ADVERTISEMENT

ಪತಿಗಿಂತ ಪತ್ನಿಯೇ ಶ್ರೀಮಂತೆ!

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 6:08 IST
Last Updated 18 ಏಪ್ರಿಲ್ 2013, 6:08 IST

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ ಎನ್. ಮಹೇಶ್ ಕಣಕ್ಕೆ ಇಳಿದಿದ್ದಾರೆ.

ಅವರ ಬಳಿ 9,863 ರೂ ನಗದು ಇದೆ. 56 ಸಾವಿರ ರೂ ಮೌಲ್ಯದ 20 ಗ್ರಾಂ. ಚಿನ್ನವಿದೆ. ಒಟ್ಟು 65,863 ರೂ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅವರ ಹೆಸರಿನಲ್ಲಿ ಯಾವುದೇ ಸ್ಥಿರಾಸ್ತಿ ಇಲ್ಲ.

ಮಹೇಶ್ ಅವರ ಪತ್ನಿ ಬಳಿಯಲ್ಲಿ ನಗದು ಇಲ್ಲ. 1.50 ಲಕ್ಷ ರೂ ಹೂಡಿಕೆ ಮಾಡಿದ್ದು, 1.75 ಲಕ್ಷ ರೂ ಮೌಲ್ಯದ 60 ಗ್ರಾಂ. ಚಿನ್ನ ಹೊಂದಿದ್ದಾರೆ. 1.40 ಲಕ್ಷ ರೂ ಮೌಲ್ಯದ ವಾಸದ ಮನೆಯಿದೆ. ಅವರು ಒಟ್ಟು 90 ಲಕ್ಷ ರೂ ಮೌಲ್ಯದ ಸ್ಥಿರಾಸ್ತಿಯ ಒಡತಿ.

ಅರ್ಧ ಕೋಟಿ ಒಡೆಯ
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್.ಜಿ. ಮಲ್ಲಿಕಾರ್ಜುನಸ್ವಾಮಿ 23,53,115 ರೂ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅವರ ಸ್ಥಿರಾಸ್ತಿ ಮೌಲ್ಯ 50.50 ಲಕ್ಷ ರೂ. ಕೈಯಲ್ಲಿ 7 ಲಕ್ಷ ರೂ ಇಟ್ಟುಕೊಂಡು ಅದೃಷ್ಟ ಪರೀಕ್ಷೆಗೆ ಇಳಿದಿರುವ ಮಲ್ಲಿಕಾರ್ಜುನಸ್ವಾಮಿ ಬಳಿ 120 ಗ್ರಾಂ. ಚಿನ್ನ, ಅರ್ಧ ಕೆಜಿ ಬೆಳ್ಳಿಯೂ ಇದೆ.

10.65 ಲಕ್ಷ ರೂ ಮೌಲ್ಯದ ವಾಹನವಿದೆ. ಎಲ್‌ಐಸಿಯಲ್ಲಿ 3,08,115 ರೂ ಹೂಡಿಕೆ ಮಾಡಿದ್ದಾರೆ. ಬ್ಯಾಂಕ್‌ನಲ್ಲಿ 27,62,737 ರೂ ಸಾಲ ಮಾಡಿದ್ದಾರೆ. ಮಲ್ಲಿಕಾರ್ಜುನಸ್ವಾಮಿ ಅವರ ಪತ್ನಿ ಬಳಿಯಲ್ಲಿ 50 ಸಾವಿರ ರೂ ನಗದು ಇದೆ. 140 ಗ್ರಾಂ. ಚಿನ್ನ ಹೊಂದಿರುವ ಅವರ ಚರಾಸ್ತಿ ಮೌಲ್ಯ 3.50 ಲಕ್ಷ ರೂ.

ಚರ-ಸ್ಥಿರಾಸ್ತಿಯೂ ಇಲ್ಲ!
ಗುಂಡ್ಲುಪೇಟೆ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕಿರುವ ಸುಭಾಷ್ ಎಂಎ ಸ್ನಾತಕೋತ್ತರ ಪದವೀಧರ. ಅವರ ಬಳಿಯಲ್ಲಿ 50 ಸಾವಿರ ರೂ ನಗದು ಇದೆ. ಆದರೆ, ಯಾವುದೇ ಚರಾಸ್ತಿ ಮತ್ತು ಸ್ಥಿರಾಸ್ತಿ ನನ್ನಲ್ಲಿಲ್ಲ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.

ಚರಾಸ್ತಿ ಇಲ್ಲ: ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಸಮಾಜವಾದಿ ಪಾರ್ಟಿಯಿಂದ ಕಣಕ್ಕೆ ಇಳಿದಿರುವ  ಪಕ್ಷದ ಜಿಲ್ಲಾ ಅಧ್ಯಕ್ಷ ಡಿ.ಎಸ್. ದೊರೆಸ್ವಾಮಿ ಬಳಿಯಲ್ಲಿ ಚರಾಸ್ತಿ ಇಲ್ಲ. ಕೈಯಲ್ಲಿ 30 ಸಾವಿರ ರೂ ನಗದು ಇದೆ. 1.25 ಲಕ್ಷ ರೂ ಮೌಲ್ಯದ ಸ್ಥಿರಾಸ್ತಿ ಇದೆ. ಇದು ಪಿತ್ರಾರ್ಜಿತ ಸ್ವತ್ತು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 1 ಲಕ್ಷ ರೂ ಸಾಲ ಪಡೆದಿದ್ದಾರೆ.

10 ಸಾವಿರ ನಗದು: ಚಾಮರಾಜನಗರ ಕ್ಷೇತ್ರಕ್ಕೆ ಆರ್‌ಪಿಐನಿಂದ ಅಖಾಡಕ್ಕೆ ಇಳಿದಿರುವ ಪಿ. ಸಂಘಸೇನ ಬಳಿ 10 ಸಾವಿರ ರೂ ನಗದು ಇದೆ. ಚಿನ್ನ, ಬೆಳ್ಳಿ ಇಲ್ಲ. 40,500 ರೂ ಮೌಲ್ಯದ ಸ್ಕೂಟರ್ ಇದೆ. 6.35 ಲಕ್ಷ ರೂ ಮೌಲ್ಯದ ಟ್ರ್ಯಾಕ್ಟರ್ ಹೊಂದಿದ್ದಾರೆ.
ಬ್ಯಾಂಕ್‌ನಲ್ಲಿ 6.35 ಲಕ್ಷ ರೂ ಸಾಲ ಮಾಡಿದ್ದಾರೆ. ಅವರ ಪತ್ನಿ ಬಳಿ 30 ಗ್ರಾಂ. ಚಿನ್ನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.