ಲೆಯ ಪ್ರವಾಸೋದ್ಯಮ ಕುರಿತು ದಾಖಲಿಸಿರುವ ಮಾಹಿತಿ ಸಂಕ್ಷಿಪ್ತವಾಗಿದೆ.

ಭರಚುಕ್ಕಿ, ಕೆ. ಗುಡಿ, ಸುವರ್ಣಾವತಿ ಜಲಾಶಯ, ಕನಕಗಿರಿ, ಮಲೆಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಬೆಟ್ಟ ಹೊರತುಪಡಿಸಿದರೆ ಉಳಿದ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿಯೇ ಇಲ್ಲ. ವೆಬ್‌ಸೈಟ್ ಮೂಲಕ ಪ್ರವಾಸಿಗರಿಗೆ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳ ಬಗ್ಗೆ ಸಮರ್ಪಕ ಮಾಹಿತಿ ನೀಡುವ ಪ್ರಯತ್ನ ಕಾಣಸಿಗುವುದಿಲ್ಲ. ಶಿಕ್ಷಣಕ್ಕೆ ಮೀಸಲಾದ ವಿಭಾಗದಲ್ಲಿರುವ ಮಾಹಿತಿ ಬೆಚ್ಚಿಬೀಳಿಸುತ್ತದೆ. ಜಿಲ್ಲೆಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಯಾಗಿ ನಾಲ್ಕು ವರ್ಷ ಕಳೆಯುತ್ತಾ ಬಂದಿದೆ. ಆದರೆ, ವೆಬ್‌ಸೈಟ್‌ನ ದಾಖಲೆ ಪ್ರಕಾರ ಜಿಲ್ಲೆಯಲ್ಲಿ ಯಾವುದೇ ಎಂಜಿನಿಯರಿಂಗ್ ಕಾಲೇಜು ಇಲ್ಲ!

ಜಿಲ್ಲೆಯಲ್ಲಿರುವ ಪ್ರಾಥಮಿಕ, ಪ್ರೌಢಶಾಲೆ, ಪಿಯು, ಪದವಿ ಕಾಲೇಜುಗಳು ಹಾಗೂ ವಿದ್ಯಾರ್ಥಿಗಳ ಬಗ್ಗೆ ಸಮರ್ಪಕ ಮಾಹಿತಿ ಪ್ರಕಟಿಸುವುದು ಜಿಲ್ಲಾಡಳಿತದ ಜವಾಬ್ದಾರಿ. ಆದರೆ, 2006-07ನೇ ಸಾಲಿನ ಅಂಕಿ-ಅಂಶವನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದವರೆಗಿನ ಶಿಕ್ಷಣ ಇಲಾಖೆಯ ಮಾಹಿತಿ ಅಪ್‌ಡೇಟ್ ಆಗಿಲ್ಲ. ಆರೋಗ್ಯ ಸಂಬಂಧಿಸಿದ ವಿಭಾಗದ ಮಾಹಿತಿಯೂ ಅಪೂರ್ಣವಾಗಿದೆ.

ಜಿಲ್ಲೆಯಲ್ಲಿ ವಾರ್ಷಿಕವಾಗಿ ಹೆಚ್ಚಳವಾಗಿರುವ ಜನಸಂಖ್ಯೆ ಪ್ರಮಾಣ, ಲಿಂಗ ಸಮಾನತೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅದರಲ್ಲಿ ಲಭ್ಯವಿರುವ ಸೇವೆ ಬಗ್ಗೆ ಹೊಸದಾಗಿ ಮಾಹಿತಿ ದಾಖಲಿಸುವ ಕೆಲಸ ನಡೆದಿಲ್ಲ. ಜಿಲ್ಲೆಯ ಚಿತ್ರಣ ಕುರಿತು ವೆಬ್‌ಸೈಟ್‌ನಲ್ಲಿ ಸಮಗ್ರ ಮಾಹಿತಿ ದಾಖಲಿಸುವುದು ಜಿಲ್ಲಾಡಳಿತ ಹೊಣೆ. ಜತೆಗೆ, ಕಾಲಕಾಲಕ್ಕೆ ಹೊಸದಾಗಿ ಮಾಹಿತಿ ಸೇರಿಸಬೇಕಿದೆ. ಆದರೆ, ಹಳೆಯ ಮಾಹಿತಿಯನ್ನೇ ಉಳಿಸಿಕೊಂಡು ಸಾರ್ವಜ ನಿಕರಿಗೆ ತಪ್ಪು ವಿವರ, ಅಂಕಿ-ಅಂಶ ನೀಡುವುದು ಎಷ್ಟು ಸರಿ? ಎನ್ನುವುದು ನಾಗರಿಕರ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.