ADVERTISEMENT

ದೀಪಾವಳಿ ಜಾತ್ರೆಗೆ ಹರಿದುಬಂದ ಭಕ್ತಸಾಗರ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 5:53 IST
Last Updated 20 ಅಕ್ಟೋಬರ್ 2017, 5:53 IST

ಮಲೆಮಹದೇಶ್ವರ ಬೆಟ್ಟ: ಬೆಟ್ಟದಲ್ಲಿ ಎಲ್ಲಿ ನೋಡಿದರೂ ಭಕ್ತರು. ದೂರದ ಊರುಗಳಿಂದ ಬಂದಿದ್ದ ಜನ ಸ್ವಾಮಿಯ ದರ್ಶನಕ್ಕಾಗಿ ದೇವಸ್ಥಾನದತ್ತ ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ದೀಪಾವಳಿ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಮಂದಿ ಭಕ್ತರು ಬಂದು, ಮಲೆ ಮಹದೇಶ್ವರ ಸ್ವಾಮಿಯ ದರ್ಶನ ಪಡೆದರು.

18ರಿಂದ ಪ್ರಾರಂಭವಾದ ಮಲೆಮಹದೇಶ್ವರ ಸ್ವಾಮಿಯ ದೀಪಾವಳಿ ಜಾತ್ರೆಯ ನಿಮಿತ್ತ ಬುಧವಾರ ಶ್ರೀ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ ನೆರವೇರಿಸಲಾಯಿತು. ದೇವಾಲಯಕ್ಕೆ ಬಂದಿದ್ದ ಭಕ್ತರು ತಮ್ಮ ಹರಕೆ ಕಾಣಿಕೆಗಳನ್ನು ಸಲ್ಲಿಸಿದರು. ಬಸವವಾಹನ, ಹುಲಿವಾಹನ, ರುದ್ರಾಕ್ಷಿ ಮಂಟಪದ ಸೇವೆಗಳನ್ನು ನೆರವೇರಿಸಿದರು.

ಭಕ್ತರಿಗೆ ದೇವರ ದರ್ಶನಕ್ಕಾಗಿ ವಿಶೇಷವಾಗಿ ₹50, ₹100, ₹200 ಹಾಗೂ ₹300ರ ಕೌಂಟರ್‌ಗಳನ್ನು ತೆರೆಯಲಾಗಿತ್ತು.  ಭಕ್ತರು ಮುದ್ದು ಮಾದಪ್ಪನ ಸನ್ನಿಧಿಗೆ ಬಂದು ಉರುಳು ಸೇವೆ ಮಾಡಿ, ಅಂತರ ಗಂಗಯಲ್ಲಿ ಮಿಂದು ಪಂಜಿನ ಸೇವೆಯನ್ನು ನೆರವೇರಿಸಿದರು.

ADVERTISEMENT

ಎರಡನೇ ದಿನವಾದ ಗುರುವಾರ ಅಮಾವಾಸ್ಯೆ ಪ್ರಯುಕ್ತ ಬೇಡಗಂಪಣ ಸಮುದಾಯದ 28 ಹಳ್ಳಿಗಳ 101 ಹೆಣ್ಣು ಮಕ್ಕಳಿಂದ ಸ್ವಾಮಿಗೆ ಹಾಲರವಿ ಉತ್ಸವ ನೆರವೇರಿತು. ಬೇಡಗಂಪಣ ಹೆಣ್ಣು ಮಕ್ಕಳು ಹಾಲರವಿ ಉತ್ಸವ ನಡೆಯುವ ಹಿಂದಿನ ದಿನದ ರಾತ್ರಿಯಿಂದ ಉಪವಾಸವಿದ್ದು, ಬೆಳಗಿನ ಜಾವ 3 ಗಂಟೆಗೆ ಮಲೆಮಹದೇಶ್ವರ ಬೆಟ್ಟದಿಂದ ಸುಮಾರು 5 ಕಿಲೋ ಮೀಟರ್ ದೂರದಲ್ಲಿರುವ ಹಾಲರವಿ ಹಳ್ಳವನ್ನು ತಲುಪುತ್ತಾರೆ. ಮಡೆಮಾಡಿ ಅಲ್ಲಿಂದ ಜಲವನ್ನು ತಂದು ತಂಬಡಿಗೇರಿಯ ಮುಖ್ಯದ್ವಾರವಾದ ಹೊಸಕೊಳದ ಹತ್ತಿರವಿರುವ ಗದ್ದಿಗೆ ವೀರಪ್ಪನ ಬಳಿ ಇರಿಸಲಾಗಿತ್ತು.

ಸಾಲೂರು ಬೃಹನ್ಮಠದ ಮಠಾಧೀಶ ಗುರುಸ್ವಾಮಿ ಗದ್ದಿಗೆ ವೀರಪ್ಪನ ಸನ್ನಿಧಿಗೆ ತಲುಪಿ ಅಲ್ಲಿ ಕತ್ತಿ ಪವಾಡವನ್ನು ಮಾಡಿ ಅಲ್ಲಿಂದ ಹಾಲರವಿ ಉತ್ಸವವನ್ನು ಕರೆತಂದು ಶ್ರೀ ಸ್ವಾಮಿಗೆ ಅಭಿಷೇಕ ಮಾಡಿದರು. ಈ ಉತ್ಸವವನ್ನು ನೋಡಲು ಭಕ್ತರು ಮುಗಿಬಿದ್ದರು. ಜಾತ್ರೆಗೆ ಬಂದಿದ್ದ ಭಕ್ತರನ್ನು ನಿಭಾಯಿಸಲು ಪೊಲೀಸ್‌ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಅನ್ನದಾಸೋಹ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.