ಚಾಮರಾಜನಗರ: ‘ಮಕ್ಕಳು ವೈಜ್ಞಾನಿಕ ತತ್ವವನ್ನು ಅರ್ಥ ಮಾಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ದೀನಬಂಧು ಸಂಸ್ಥೆ ಗೌರವ ಕಾರ್ಯದರ್ಶಿ ಜಿ.ಎಸ್.ಜಯದೇವ ಸಲಹೆ ನೀಡಿದರು. ನಗರದ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆದ ಬ್ಲಾಕ್‌ಮಟ್ಟದ ವಿಜ್ಞಾನ ಮೇಳದಲ್ಲಿ ಮಾತನಾಡಿದರು.
ಮಕ್ಕಳಲ್ಲಿ ಕುತೂಹಲಭರಿತ ಪ್ರಶ್ನೆಗಳು ಮೂಡಬೇಕು. ಪ್ರಶ್ನೆ ಕೇಳುವುದೇ ವಿಜ್ಞಾನ. ಸಿ.ವಿ. ರಾಮನ್ ಸಾಧಾರಣ ಉಪಕರಣ ಬಳಸಿಕೊಂಡು ಸಾಧನೆ ಮಾಡಿದರು. ಅವರಲ್ಲಿ ವಿಜ್ಞಾನದ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಮನೋಭಾವ ಇತ್ತು. ಅಂಥ ಆಸಕ್ತಿ ಮಕ್ಕಳಲ್ಲಿ ಮೂಡಬೇಕಿದೆ ಎಂದು ಆಶಿಸಿದರು. ‘ಇಂದಿನ ವಿಜ್ಞಾನದ ಮಾದರಿಗಳಲ್ಲಿ ವಿಜ್ಞಾನವೇ ಇರುವುದಿಲ್ಲ. ಇದಕ್ಕೆ ಮಕ್ಕಳಲ್ಲಿನ ಆಸಕ್ತಿಯ ಕೊರತೆ ಕಾರಣವಾಗಿದೆ. ವಿಜ್ಞಾನದ ಪ್ರಕ್ರಿಯೆ ನಡೆಸಲು ಆಳವಾದ ಅಧ್ಯಯನ, ವೈಜ್ಞಾನಿಕ ಮನಸ್ಸು ಮುಖ್ಯ. ಕುತೂಹಲ ಮತ್ತು ವೈಜ್ಞಾನಿಕ ದೃಷ್ಟಿಯಿಂದ ಪ್ರತಿಯೊಂದು ಕ್ರಿಯೆಯನ್ನೂ ಗಮನಿಸಬೇಕಿದೆ ಎಂದರು.
ಜನಸಂಖ್ಯಾ ಸ್ಫೋಟದಿಂದ ದಿನೇ ದಿನೇ ವಿಜ್ಞಾನ ಸವಾಲಾಗಿ ಪರಿಣಮಿಸುತ್ತಿದೆ. ಆದರೆ, ವಿಜ್ಞಾನದ ಪ್ರಾಯೋಗಿಕ ಅನುಭವವಾಗಬೇಕಿದೆ. ವಿಜ್ಞಾನದ ಕಲಿಕೆ ಮನರಂಜನೆಯಾಗಬೇಕು. ಮಕ್ಕಳಲ್ಲಿ ಆಸಕ್ತಿ ತುಂಬಲು ಇಂಥ ಕಾರ್ಯಕ್ರಮಗಳ ಮೂಲಕ ಅಧ್ಯಯನ, ಚರ್ಚೆ ನಡೆಸಿ ಉತ್ತಮ ಪರಿಸರ ಸೃಷ್ಟಿಸಬೇಕು ಎಂದರು. ಡಯಟ್‌ನ ಪ್ರಾಂಶುಪಾಲ ಎಸ್.ಜೆ. ಸತ್ಯನಾರಾಯಣ ಮಾತನಾಡಿ, ವಿಜ್ಞಾನದಲ್ಲಿ ಪ್ರಯೋಗ ಮುಖ್ಯ. ಮಕ್ಕಳ ಉತ್ತಮ ಕಲಿಕೆಗೆ ಪ್ರೌಢಶಾಲೆ ಪ್ರಮುಖ ಘಟ್ಟವಾಗಿದೆ. ಹೆಚ್ಚು ಸಂಶೋಧನೆ ನಡೆಸಿ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಪ್ರತಿಭೆ ಹೊರಹಾಕಬೇಕು ಎಂದು ಕಿವಿಮಾತು ಹೇಳಿದರು.
ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಸುಂದರನಾಯಕ್, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಿ.ಎ. ರಾಜಶೇಖರ್, ಸಂತ ಜೋಸೆಫರ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸುಶೀಲಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಉದಯಕುಮಾರ್, ಮಹದೇವು, ಚಿಕ್ಕಮಾದಯ್ಯ, ಸಿದ್ದಮಲ್ಲಪ್ಪ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.