ADVERTISEMENT

ತೋಟಗಾರಿಕೆ ಬೆಳೆ ಉತ್ತೇಜನಕ್ಕೆ ಕರೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 5:30 IST
Last Updated 25 ಫೆಬ್ರುವರಿ 2011, 5:30 IST

ಯಳಂದೂರು: ಮನೆಯ ಹಿತ್ತಲಿನಲ್ಲೇ ತೋಟಗಾರಿಕೆ ಬೆಳೆ ಬೆಳೆದು, ಅವುಗಳಿಂದ ತಯಾರಿಸಿದ ಆಹಾರ ಸೇವಿಸುವುದರಿಂದ ತೋಟಗಾರಿಕಾ ಬೆಳೆಗಳಿಗೂ ಉತ್ತೇಜನ ದೊರೆಯುವುದರ ಜೊತೆಗೆ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಜಿಲ್ಲಾ ತೋಟಗಾರಿಕಾ ಇಲಾಖೆಯ ವಿನುತ ತಿಳಿಸಿದರು.

ತೋಟಗಾರಿಕಾ ಇಲಾಖೆಯ ವತಿಯಿಂದ ಗುರುವಾರ  ಹಮ್ಮಿಕೊಂಡಿದ್ದ ‘ರೈತ ಮಹಿಳೆಯರ ತರಬೇತಿ ಕಾರ್ಯಕ್ರಮ’ದಲ್ಲಿ ಮಾತನಾಡಿದರು. ಹಸಿರು ತರಕಾರಿ, ಸೊಪ್ಪುಗಳನ್ನು ತಮ್ಮ ಹಿತ್ತಲಲ್ಲೇ ಬೆಳೆಯಬಹುದಾಗಿದೆ. ಮನೆಯಲ್ಲೇ ಬೆಳೆದ ತರಕಾರಿಗಳಲ್ಲಿ ಕೀಟನಾಶಕಗಳ ಬಳಕೆ ಇಲ್ಲದಿರುವುದರಿಂದ ಪೌಷ್ಠಿಕಾಂಶವೂ ಅಧಿಕವಾಗಿರುತ್ತದೆ ಎಂದು ತಿಳಿಸಿದರು.

ಮಹಿಳಾ ಸಂಘದ ಪ್ರತಿನಿಧಿಗಳು ಹಣ ಉಳಿತಾಯ ಮಾಡಿ ಕೂಡಿಟ್ಟು ಅದನ್ನು ಬೇರೆಡೆಗೆ ವಿನಿಯೋಗಿಸುವುದರ ಬದಲು ಹಣ್ಣಿನ ಪೇಯ, ಜಾಮ್, ಚಿಪ್ಸ್‌ಗಳನ್ನು ತಯಾರಿಸಿ ಮಾರಾಟ ಮಾಡುವುದರಿಂದ ಲಾಭಗಳಿಸಬಹುದು ಎಂದು ತಿಳಿಸಿದರು. ಕೃಷಿ ಹೊಂಡ ನಿರ್ಮಿಸಲು, ಎರೆಹುಳು, ಜೇನು ಸಾಕಾಣಿಕೆಗೆ ಸರ್ಕಾರ ನೀಡುವ ಸಹಾಯಧನವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.

ಜಿ.ಪಂ. ಉಪಾಧ್ಯಕ್ಷ ಕಿನಕಹಳ್ಳಿ ಸಿದ್ಧರಾಜು, ತಾ.ಪಂ. ಸದಸ್ಯರಾದ ಎಲ್.ರಾಮಚಂದ್ರು, ಎಂ.ನಾಗೇಶ್, ಕೆ.ಪಿ.ಶಿವಣ್ಣ, ವೆಂಕಟಾಚಲ, ಗಂಗಾಮಣಿ, ಉಮಾವತಿ, ಲಕ್ಷ್ಮೀದೇವಿ ಇಲಾಖೆಯ ಉಪನಿರ್ದೇಶಕ ದೇವರಾಜು, ನಂಜಯ್ಯ, ಸಲೀಂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.