ADVERTISEMENT

ಮತ್ತೆ ಬರದ ಛಾಯೆ: ದಿಕ್ಕೆಟ್ಟ ಅನ್ನದಾತ

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 9:15 IST
Last Updated 6 ಜುಲೈ 2012, 9:15 IST
ಮತ್ತೆ ಬರದ ಛಾಯೆ: ದಿಕ್ಕೆಟ್ಟ ಅನ್ನದಾತ
ಮತ್ತೆ ಬರದ ಛಾಯೆ: ದಿಕ್ಕೆಟ್ಟ ಅನ್ನದಾತ   

ಚಾಮರಾಜನಗರ: `ನನಗಿರುವುದೇ ಎರಡು ಎಕರೆ ಜಮೀನು. ಒಂದು ಎಕರೆಯಲ್ಲಿ ಉದ್ದು ಬಿತ್ತನೆ ಮಾಡಿದ್ದೆ. ಅರ್ಧ ಎಕರೆಯಲ್ಲಿ ಜಾನುವಾರುಗಳಿಗೆ ಮೇವಿಗಾಗಿ ಮುಸುಕಿನಜೋಳ ಬಿತ್ತನೆ ಮಾಡಿದ್ದೆ. ಉಳಿದ ಜಮೀನಿನಲ್ಲಿ ಸೂರ್ಯಕಾಂತಿ ಬಿತ್ತಿದ್ದೆ. ಈಗ ಎಲ್ಲ ಬೆಳೆಯೂ ಒಣಗಿ ಹೋಗಿದೆ. ಕಳೆದ ವರ್ಷವೂ ಮಳೆ ಬೀಳಲಿಲ್ಲ. ಕೈಸಾಲ ಮಾಡಿ ಉಳುಮೆ ಮಾಡಿದ್ದೇನೆ. ಸಾಲ ತೀರುವುದೇ ದೊಡ್ಡ ಚಿಂತೆಯಾಗಿದೆ. ಬರಗಾಲದ ಲಕ್ಷಣ ಮತ್ತೆ ಕಾಣುತ್ತಿದೆ...~

-ಹೊಲದಲ್ಲಿ ಜಾನುವಾರು ಮೇಯಿಸುತ್ತಿದ್ದ ತಾಲ್ಲೂಕಿನ ಯಾನಗಳ್ಳಿಯ ರೈತ ಪರಮೇಶ್ವರಪ್ಪ ಹೀಗೆಂದು ನೋವು ತೋಡಿಕೊಂಡು ಕ್ಷಣಕಾಲ ಮುಗಿಲಿನತ್ತ ದೃಷ್ಟಿ ನೆಟ್ಟರು. ಅವರ ನೋವಿಗೆ ಮೋಡಗಳ ಬಳಿಯಲ್ಲಿ ಉತ್ತರ ಇರಲಿಲ್ಲ. ಪೂರ್ವ ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಗೆ ಬಿತ್ತನೆ ಮಾಡಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಅವರ ಮುಖದಲ್ಲಿ ಬೆಳೆ ನಷ್ಟದ ನೋವು ಇಣುಕಿತು.

ಕಳೆದ ವರ್ಷವೂ ಸಕಾಲದಲ್ಲಿ ಮಳೆ ಬೀಳದೆ ಬರಗಾಲಕ್ಕೆ ತುತ್ತಾಗಿದ್ದ ಗಡಿ ಜಿಲ್ಲೆ ಈ ಬಾರಿಯೂ ಅದೇ ಹಾದಿಯಲ್ಲಿ ಸಾಗಿದೆ. ಮುಂಗಾರು ಆರಂಭಗೊಂಡಿದ್ದರೂ ಮಳೆ ಬಿದ್ದಿಲ್ಲ. ಪ್ರಸಕ್ತ ವರ್ಷ ಪೂರ್ವ ಮುಂಗಾರು ಕೂಡ ತಡವಾಗಿ ಆರಂಭಗೊಂಡಿತು. ಮಾರ್ಚ್ ತಿಂಗಳ ಕೊನೆಯ ವಾರ ಹಾಗೂ ಏಪ್ರಿಲ್‌ನಲ್ಲಿ ಸುರಿದ ಪೂರ್ವ ಮುಂಗಾರು ಮಳೆಗೆ ಚಾಮರಾಜನಗರ, ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲದ ಭಾಗದಲ್ಲಿ ಬಿತ್ತನೆಯಾಗಿತ್ತು. ಹೆಚ್ಚಿನ ಪ್ರಮಾಣದಲ್ಲಿ ದ್ವಿದಳಧಾನ್ಯ ಬಿತ್ತನೆ ಮಾಡಿದ್ದ ರೈತರು ಈಗ ನಷ್ಟಕ್ಕೆ ತುತ್ತಾಗಿದ್ದಾರೆ.

ಜಿಲ್ಲೆಯ ಕೃಷಿ ಪ್ರದೇಶದ ಒಟ್ಟು ವಿಸ್ತ್ರೀರ್ಣ 1.71 ಲಕ್ಷ ಹೆಕ್ಟೇರ್. ಇದರಲ್ಲಿ ಏಕದಳ ಧಾನ್ಯ- 87,147 ಹೆಕ್ಟೇರ್. ದ್ವಿದಳ ಧಾನ್ಯ- 21,823 ಹೆಕ್ಟೇರ್. ಎಣ್ಣೆಕಾಳು- 36,428 ಹೆಕ್ಟೇರ್ ಹಾಗೂ ವಾಣಿಜ್ಯ ಬೆಳೆಗಳನ್ನು 12,205 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಒಟ್ಟು 1,57,598 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿಯಿತ್ತು. ಪೂರ್ವ ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಗೆ ಒಟ್ಟು 64,556 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಒಟ್ಟಾರೆ ಶೇ. 38ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಉದ್ದು, ಹೆಸರು, ಜೋಳ, ಸೂರ್ಯಕಾಂತಿ, ಮುಸುಕಿನಜೋಳ, ಎಳ್ಳು, ಹೈಬ್ರೀಡ್‌ಜೋಳ, ಅಲಸಂದೆ ಬೆಳೆಗಳು ಒಣಗಿ ಹೋಗಿವೆ.

ಜಿಲ್ಲೆಯಲ್ಲಿ 1,71,995 ಸಣ್ಣರೈತರು ಹಾಗೂ 25,435 ಅತಿಸಣ್ಣ ರೈತರಿದ್ದಾರೆ. ಕೈಸಾಲ ಮಾಡಿ ವ್ಯವಸಾಯ ಮಾಡಿದ್ದ ಸಣ್ಣ ಹಿಡುವಳಿದಾರರು ಈಗ ದಿಕ್ಕೆಟ್ಟಿದ್ದಾರೆ. ಕೆಲವೆಡೆ ಜಮೀನುಗಳಿಗೆ ತೆರಳಿದರೆ ಸೂರ್ಯಕಾಂತಿ, ಹೈಬ್ರೀಡ್‌ಜೋಳ ಹಸಿರಾಗಿ ಕಾಣಿಸುತ್ತದೆ. ಆದರೆ, ಮಳೆ ಇಲ್ಲದೆ ಸೊರಗಿ ಹೋಗಿದೆ. ಹೀಗಾಗಿ, ಇಳುವರಿ ಬರುವ ನಿರೀಕ್ಷೆ ರೈತರಿಗಿಲ್ಲ. ಅಳಿದುಳಿದ ಜೋಳದ ಬೆಳೆಯನ್ನು ಕೊಯ್ದು ಜಾನುವಾರುಗಳಿಗೆ ಮೇಯಲು ನೀಡುತ್ತಿದ್ದಾರೆ.

ಮಳೆಯ ಕೊರತೆ: ಜಿಲ್ಲೆಯ ರೈತರು ವರ್ಷದ ಪ್ರಾರಂಭದ ಜನವರಿ ತಿಂಗಳಿನಿಂದಲೇ ಆರಂಭವಾಗುವ ಪೂರ್ವ ಮುಂಗಾರು ಮಳೆ ನಂಬಿಕೊಂಡು ಕೃಷಿ ಮಾಡುತ್ತಾರೆ. ಆದರೆ, ಈ ಬಾರಿ ಮಳೆ ತಡವಾಗಿ ಆರಂಭಗೊಂಡು ಅನ್ನದಾತರನ್ನು ಸಂಕಷ್ಟದ ಸುಳಿಗೆ ಸಿಲುಕಿಸಿತು.

ಏಪ್ರಿಲ್ ತಿಂಗಳಿನಲ್ಲಿ ಜಿಲ್ಲೆಯ ವಾಡಿಕೆ ಮಳೆ ಪ್ರಮಾಣ 58 ಮಿ.ಮೀ. ಆ ತಿಂಗಳಿನಲ್ಲಿ 79.18 ಮಿ.ಮೀ. ಮಳೆ ಸುರಿದಿತ್ತು. ಮೇನಲ್ಲಿ 134 ಮಿ.ಮೀ. ವಾಡಿಕೆ ಮಳೆ ನಿಗದಿಯಾಗಿದ್ದು, 51.58 ಮಿ.ಮೀ. ಮಳೆಯಾಯಿತು. ಈ ತಿಂಗಳಿನ ಎರಡನೇ ವಾರದಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಹದಮಳೆ ಸುರಿದಿಲ್ಲ. ಕೆಲವು ಭಾಗದಲ್ಲಿ ತುಂತುರು ಮಳೆ ಸುರಿದರೂ ರೈತರಿಗೆ ಪ್ರಯೋಜನವಾಗಿಲ್ಲ.

`ಪ್ರಸ್ತುತ ಜಿಲ್ಲೆಯಲ್ಲಿ ಬಿತ್ತನೆಯಾಗಿದ್ದ ಎಲ್ಲ ಫಸಲು ಒಣಗಿ ಹೋಗಿದೆ. ಹೀಗಾಗಿ, ಕೃಷಿ ಮತ್ತು ಕಂದಾಯ ಇಲಾಖೆಯಿಂದ ಬೆಳೆ ನಷ್ಟದ ಬಗ್ಗೆ ವರದಿ ಸಿದ್ಧಪಡಿಸಲಾಗುತ್ತಿದೆ. ಎಷ್ಟು ನಷ್ಟವಾಗಿದೆ? ಎಂಬ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಶೀಘ್ರವೇ, ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು~ ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಂ. ಚಂದ್ರಶೇಖರ್ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.