ADVERTISEMENT

ಪರ್ಯಾಯ ಬೆಳೆಯತ್ತ ರೇಷ್ಮೆ ಬೆಳೆಗಾರ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 6:40 IST
Last Updated 7 ಜನವರಿ 2012, 6:40 IST

ಸಂತೇಮರಹಳ್ಳಿ: ರಾಜ್ಯ ಸರ್ಕಾರ ರೇಷ್ಮೆ ಬೆಳೆಯ ಪುನಶ್ಚೇತನಕ್ಕೆ ಕಾಯಕಲ್ಪ ನೀಡದಿರುವ ಪರಿಣಾಮ ಹೋಬಳಿಯ ಬೆಳೆಗಾರರು ಕಂಗಾಲಾಗಿದ್ದಾರೆ.

ಹೋಬಳಿಯ ಮಳೆಯಾಶ್ರಿತ ಮತ್ತು ನೀರಾವರಿ ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗುತಿತ್ತು. ಗೂಡಿನ ಧಾರಣೆ ಕುಸಿತದಿಂದ ರೈತರು ರೇಷ್ಮೆ ಬೆಳೆಯಲು ಮನಸ್ಸು ಮಾಡುತ್ತಿಲ್ಲ. ಬೆಳೆಗಾರರಿಗೆ ಅನುಕೂಲ ಕಲ್ಪಿಸಲು ಸ್ಥಾಪಿಸಿದ್ದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಇಟ್ಟಿರುವ ಜಾಲರಿಗಳು ಖಾಲಿಯಾಗಿ ನಿಂತಿವೆ.

ದಶಕದ ಹಿಂದೆ ಈ ಮಾರುಕಟ್ಟೆಗೆ 1 ಸಾವಿರದಷ್ಟು ಗೂಡಿನ ಲಾಟ್ ಬರುತ್ತಿದ್ದವು. ಈಗ ಅವುಗಳ ಸಂಖ್ಯೆ 50ರಿಂದ 60ಕ್ಕೆ ಇಳಿದಿದೆ. ರೇಷ್ಮೆ ಬೆಳೆಯಲ್ಲಿ ದುಡಿಮೆಗೆ ತಕ್ಕ ಪ್ರತಿಫಲ ದೊರೆಯದ ಕಾರಣ ದ್ವಿದಳಧಾನ್ಯಗಳತ್ತ ರೈತರು ಮುಖ ಮಾಡಿದ್ದಾರೆ. ಬೆಳೆಗಾರರು, ನೂಲು ಬಿಚ್ಚಣಿಕೆದಾರರು ಸೇರಿದಂತೆ ಸಾವಿರಾರು ಮಂದಿಗೆ ಉದ್ಯೋಗ ನೀಡಿದ್ದ ರೇಷ್ಮೆ ಗೂಡಿನ ಮಾರುಕಟ್ಟೆ ಬಣಗುಡುತ್ತಿದೆ. 

ಇಲ್ಲಿನ ವಾತಾವರಣಕ್ಕೆ ತಕ್ಕಂತೆ ಮಳೆಯಾಶ್ರಿತ ರೈತರು ಸಣ್ಣಗೂಡು (ಸಿನಿಚ್ಚಿ) ಬೆಳೆಯುತ್ತಿದ್ದರು. ಇಳುವರಿ ಕಡಿಮೆ ಬರುತ್ತಿದ್ದ ಹಿನ್ನೆಲೆಯಲ್ಲಿ 4 ವರ್ಷದ ಹಿಂದೆ ಸರ್ಕಾರ ಸಣ್ಣಗೂಡು ಬೆಳೆ ನಿಷೇಧಿಸಿತು. ದಪ್ಪಗೂಡು ಬೆಳೆಯುವಂತೆ ರೈತರಿಗೆ ಉತ್ತೇಜನ ನೀಡಿತು. ಇದರಿಂದ ನೀರಾವರಿ ಇಲ್ಲದ ರೈತರು ದಿಕ್ಕೆಟ್ಟರು. ಇದರಿಂದ ಮೊಟ್ಟೆ ಉತ್ಪಾದಕರು ನಿರುದ್ಯೋಗಿಗಳಾದರು. ಕೂಲಿ ಕಾರ್ಮಿಕರ ಬದುಕು ಬೀದಿ ಪಾಲಾಯಿತು.

ನಷ್ಟದ ಹಾದಿಯಲ್ಲಿ ಕಾರ್ಖಾನೆ: ರೇಷ್ಮೆ ನೂಲು ಉತ್ಪಾದನೆಯಲ್ಲಿ ಶ್ರೀಮಂತಿಕೆ ಕಂಡಿದ್ದ ಇಲ್ಲಿನ ಸರ್ಕಾರಿ ರೇಷ್ಮೆ ಕಾರ್ಖಾನೆ ನಷ್ಟದ ಹಾದಿಯಲ್ಲಿ ಸಾಗುತ್ತಿದೆ. ಈಸ್ಟ್ ಇಂಡಿಯಾ ಕಂಪೆನಿಯಿಂದ 1943ರಲ್ಲಿ ಮೈಸೂರು ರೇಷ್ಮೆ ಕಾರ್ಖಾನೆ ಎಂಬ ಹೆಸರಿನಡಿ ಇದು ಆರಂಭಗೊಂಡಿತು. 110 ಬೇಸಿನ್‌ಗಳೊಂದಿಗೆ 224 ಕಾರ್ಮಿಕರಿಗೆ ಉದ್ಯೋಗ ದೊರಕಿತ್ತು. ಗುಣಮಟ್ಟದ ರೇಷ್ಮೆ ನೂಲು ಉತ್ಪಾದನೆಯಲ್ಲಿ ಕಾರ್ಖಾನೆ ಹೆಸರುಗಳಿಸಿತ್ತು. ಪ್ರಸ್ತುತ 17 ಬೇಸಿನ್‌ಗಳಲ್ಲಿ 61 ಮಂದಿ ಕಾರ್ಮಿಕರು ದುಡಿಯುತ್ತಿದ್ದಾರೆ. 93 ಬೇಸಿನ್‌ಗಳು ನಿಷ್ಕ್ರಿಯವಾಗಿವೆ.

ತರಬೇತಿ ಸಂಸ್ಥೆ: 1982ರಲ್ಲಿ ಹೋಬಳಿಯ ರೈತರಿಗೆ ಮಣ್ಣಿನಿಂದ ರೇಷ್ಮೆ ಎಂಬ ಯೋಜನೆಯೊಂದಿಗೆ ಸಮೀಪದ ಕುದೇರು ಗ್ರಾಮದಲ್ಲಿ ರೇಷ್ಮೆ ಕೃಷಿ ತರಬೇತಿ ಸಂಸ್ಥೆ ತೆರೆಯಲಾಗಿತ್ತು.

27 ಎಕರೆ ಪ್ರದೇಶದಲ್ಲಿ ರೈತರಿಗೆ ಪ್ರಾಯೋಗಿಕವಾಗಿ ಮಣ್ಣುಪರೀಕ್ಷೆ, ಭೂಮಿ ಸಿದ್ಧತೆ, ಹಿಪ್ಪುನೇರಳೆ ನಾಟಿ ವಿಧಾನ, ವಿವಿಧ ತಳಿ, ನೂತನ ತಾಂತ್ರಿಕತೆ ಇತ್ಯಾದಿ ತರಬೇತಿ ನೀಡುವ ಉದ್ದೇಶ ಹೊಂದಲಾಗಿತ್ತು. ದಶಕದ ಹಿಂದೆ ರೈತರಿಗೆ ಜಮೀನಿನಲ್ಲಿಯೇ ಪ್ರಾತ್ಯಕ್ಷಿಕೆ ನೀಡುತ್ತಿದ್ದ ತರಬೇತಿ ಕೇಂದ್ರದ ಆವರಣದಲ್ಲಿ ಈಗ ಹಿಪ್ಪುನೇರಳೆ ಕೃಷಿಯೇ ಕಣ್ಮರೆಯಾಗಿದೆ. ತರಬೇತಿ ಪಡೆಯಲು ಬರುವ ರೈತರಿಗೆ ಸಿಡಿ ಮೂಲಕ ಸಾಕ್ಷ್ಯಚಿತ್ರ ತೋರಿಸಲಾಗುತ್ತಿದೆ!

`ರೈತರಿಗೆ ನವೀನ ತಾಂತ್ರಿಕತೆ ಅಳವಡಿಸಿಕೊಂಡು ರೇಷ್ಮೆ ಕೃಷಿ ಮಾಡಲು ಅರಿವು ಮೂಡಿಸಲಾಗುತ್ತಿದೆ. ಕೇಂದ್ರ ದಲ್ಲಿರುವ ಸಂಪನ್ಮೂಲ ಬಳಸಿಕೊಂಡು ತರಬೇತಿ ನೀಡಲಾಗುತ್ತಿದೆ~ ಎನ್ನುತ್ತಾರೆ ತರಬೇತಿ ಸಂಸ್ಥೆಯ ಸಹಾಯಕ ನಿರ್ದೇಶಕ ನಾಗರಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.