ADVERTISEMENT

ಬಿಡಾಡಿ ದನಗಳ ಹಾವಳಿಗೆ ಕಡಿವಾಣ ಎಂದು?

ಕೆ.ಎಚ್.ಓಬಳೇಶ್
Published 3 ಡಿಸೆಂಬರ್ 2012, 10:35 IST
Last Updated 3 ಡಿಸೆಂಬರ್ 2012, 10:35 IST

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚುತ್ತಿದ್ದು, ನಿತ್ಯವೂ ನಾಗರಿಕರು, ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದರೂ, ನಗರಸಭೆ ಆಡಳಿತ ಮಾತ್ರ ಯಾವುದೇ ಕ್ರಮಕೈಗೊಂಡಿಲ್ಲ.

ನಗರದ ವ್ಯಾಪ್ತಿ ಬಿಡಾಡಿ ದನಗಳ ಹಾವಳಿ ಹೆಚ್ಚಿದೆ. ಎಲ್ಲೆಂದರಲ್ಲಿ ರಸ್ತೆಯಲ್ಲಿಯೇ ಗುಂಪಾಗಿ ನಿಲ್ಲುವ ಪರಿಣಾಮ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕೆಲವು ದನಗಳು ರಸ್ತೆಯಿಂದ ಅವುಗಳನ್ನು ಮುಂದಕ್ಕೆ ಓಡಿಸಲು ಮುಂದಾದರೆ ನಾಗರಿಕರ ವಿರುದ್ಧವೇ ತಿರುಗಿ ಬೀಳುತ್ತವೆ. ಹೀಗಾಗಿ, ಮಹಿಳೆಯರು, ಮಕ್ಕಳು ರಸ್ತೆಬದಿಯಲ್ಲಿ ಸಂಚರಿಸಲು ಭಯಪಡುವಂತಾಗಿದೆ.

ಕರ್ನಾಟಕ ಮುನ್ಸಿಪಲ್ ಕಾಯ್ದೆ ಅನ್ವಯ ಯಾವುದೇ ನಾಗರಿಕರು ದನಗಳು ಸೇರಿದಂತೆ ಮೇಕೆ, ನಾಯಿ ಇತ್ಯಾದಿ ಸಾಕುಪ್ರಾಣಿಗಳನ್ನು ಹೊರಗೆ ಬಿಡುವಂತಿಲ್ಲ.

ಅಂತಹವರ ವಿರುದ್ಧ ದಂಡ ವಿಧಿಸುವ ಅಧಿಕಾರ ಸ್ಥಳೀಯ ಸಂಸ್ಥೆಗೆ ಇದೆ. ಜತೆಗೆ, ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಅವುಗಳನ್ನು ವಶಕ್ಕೆ ಪಡೆಯುವ ಅಧಿಕಾರವೂ ಇದೆ. ಆದರೆ, ಈ ನಿಯಮ ಪುಸ್ತಕಕ್ಕೆ ಮಾತ್ರವೇ ಸೀಮಿತಗೊಂಡಿದೆ. ಇದರ ಪರಿಣಾಮ ನಾಗರಿಕರು, ವಾಹನ ಸವಾರರು ತೊಂದರೆಪಡುವಂತಾಗಿದೆ.

ಕೆಲವು ಅಂಗಡಿ ಮಾಲೀಕರು ನಿತ್ಯವೂ ಬಿಡಾಡಿ ದನಗಳಿಗೆ ಬ್ರೆಡ್, ಬಿಸ್ಕೆಟ್ ನೀಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಬೆಳಿಗ್ಗೆಯೇ ರಸ್ತೆಗೆ ಇಳಿಯುವ ಈ ಬಿಡಾಡಿ ದನಗಳಿಗೆ ವಾರಸುದಾರರು ಯಾರೆಂಬುದೇ ಗೊತ್ತಿಲ್ಲ.

ಆದರೆ, ಸಂಜೆಯಾಗುತ್ತಲೇ ಸದ್ದಿಲ್ಲದೆ ಮಾಲೀಕರ ಮನೆಯತ್ತ ದೌಡಾಯಿಸುತ್ತವೆ. ಈ ಬಿಡಾಡಿ ದನಗಳಲ್ಲಿ ಕೆಲವು ಹಾಲು ನೀಡುವ ಹಸುಗಳು ಇವೆ. ಬೆಳಿಗ್ಗೆ ಮತ್ತು ಸಂಜೆ ಹಾಲು ಪಡೆಯುವ ಇವುಗಳ ಮಾಲೀಕರು ರಸ್ತೆಗೆ ಬಿಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ.

ಜೋಡಿರಸ್ತೆ, ಸಂತೇಮರಹಳ್ಳಿ ವೃತ್ತ, ಗುಂಡ್ಲುಪೇಟೆ ವೃತ್ತ, ಡಿವಿಯೇಷನ್ ರಸ್ತೆಯಲ್ಲಿ ಇವುಗಳ ಹಾವಳಿ ಉಲ್ಬಣಿಸಿದೆ. ಎಚ್ಚರತಪ್ಪಿ ಮನೆಗಳ ಗೇಟ್‌ಗಳನ್ನು ತೆರೆದಿದ್ದರೆ ಸದ್ದಿಲ್ಲದೆ ನುಗ್ಗಿ ಅಲಂಕಾರಿಕ ಗಿಡಗಳನ್ನು ತಿಂದುಹಾಕುತ್ತವೆ. ಇದರಿಂದ ಮನೆ ಮಾಲೀಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಬೆಳಿಗ್ಗೆಯೇ ರಸ್ತೆಬದಿಯಲ್ಲಿ ಇವುಗಳು ನಿಂತಿರುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿ ಗಳು ಭಯದಿಂದ ಸಂಚರಿಸಲು ಹಿಂದೇಟು ಹಾಕುವಂತಾಗಿದೆ.

ನಾಗರಿಕರು ಸಾಕಷ್ಟು ತೊಂದರೆ ಅನುಭವಿಸಿದರೂ ನಗರಸಭೆ ಆಡಳಿತ ಮಾತ್ರ ಯಾವುದೇ ಕ್ರಮಕೈಗೊಂಡಿಲ್ಲ ಎನ್ನುವುದು ಸಾರ್ವಜನಿಕರ ಅಳಲು.

`ಬಿಡಾಡಿ ದನಗಳಿಂದ ಜನರು, ವಾಹನ ಸವಾರರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಳಕ್ಕೆ ಬಿಡಾಡಿ ದನಗಳು ಕಾರಣವಾಗಿವೆ. ಅದರಲ್ಲೂ ದ್ವಿಚಕ್ರವಾಹನ ಸವಾರರು ಹೆಚ್ಚು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟ ಮಾಲೀಕರಿಗೆ ಈ ಕುರಿತು ತಿಳಿವಳಿಕೆ ನೀಡಿ ಹಾವಳಿ ತಡೆಗೆ ನಗರಸಭೆ ಆಡಳಿತ ತ್ವರಿತವಾಗಿ ಕ್ರಮಕೈಗೊಳ್ಳಬೇಕು' ಎಂಬುದು ದ್ವಿಚಕ್ರ ವಾಹನ ಸವಾರ ರವೀಶ್ ಅವರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.