ADVERTISEMENT

ಬರ ಚರ್ಚೆ: ಸಚಿವರ ಕಾಟಾಚಾರದ ಸಭೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2012, 9:30 IST
Last Updated 25 ಏಪ್ರಿಲ್ 2012, 9:30 IST

ಚಾಮರಾಜನಗರ: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಬರ ಪರಿಹಾರ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಕೇವಲ 15 ನಿಮಿಷದ ಸಭೆ ನಡೆಸಿದ ಅವರು, ಅಧಿಕಾರಿಗಳಿಂದ ಮಾಹಿತಿ ಪಡೆಯುವ ಕಸರತ್ತು ನಡೆಸಿದರು. ಕಾಟಾಚಾರಕ್ಕೆ ನಡೆದ ಸಭೆಯಲ್ಲಿ ಸಚಿವರಿಗೆ ಅಧಿಕಾರಿಗಳಿಂದಲೂ ಸಮರ್ಪಕ ಮಾಹಿತಿ ದೊರೆಯಲಿಲ್ಲ.

ಜಿಲ್ಲೆಯಲ್ಲಿ ಮೇವು ಪೂರೈಕೆಯ ಕೊರತೆಯಿಂದ ಜಾನುವಾರು ಸಾಯುತ್ತಿವೆ ಎಂದು ನಾಗರಿಕರು ಅಳಲು ತೋಡಿಕೊಳ್ಳುತ್ತಾರೆ. ಈ ಕುರಿತು ಯಾವ ಕ್ರಮಕೈಗೊಂಡಿದ್ದೀರಿ? ಎಂದು ಜಿಲ್ಲಾ ಪಶುಪಾಲನಾ ಇಲಾಖೆಯ ಅಧಿಕಾರಿಗಳಿಗೆ ಪ್ರಶ್ನಿಸಿದರು.

ಕೇವಲ 5 ಜಾನುವಾರು ಮಾತ್ರ ಅಸುನೀಗಿವೆ ಎಂಬ ಉತ್ತರ ಅಧಿಕಾರಿಗಳಿಂದ ಬಂತು. ಈ ನಡುವೆ ಮಾತನಾಡಿದ ಶಾಸಕ ಸಿ. ಪುಟ್ಟರಂಗಶೆಟ್ಟಿ, `ಚಾಮರಾಜನಗರ ತಾಲ್ಲೂಕಿನಲ್ಲಿ ನೂರಾರು ಜಾನುವಾರು ಮೃತಪಟ್ಟಿವೆ~ ಎಂದರು.

ಶಾಸಕರ ಮಾತಿನಿಂದ ಸಿಟ್ಟಾದ ರೇಣುಕಾಚಾರ್ಯ, `ಸಭೆಗೆ ಬರುವಾಗ ಅಧಿಕಾರಿಗಳು ಸಮರ್ಪಕ ಮಾಹಿತಿ ತರಬೇಕು. ತಪ್ಪು ಮಾಹಿತಿ ನೀಡಬಾರದು~ ಎಂದ ಅವರು, ಕುಡಿಯುವ ನೀರು ಹಾಗೂ ಮೇವು ಪೂರೈಸಲು ಅಧಿಕಾರಿಗಳು ನಿರ್ಲಕ್ಷ್ಯವಹಿಸಬಾರದು~ ಎಂದು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಆರ್. ಸುಂದರ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಟಿ. ಚಂದ್ರಶೇಖರ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಸುಂದರನಾಯ್ಕ, ಉಪ ಕಾರ್ಯದರ್ಶಿ ಎ.ಪಿ. ಶಂಕರರಾಜು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.