ADVERTISEMENT

ತೆರಿಗೆ ಸಂಗ್ರಹಕ್ಕೆ ಕಟ್ಟುನಿಟ್ಟಿನ ಕ್ರಮ: ಶಾಸಕ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 9:22 IST
Last Updated 19 ಸೆಪ್ಟೆಂಬರ್ 2013, 9:22 IST

ಕೊಳ್ಳೇಗಾಲ: ನಗರಸಭೆಗೆ ಬಾಕಿ ಇರುವ ಕುಡಿಯುವ ನೀರು ತೆರಿಗೆ ಸೇರಿದಂತೆ ಇತರೆ ತೆರಿಗೆ ಸಂಗ್ರಹಕ್ಕೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು ಎಂದು ಶಾಸಕ ಎಸ್‌. ಜಯಣ್ಣ ತಾಕೀತು ಮಾಡಿದರು.

ಪಟ್ಟಣದ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಪಟ್ಟಣದ ಅಭಿವೃದ್ಧಿ ಕುರಿತು ಕರೆಯಲಾಗಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಭೆಯಲ್ಲಿ ಅವರು ಮಾತನಾಡಿದರು.

ನಗರಸಭೆಗೆ 2013–14ನೇ ಸಾಲಿಗೆ 1ಕೋಟಿ ತೆರಿಗೆ ಪೈಕಿ ಕೇವಲ 30 ಲಕ್ಷ ಮಾತ್ರ ಸಂಗ್ರಹವಾಗಿದೆ. ಮುಂದಿನ ಮಾರ್ಚ್‌ತಿಂಗಳ ಒಳಗೆ ತೆರಿಗೆ ಪಾವತಿಗೆ ಸಿಬ್ಬಂದಿ ಮತ್ತು ಅಧಿಕಾರಿಗಳು ಸಮರೋಪಾದಿಯಲ್ಲಿ ಕಾಯರ್ನಿರ್ವಹಿಸಬೇಕು ಎಂದು ಸೂಚಿಸಿದರು.

ಪಟ್ಟಣದಲ್ಲಿ ನೀರು, ಸ್ವಚ್ಚತೆ, ಬೀದಿ ದೀಪ ಸಮರ್ಪಕ ನಿರ್ವಹಣೆಗೆ ಅಧಿಕಾರಿಗಳು ಹೆಚ್ಚಿನ ಗಮನಹರಿಸಬೇಕು. ಜನತೆಗೆ ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ದೊರಕಿಸಲು ಮುಂದಾಗಬೇಕು ಎಂದು ಹೇಳಿದರು.

ಪೌರಾಯುಕ್ತ ಕೆ.ಎಲ್‌. ಬಸವರಾಜು ಮಾತನಾಡಿ ನಗರಸಭೆಯಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರ ಹುದ್ದೆ ಸೇರಿದಮತೆ ಕಂದಾಯ ವಸೂಲಿಗಾರರ ಹುದ್ದೆಯೂ ಸಹ ಖಾಲಿ ಇರುವುದರಿಂದ ತೊಂದರೆಯಾಗಿದೆ. ಈ ಹುದ್ದೆಗಳ ಭರ್ತಿಗೆ ಶಾಸಕರು ಮುಂದಾಗಬೇಕು ಎಂದು ಮನವಿ ಮಾಡಿದರು.

ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಆದಾಯದ ಮೂಲ ಇಲ್ಲದಿರುವ ಕಾರಣ ಪ್ರಮುಖ ಆದಾಯವಾಗಿರುವ ಕುಡಿಯುವ ನೀರು ಮತ್ತು ತೆರಿಗೆ ಹಣವನ್ನು ನಾಗರೀಕರು ಪಾವತಿಸುವ ಮೂಲಕ ಮುಲಭೂತ ಸೌಲಭ್ಯ ದೊರಕಿಸಲು ನಗರಸಭೆಯೊಡನೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ನಗರಸಭೆ ಅಧ್ಯಕ್ಷೆ ಮಹಾದೇವಿ, ಉಪಾಧ್ಯಕ್ಷ ಸಯದ್‌ ಕಲೀಮುಲ್ಲಾ, ಪ್ರಭಾರ ಮೇನೇಜರ್‌ ಲಿಂಗರಾಜು, ಎಇಇ ನಟರಾಜು ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.