ADVERTISEMENT

ನಲ್ಲಿ ಸಂಪರ್ಕ ಸಕ್ರಮಕ್ಕೆ 15 ದಿನ ಗಡುವು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 9:25 IST
Last Updated 9 ಅಕ್ಟೋಬರ್ 2012, 9:25 IST

ಕೊಳ್ಳೇಗಾಲ:  ಪಟ್ಟಣದಲ್ಲಿ ಅಕ್ರಮ ನಲ್ಲಿ ಸಂಪರ್ಕ ಸಕ್ರಮಗೊಳಿಸಿಕೊಳ್ಳಲು 15 ದಿನಗಳ ಗಡುವು ನೀಡಲಾಗಿದೆ. ನಂತರ ಅಕ್ರಮ ಸಂಪರ್ಕ ಹೊಂದಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಜರುಗಿಸಲಾಗುವುದು ಎಂದು ಪೌರಾಯುಕ್ತ ಬಸವರಾಜು ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಕ್ರಮ ಸಂಪರ್ಕ ಸಕ್ರಮಗೊಳಿಸಲು 2,000ರೂ. ಠೇವಣಿ ಮತ್ತು 1,000 ರೂ. ದಂಡ ವಿಧಿಸಿ ಸಕ್ರಮಗೊಳಿಸಲು 15 ದಿನಗಳ ಕಾಲಾವಕಾಶ ನೀಡಿದೆ. ಮನೆಯ ಮುಂದೆ ಬರುವ ಕರ ವಸೂಲಿಗಾರರ ಮೂಲಕ ಅಥವಾ ನಗರಸಭೆಗೆ ಖುದ್ದಾಗಿ ಹಣ ಪಾವತಿಸುವ ಮೂಲಕ ಅಕ್ರಮ ಸಂಪರ್ಕವನ್ನು ಸಕ್ರಮಗೊಳಿಸಿಕೊಳ್ಳಲು ಜನತೆ ಮುಂದೆ ಬರಬೇಕು ಎಂದರು.

ಗೃಹಬಳಕೆಗೆ ರೂ.120, ಗೃಹೇತರ ಬಳಕೆಗೆ ರೂ.240, ವಾಣಿಜ್ಯ/ ಕೈಗಾರಿಕೆ ಬಳಕೆಗೆ ರೂ.480 ದರದಲ್ಲಿ ಸಾರ್ವಜನಿಕರು ನೀರಿನ ಕರ ಪಾವತಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿ ಘೋಷಿಸಿದೆ. ಮನೆ ಮನೆಗಳಿಂದ ಪ್ರಾಥಮಿಕ ಕಸ ಸಂಗ್ರಹಣೆ ಮತ್ತು ಬೇರ್ಪಡಿಸುವ ಬಗ್ಗೆ ಲೋಕ ಅದಾಲತ್ ನಿರ್ದೇಶನದಂತೆ ಪ್ರತಿಮನೆಯಿಂದ 20 ರೂ. ಸೇವಾ ಶುಲ್ಕ ಪಡೆದು ಚಾಲನೆ ನೀಡಲಾಗುವುದು. ಪಟ್ಟಣದಲ್ಲಿನ ಎ್ಲ್ಲಲ ಮೀನು,ಕೋಳಿ ಹಾಗೂ ಮಾಂಸ ಮಾರಾಟಗಾರರು ಪರವಾನಗಿ ನವೀಕರಿಸಿಕೊಳ್ಳಬೇಕು, ಅಂಗಡಿ ಸುತ್ತ ಸ್ವಚ್ಛತೆ ಕಾಪಾಡಬೇಕು ಮಾಂಸವನ್ನು ಗಾಜಿನ ಪೆಟ್ಟಿಗೆಯಲ್ಲಿಟ್ಟು ಮಾರಾಟ ಮಾಡಬೇಕು. ತಪ್ಪತಸ್ಥರ ವಿರುದ್ಧ ನಗರಸಭಾ ಕಾಯ್ದೆ ರೀತಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಪಟ್ಟಣದಲ್ಲಿ ಎಸ್.ಎ.ಎಸ್ ಕಂದಾಯ ಪಾವತಿಯಲ್ಲಿ ನಡೆದಿರುವ ದುರುಪಯೋಗದ ಬಗ್ಗೆ ಪೌರ ನಿರ್ದೇಶನಾಲಯ ತನಿಖೆಗೆ ಆದೇಶ ನೀಡಿದೆ. ನಗರದ ಮಾಲೀಕರು ತಾವೇ ಖುದ್ದಾಗಿ ಎಸ್.ಎ.ಎಸ್ ಪಾವತಿಗೆ ಮುಂದಾಗಬೇಕು. ಮಧ್ಯವರ್ತಿಗಳ ಮೂಲಕ ಕಡಿಮೆ ಸ್ವಯಂ ಘೋಷಿತ ತೆರಿಗೆ ಪಾವತಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ನಗರದ ಅಭಿವೃದ್ಧಿ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳುವ ಕಾರ್ಯಕ್ರಮಗಳಿಗೆ ಜನತೆ ಹೆಚ್ಚಿನ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ನಗರಸಭೆ ಎಂಜಿನಿಯರ್ ಬಸವರಾಜ್, ನಟರಾಜ್, ನಿಂಗರಾಜು, ರುದ್ರೇಗೌಡ, ಮಂಜುನಾಥ್, ನಾಗೇಂದ್ರ, ಮಹೇಶ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.