ADVERTISEMENT

ಬಿಎಂಸಿ ಕೇಂದ್ರ ಶೀಘ್ರ ಸ್ಥಾಪನೆ: ಭರವಸೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 8:40 IST
Last Updated 18 ಸೆಪ್ಟೆಂಬರ್ 2013, 8:40 IST

ಕೊಳ್ಳೇಗಾಲ: ಸದ್ಯದಲ್ಲಿಯೇ 3ಸಾವಿರ ಲೀಟರ್‌ ಸಾಮರ್ಥ್ಯದ ಬುಲ್‌ಮಿಲ್ಕ್‌ ಕೂಲರ್‌ ಸೌಲಭ್ಯವನ್ನು ಸರಗೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕಲ್ಪಿಸಿ ಹಾಲಿನ ಗುಣಮಟ್ಟ ಕಾಪಾಡು­ವುದಾಗಿ ಮೈಸೂರು ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕ ಉದ್ದನೂರು ಪ್ರಸಾದ್‌ ಭರವಸೆ ನೀಡಿದರು.

ತಾಲ್ಲೂಕಿನ ಸರಗೂರು ಹಾಲು ಉತ್ಪಾದಕರ ಸಂಘದ ವತಿಯಿಂದ ಸಂಘದ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸರ್ವ ಸದಸ್ಯರ ಮಹಾ­ಸಭೆಯಲ್ಲಿ ಅವರು ಮಾತನಾಡಿದರು.

ಬರದ ಪರಿಸ್ಥಿತಿಯಲ್ಲಿ ಜನತೆಯನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡು­ವಲ್ಲಿ ಹೈನುಗಾರಿಕೆ ಮಹತ್ವದ ಪಾತ್ರ ವಹಿಸಿದೆ. ತಾಲ್ಲೂಕಿನಲ್ಲಿ ಪ್ರತಿನಿತ್ಯ 90ಸಾವಿರ ಲೀಟರ್‌ ಹಾಲು ಉತ್ಪಾದನೆ ಆಗುವ ಮೂಲಕ ಜಿಲ್ಲೆಯಲ್ಲೇ ಅತಿ ಹೆಚ್ಚಿನ ಹಾಲು ಉತ್ಪಾದನಾ ತಾಲ್ಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.

ತಾಲ್ಲೂಕು ತುಂಬಾ ವಿಸ್ತಾರ ಆಗಿರು­ವುದರಿಂದ ತಾಲ್ಲೂಕಿನ 126 ಹಾಲು ಉತ್ಪಾದಕರ ಸಹಕಾರ ಸಂಘದಿಂದ ಹಾಲು ಸಂಗ್ರಹಣೆ ಮಾಡಿ ಸಿಂಗಾ­ನಲ್ಲೂಕು ಶೀಥಲೀಕರಣ ಕೇಂದ್ರಕ್ಕೆ ತರಲು ಸಾಕಷ್ಟು ಸಮಯ ತೆಗೆದು­ಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಸಹಕಾರ ಸಂಘಗಳಲ್ಲಿ ಬುಲ್‌ಮಿಲ್ಕ್‌ ಕೂಲರ್‌ ಸೌಲಭ್ಯ ದೊರಕಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.

ಸರಗೂರು ಹಾಲು ಉತ್ಪಾದಕರ ಸಂಘ 1.34 ಲಕ್ಷ ಲಾಭಗಳಿಸಿದೆ. ಹಾಲು ಉತ್ಪಾದಕರಿಗೆ ಸರಕಾರದ ಪ್ರೋತ್ಸಾಹ ಧನವನ್ನೂ ಸಹ ಸಮರ್ಪಕವಾಗಿ ವಿತರಿಸಲಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಂ. ದೇವರಸು ತಿಳಿಸಿದರು.

ಮೈಸೂರು ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ ವಿಸ್ತರಣಾಧಿಕಾರಿ ಎನ್‌. ಕುಮಾರ್‌,  ವಿಸ್ತರಣಾಧಿಕಾರಿ ಪ್ರಭು, ಜೆ. ರುದ್ರಸ್ವಾಮಿ, ಎಂ. ಶೇಖರ್‌, ನಿದೇರ್ಶಕ ಆರ್‌. ಸುಂದ್ರಪ್ಪ, ಜೆ.ಶಿವ­ಪುತ್ರಪ್ಪ, ಮಾದನಾಯ್ಕ, ಕೆ. ಸುಂದ್ರ, ಮಹದೇವಮ್ಮ, ನೀಲಿಸಿದ್ದಯ್ಯ, ಮಾದೇಗೌಡ ಬಸವಯ್ಯ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.