ADVERTISEMENT

ದೇಗುಲ ಜೀರ್ಣೋದ್ಧಾರ ನೆನೆಗುದಿಗೆ

ಸಮೀಪಿಸಿದ ಚಾಮರಾಜೇಶ್ವರಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 6:39 IST
Last Updated 1 ಜುಲೈ 2013, 6:39 IST

ಚಾಮರಾಜನಗರ: ಮತ್ತೆ ಚಾಮರಾಜೇಶ್ವರ ಸ್ವಾಮಿ ರಥೋತ್ಸವ ಬಂದಿದೆ. ಸಂಭ್ರಮದಿಂದ ಜಾತ್ರೆ ಆಚರಣೆಗೆ ಮುಜರಾಯಿ ಇಲಾಖೆಯಿಂದ ಸಿದ್ಧತೆಯೂ ನಡೆದಿದೆ. ಆದರೆ, ದೇವಸ್ಥಾನ ಮಾತ್ರ ಜೀರ್ಣೋದ್ಧಾರ ಕಂಡಿಲ್ಲ. ಹೊಸ ರಥದ ನಿರ್ಮಾಣ ಕಾರ್ಯ ಕೂಡ ನೆನೆಗುದಿಗೆ ಬಿದ್ದಿದೆ.

ಆಶಾಢ ಮಾಸದಲ್ಲಿ ಚಾಮರಾಜೇಶ್ವರ ಸ್ವಾಮಿ ರಥೋತ್ಸವ ನಡೆಯುವುದು ವಿಶೇಷ. ಈ ಬಾರಿ ಜುಲೈ 21ಕ್ಕೆ ವಿಜೃಂಭಣೆಯಿಂದ ರಥೋತ್ಸವ ನಡೆಸಲು ತಯಾರಿ ನಡೆದಿದೆ. ಜಾತ್ರೆ ವೇಳೆಯಲ್ಲಿ ಮಾತ್ರ ದೇವಸ್ಥಾನ ಜೀರ್ಣೋದ್ಧಾರ ಕಂಡಿಲ್ಲ ಎಂಬ ಮಾತು ಕೇಳಿಬರುತ್ತವೆ. ರಥೋತ್ಸವ ಪೂರ್ಣಗೊಂಡ ನಂತರ ಅಭಿವೃದ್ಧಿಯ ಮಾತು ಮೂಲೆಗೆ ಸರಿಯುತ್ತದೆ.

ಈ ದೇವಸ್ಥಾನ ಐತಿಹಾಸಿಕೆ ಹಿನ್ನೆಲೆ ಹೊಂದಿದೆ. ಪುರಾತನ ದೇವಾಲಯ ಜಿಲ್ಲಾ ಕೇಂದ್ರಕ್ಕೆ ಶಿಖರಪ್ರಾಯವಾಗಿದೆ. ಪರ ಊರುಗಳಿಂದ ಇಲ್ಲಿಗೆ ಬರುವ ನಾಗರಿಕರಿಗೆ ಆಕರ್ಷಣೆ ಮೂಡಿಸುತ್ತದೆ. ಆದರೆ, ದೇವಸ್ಥಾನದ ಬಳಿಗೆ ತೆರಳಿದರೆ ಅಲ್ಲಿರುವ ಅವ್ಯವಸ್ಥೆ ಕಂಡು ಮರುಕುಪಡುತ್ತಾರೆ.
ದೇವಸ್ಥಾನದ ಗೋಪುರ, ದೇಗುಲದ ಆವರಣ ಜೀರ್ಣೋದ್ಧಾರ ಕಂಡಿಲ್ಲ.

ದೇವಸ್ಥಾನದ ಮುಂಭಾಗದಲ್ಲಿಯೇ ಇರುವ ಉದ್ಯಾನವು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಿದೆ. ದೇವಸ್ಥಾನದ ಜೀರ್ಣೋದ್ಧಾರ ಸಂಬಂಧ ಮುಜರಾಯಿ ಇಲಾಖೆಯಿಂದ ರೂ 1.30 ಕೋಟಿ ವೆಚ್ಚದ ಅಂದಾಜುಪಟ್ಟಿ ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಜತೆಗೆ, ಹೊಸ ರಥ ನಿರ್ಮಾಣ ಸಂಬಂಧ ರೂ 1.10 ಕೋಟಿ ಮೊತ್ತದ ಅಂದಾಜುಪಟ್ಟಿ ಸಿದ್ಧಪಡಿಸಲಾಗಿತ್ತು.

ದೇಗುಲದ ಜೀರ್ಣೋದ್ಧಾರಕ್ಕಾಗಿ ಒಟ್ಟು ರೂ 2.40 ಕೋಟಿ ಅನುದಾನ ಮಂಜೂರು ಮಾಡಿಕೊಡಲು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದ ಪ್ರಸ್ತಾವಕ್ಕೆ ಅನುಮೋದನೆಯೇ ಸಿಕ್ಕಿಲ್ಲ. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ಮಂಜೂರು ಮಾಡಿಸುವ ಪ್ರಯತ್ನ ಮಾಡಿಲ್ಲ ಎನ್ನುವುದು ಭಕ್ತರ ಆರೋಪ.

ದೇವಸ್ಥಾನ ಮುಂಭಾಗದ ಮಣ್ಣಿನಲ್ಲಿ ಹೂತುಹೋಗಿರುವ ಪುಷ್ಕರಿಣಿಯನ್ನು ಪುನರುಜ್ಜೀವನಗೊಳಿಸಲು ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಕೆಲವು ಜನಪ್ರತಿನಿಧಿಗಳು ವಿಶೇಷ ಆಸ್ಥೆವಹಿಸಿದ್ದರು. ಇದಕ್ಕಾಗಿ ಸುಮಾರು ರೂ 30 ಲಕ್ಷ ವೆಚ್ಚ ಮಾಡಲು ಹಿಂದಿನ ರಾಜ್ಯ ಸರ್ಕಾರ ಕೂಡ ನಿರ್ಧರಿಸಿತ್ತು. ಅಷ್ಟಮಂಗಳ ಪ್ರಶ್ನೆ ಕೇಳಿ ಹೋಮಹವನ ಮಾಡಿಸಿದ ಜನಪ್ರತಿನಿಧಿಗಳು ದೇವಾಲಯದ ಜೀರ್ಣೋದ್ಧಾರಕ್ಕೆ ಅನುದಾನ ಮಂಜೂರು ಮಾಡಿಸಲು ಹಿಂದೇಟು ಹಾಕಿದರು ಎಂಬುದು ಭಕ್ತರ ಆರೋಪ.

`ಮುಜರಾಯಿ ಇಲಾಖೆಯು ದೇವಸ್ಥಾನದ ಜೀರ್ಣೋದ್ಧಾರ ಮಾಡುವಲ್ಲಿ ಸಂಪೂರ್ಣ ನಿರ್ಲಕ್ಷ್ಯವಹಿಸಿದೆ. ಪ್ರವಾಸೋದ್ಯಮ ತಾಣವಾಗಿ ದೇಗುಲದ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ಕೂಡಲೇ, ಹೊಸ ಗೋಪುರ, ರಥದ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಲು ಕ್ರಮಕೈಗೊಳ್ಳಬೇಕು. ತ್ವರಿತಗತಿಯಲ್ಲಿ ಅನುದಾನ ಬಿಡುಗಡೆಗೊಳಿಸಿ ಅಭಿವೃದ್ಧಿಗೆ ಒತ್ತು ನೀಡಬೇಕು. ಉದ್ಯಾನದ ನಿರ್ವಹಣೆಗೆ ನಗರಸಭೆ ಆಡಳಿತ ಕ್ರಮವಹಿಸಬೇಕು' ಎಂಬುದು ಭಕ್ತ ಮಹೇಶ್ ಅವರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.