ಚಾಮರಾಜನಗರ: ಜನಪದ ಸಂಸ್ಕೃತಿಯಲ್ಲಿ ಸೋಬಾನೆ ಪದಕ್ಕೆ ವಿಶಿಷ್ಟ ಸ್ಥಾನವಿದೆ. ಕೆಲವು ಹಳ್ಳಿಗಳಲ್ಲಿ ಇಂದಿಗೂ ಸೋಬಾನೆ ಪದ ಹಾಡುವವರ ತಂಡಗಳಿವೆ. ಗ್ರಾಮೀಣ ಜಗತ್ತಿನಲ್ಲಿ ಸೋಬಾನೆ ಹಾಡು ಇಲ್ಲದೆ ಮದುವೆ ಪೂರ್ಣವಾಗುವುದು ವಿರಳ.
ಮದುವೆ ವೇಳೆ ಬಳೆಶಾಸ್ತ್ರ ಸೇರಿದಂತೆ ವಿವಿಧ ಶಾಸ್ತ್ರ ಮಾಡುವ ವೇಳೆ ಸೋಬಾನೆ ಹಾಡುಗಳು ಕೇಳುಗರ ಮನತಣಿಸುತ್ತವೆ. ಆದರೆ, ಧಾರಾವಾಹಿಗಳ ಅಬ್ಬರ ನಡುವೆ ಸೋಬಾನೆ ಪದ ಹಾಡುವ ಹೆಂಗಳೆಯರ ಸಂಖ್ಯೆ ಕಡಿಮೆಯಾಗುತ್ತಿದೆ. ಕಲಿಯುವ ಉತ್ಸಾಹವೂ ಕ್ಷೀಣಿಸಿದೆ. ಹೊಸ ತಲೆಮಾರಿನ ಹೆಣ್ಣುಮಕ್ಕಳು ಸೋಬಾನೆ ಪದಗಳಿಂದ ದೂರವೇ ಉಳಿದಿದ್ದಾರೆ.
ಜಿಲ್ಲಾ ಕೇಂದ್ರದ ಗಾಳೀಪುರ ಬಡಾವಣೆಯ ತಾಯಮ್ಮ ಸೋಬಾನೆ ಪದ ಹಾಡುವುದಲ್ಲಿ ಸಿದ್ಧಹಸ್ತರಾಗಿದ್ದಾರೆ. ಶಾಲೆಯ ಮೆಟ್ಟಿಲು ಹತ್ತದ ತಾಯಮ್ಮ ಅವರಿಗೆ ಈಗ 67 ವರ್ಷ.
ತನ್ನ ಅಜ್ಜಿ ಚಿಕ್ಕ ಮಾದಮ್ಮ ಅವರಿಂದ ಬಳುವಳಿಯಾಗಿ ಸೋಬಾನೆ ಹಾಡುಗಾರಿಕೆ ಕಲಿತರು. ಸೋಬಾನೆ ಮತ್ತು ಸಂಪ್ರದಾಯ ಪದ ಹಾಡುವ ಕಲೆ ಅವರಿಗೆ ಸಿದ್ಧಿಸಿದೆ. 30 ವರ್ಷದಿಂದಲೂ ಸೋಬಾನೆ ಹಾಡು ಹಾಡುತ್ತಿರುವ ಅವರು ತನ್ನ ಅಜ್ಜಿಯನ್ನು ಇಂದಿಗೂ ನೆನೆಯುತ್ತಾರೆ. ಹಳ್ಳಿಗಳಲ್ಲಿ ನಡೆಯುವ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸೋಬಾನೆ ಮತ್ತು ಸಂಪ್ರದಾಯ ಪದಗಳನ್ನು ಹಾಡುತ್ತಾರೆ.
ಮದುವೆ, ತೊಟ್ಟಿಲು ಶಾಸ್ತ್ರ ಸೇರಿದಂತೆ ಜಿಲ್ಲೆಯ ವಿವಿಧೆಡೆ ನಡೆಯುವ ಜಾತ್ರೆಗಳಲ್ಲೂ ಹಾಡುತ್ತಾರೆ. ಸುತ್ತೂರು ಕ್ಷೇತ್ರ, ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಅಲ್ಲಿ ನಡೆಯುವ ಉತ್ಸವಗಳಲ್ಲೂ ಸೋಬಾನೆ ಪದ ಹಾಡಿ ಜನರಿಗೆ ಮೋಡಿ ಮಾಡಿದ್ದಾರೆ.
ಸೋಬಾನೆ ಪದ, ಸಂಪ್ರದಾಯ ಪದ, ಮಹದೇಶ್ವರ ಗೀತೆ, ಸಿದ್ದಪ್ಪಾಜಿ ಕುರಿತು, ಸರಸ್ವತಿ ಗೀತೆ ಹಾಗೂ ಮಕ್ಕಳ ಹಾಡುಗಳನ್ನು ಕರಗತ ಮಾಡಿಕೊಂಡಿದ್ದಾರೆ. ತಾಯಮ್ಮ ಅವರ ಹಾಡುಗಾರಿಕೆ ಬಗ್ಗೆ ಗೊತ್ತಿರುವ ಜನರು ತೊಟ್ಟಿಲು ಶಾಸ್ತ್ರದ ಸಮಾರಂಭಗಳಿಗೆ ಇವರನ್ನು ಆಹ್ವಾನಿಸುತ್ತಾರೆ.
ತಾಯಮ್ಮ ಅವರ ಕಲೆಗೆ ಕರ್ನಾಟಕ ಜಾನಪದ ಅಕಾಡೆಮಿಯ 2014ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಯೂ ಸಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅತ್ಯುತ್ತಮ ಮಹಿಳಾ ಪ್ರಶಸ್ತಿ ನೀಡಿ ಗೌರವಿಸಿದೆ.
ರಾಜ್ಯದ ವಿವಿಧೆಡೆಯೂ ಸೋಬಾನೆ ಪದದ ಸೊಬಗು ಪಸರಿಸಿದ್ದಾರೆ, ಜತೆಗೆ, ಆಕಾಶವಾಣಿಯಲ್ಲೂ ಸೋಬಾನೆ ಹಾಡಿನ ರಸದೌತಣ ಉಣಬಡಿಸಿದ್ದಾರೆ.
ಪ್ರಸ್ತುತ ಗುಡಿಸಲಿನಲ್ಲಿ ತನ್ನ ತಾಯಿ ದೇವಮ್ಮ ಅವರೊಂದಿಗೆ ಇದ್ದಾರೆ. ಅವರು ಕೂಲಿ ಮಾಡುತ್ತಾರೆ. ಎರಡು ಕುರಿ ಮರಿ ಸಾಕಿದ್ದಾರೆ. ಪ್ರತಿ ತಿಂಗಳು ₹ 1,500 ಮಾಸಾಶನ ಬರುತ್ತದೆ. ಈ ಹಣ ನಂಬಿಕೊಂಡೇ ಬದುಕು ದೂಡುತ್ತಿದ್ದಾರೆ. ಜಿಲ್ಲೆಯ ಜನಪದ ಸಂಸ್ಕೃತಿಯ ದ್ಯೋತಕವಾಗಿರುವ ಅವರಿಗೆ ಸುಸಜ್ಜಿತ ಸೂರು ಕಟ್ಟಿಕೊಡುವ ಕೆಲಸಕ್ಕೆ ಜನಪ್ರತಿನಿಧಿಗಳು, ಸ್ಥಳೀಯ ನಗರ ಆಡಳಿತ ಮುಂದಾಗಿಲ್ಲ.
‘ನಾನು ಶಿಕ್ಷಣ ಪಡೆದಿಲ್ಲ. ಸೋಬಾನೆ ಪದ ಕಟ್ಟುವುದೇ ನನ್ನ ಶಿಕ್ಷಣ ಮತ್ತು ಕಾಯಕ. ಇದು ನನಗೆ ನನ್ನ ಅಜ್ಜಿ ನೀಡಿದ ಬಳುವಳಿ. ಸರ್ಕಾರ ನನ್ನ ಹಾಡುಗಾರಿಕೆ ಗುರುತಿಸಿ ಪ್ರಶಸ್ತಿ ನೀಡಿರುವುದು ಖುಷಿ ತಂದಿದೆ. ಸೋಬಾನೆ ಪದ ಕಟ್ಟಿ ಹಾಡು ಹಾಡುವ ಕಲೆ ನನಗೆ ಸಿದ್ಧಿಸಿದೆ. ಇದನ್ನು ಕಲಿಯಲು ಆಸಕ್ತಿ ಇರುವವರು ಬಂದರೆ ಹೇಳಿಕೊಡುತ್ತೇನೆ’ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.