ADVERTISEMENT

ಮತದಾರರ ಜಾಗೃತಿ: ಏ. 25ಕ್ಕೆ ಬೈಸಿಕಲ್ ಜಾಥಾ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 6:33 IST
Last Updated 10 ಏಪ್ರಿಲ್ 2013, 6:33 IST

ಚಾಮರಾಜನಗರ: `ಮತದಾರರು ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೇಪಿಸಲು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅತಿಕಡಿಮೆ ಮತದಾನವಾದ ಮತಗಟ್ಟೆಗಳು ಸೇರಿದಂತೆ ಮಹಿಳೆಯರು ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸಿರುವ ಮತಗಟ್ಟೆಗಳ ಸ್ಥಳಗಳನ್ನು ಗುರಿಯಾಗಿಟ್ಟುಕೊಂಡು ಏ. 25ರಿಂದ 5 ದಿನಗಳ ಕಾಲ ಬೈಸಿಕಲ್ ಜಾಥಾ ಹಾಗೂ ಇತರೇ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಬೇಕು' ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್. ಸೋಮಶೇಖರಪ್ಪ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಚೇರಿಯಲ್ಲಿ ನಡೆದ ಮತದಾರರ ಜಾಗೃತಿ ಅಭಿಯಾನ (ಸ್ವೀಪ್) ಸಮಿತಿ ಸದಸ್ಯರ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಮತದಾರರ ಜಾಗೃತಿ ಅಭಿಯಾನ ಸಮಿತಿ, ಶಾಲಾ-ಕಾಲೇಜು ಹಾಗೂ ಇತರೇ ಸಂಘ ಸಂಸ್ಥೆಗಳಿಂದ ಮೊದಲ ಹಂತದ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆದಿದೆ. ಈ ವೇಳೆ ಮತದಾರರ ನೋಂದಣಿ ಹಾಗೂ ಕಡ್ಡಾಯ ಮತದಾನಕ್ಕೆ ಸಂಬಂಧಿಸಿದಂತೆ ಹಲವು ವಿಶೇಷ ಕಾರ್ಯಕ್ರಮಗಳನ್ನು ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿತ್ತು ಎಂದರು. ಯುವಕರನ್ನು ಒಳಗೊಂಡ ಬೈಸಿಕಲ್ ಜಾಥಾ ಹಾಗೂ ಇತರೇ ವಿಶೇಷ ಕಾರ್ಯಕ್ರಮದ ರೂಪರೇಷೆ ಸಿದ್ಧಪಡಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಜಾಥಾದಲ್ಲಿ ಭಾಗವಹಿಸುವವರು ತಾವು ಭೇಟಿ ನೀಡುವ ಸ್ಥಳಗಳಲ್ಲಿ ಮತದಾನದ ಮಹತ್ವ, ದುರ್ಬಲ ಮತ್ತು ಅಂಧ ಮತದಾರರು ಸಹ ಮತದಾನ ಮಾಡುವುದಕ್ಕೆ ಅವಕಾಶವಿರುವ ವಿಷಯದ ಬಗ್ಗೆ ಮತದಾರರ ಗಮನಕ್ಕೆ ತರಬೇಕು. ಮತದಾರರು ಯಾವುದೇ ಆಮಿಷಕ್ಕೆ ತಲೆಬಾಗದೆ ನಿರ್ಭಯದಿಂದ ಮತ ಚಲಾಯಿಸಲು ಸಂದೇಶ ರವಾನಿಸಬೇಕು ಎಂದು ಹೇಳಿದರು.  ಮತದಾರರ ಜಾಗೃತಿ ಅಭಿಯಾನವು ರಾಷ್ಟ್ರೀಯ ಕಾರ್ಯಕ್ರಮವಾಗಿದೆ. ಹೀಗಾಗಿ, ಈ ಕಾರ್ಯಕ್ರಮ ಅನುಷ್ಠಾನಗೊಳಿಸುವಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು  ಎಚ್ಚರಿಸಿದರು.

ಸಭೆಯಲ್ಲಿ ವಯಸ್ಕರ ಶಿಕ್ಷಣ ಇಲಾಖೆಯ ಅಧಿಕಾರಿ ರಾಮಲಿಂಗಪ್ಪ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ                     ಚೆಲುವಯ್ಯ, ಮತದಾರರ ಜಾಗೃತಿ ಅಭಿಯಾನ ಸಮಿತಿಯ ನೋಡೆಲ್ ಅಧಿಕಾರಿ ಮಹೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.