ADVERTISEMENT

ಲಾಠಿ ಪ್ರಹಾರ: 75 ಮಂದಿ ಗ್ರಾಮಸ್ಥರ ಬಂಧನ

ವಳೆಗೆರೆಹಳ್ಳಿ: ಉಗ್ರರೂಪ ತಾಳಿದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 6:40 IST
Last Updated 2 ಏಪ್ರಿಲ್ 2013, 6:40 IST

ಮದ್ದೂರು: ಸಮೀಪದ ವಳೆಗೆರೆಹಳ್ಳಿಯಲ್ಲಿ ವಿದ್ಯುತ್ ಸಮರ್ಪಕ ಪೂರೈಕೆಗೆ ಆಗ್ರಹಿಸಿ ಗ್ರಾಮಸ್ಥರು ನಡೆಸುತ್ತಿದ್ದ ಪ್ರತಿಭಟನೆ ಉಗ್ರರೂಪ ತಾಳಿದ ಪರಿಣಾಮ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಐವರು ಮಹಿಳೆಯರು ಸೇರಿದಂತೆ 75 ಮಂದಿ ಪ್ರತಿಭಟನಾಕಾರರನ್ನು ಬಂಧಿಸಿರುವ ಘಟನೆ ಸೋಮವಾರ ಸಂಜೆ ನಡೆದಿದೆ.

ಪ್ರತಿಭಟನಾಕಾರರ ಕಲ್ಲು ತೂರಾಟದಿಂದಾಗಿ ಕೊಪ್ಪ, ಭಾರತೀನಗರ ಸೇರಿದಂತೆ ಪಟ್ಟಣದ ಸಂಚಾರ ಠಾಣೆಯ ಮೂರು ಜೀಪುಗಳು ಹಾಗೂ ಮೀಸಲು ತುಕಡಿಗೆ ಸೇರಿದ ಪೊಲೀಸ್ ವ್ಯಾನ್ ಜಖಂಗೊಂಡಿವೆ.

15 ದಿನಗಳ ಹಿಂದೆ ಗೆಜ್ಜಲಗೆರೆ ಗ್ರಾಮಸ್ಥರ ಪ್ರತಿಭಟನೆ ಹಾಗೂ ಒತ್ತಾಯದ ಮೇರೆಗೆ ವಳಗೆರೆಹಳ್ಳಿಯ ವಿದ್ಯುತ್ ಪರಿವರ್ತಕದಿಂದ ಗೆಜ್ಜಲಗೆರೆಗೆ  ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಇದಾದ ಬಳಿಕ ವಳೆಗೆರೆಹಳ್ಳಿ ಗ್ರಾಮಕ್ಕೆ ವಿದ್ಯುತ್ ಕೊರತೆ ಉದ್ಭವಿಸಿತ್ತು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಈ ಎರಡು ದಿನಗಳ ಹಿಂದೆ ಗೆಜ್ಜಲಗೆರೆಗೆ ನೀಡಿದ ವಿದ್ಯುತ್ ಸಂಪರ್ಕದ ತಂತಿಗಳನ್ನು ಕತ್ತರಿಸಿದ್ದರು.

ಈ ಹಿನ್ನೆಲೆಯಲ್ಲಿ ಸೋಮವಾರ ಪೊಲೀಸರ ಭದ್ರತೆ ನಡುವೆ ಸೆಸ್ಕ್ ಅಧಿಕಾರಿಗಳು ಪುನಃ ವಿದ್ಯುತ್ ಸಂಪರ್ಕ ನೀಡಲು ವಳೆಗೆರೆಹಳ್ಳಿಗೆ ಆಗಮಿಸಿದಾಗ ವಿಚಾರ ತಿಳಿದ ನೂರಾರು ಗ್ರಾಮಸ್ಥರು ವಿದ್ಯುತ್ ಪರಿವರ್ತಕದ ಮುಂದೆ ಪ್ರತಿಭಟನೆ ಆರಂಭಿಸಿದರು. ಸೆಸ್ಕ್ ಅಧಿಕಾರಿಗಳು ಎಷ್ಟೇ ಮನವೊಲಿಕೆಗೂ  ಮುಂದಾದರೂ ಗ್ರಾಮಸ್ಥರು ಪ್ರತಿಭಟನೆ ಮುಂದುವರಿಸಿದಾಗ, ಪೊಲೀಸರು ಪ್ರತಿಭಟನಾನಿರತರನ್ನು ಬಂಧಿಸಿ ಮೀಸಲು ತುಕಡಿ ವ್ಯಾನಿನಲ್ಲಿ ತುಂಬಿದರು.

ಅಲ್ಲಿಂದ ವ್ಯಾನುಗಳು ಹೊರಡುತ್ತಿದ್ದಂತೆ ವಿಚಾರ ತಿಳಿದ ಇನ್ನಷ್ಟು ಗ್ರಾಮಸ್ಥರು ಪೊಲೀಸ್ ವ್ಯಾನು ಹಾಗೂ ಜೀಪುಗಳಿಗೆ ಕಲ್ಲು ತೂರಾಟ ನಡೆಸಿದರು. ಅಲ್ಲದೇ ರಸ್ತೆಗೆ ಅಡ್ಡಲಾಗಿ ತೆಂಗಿನಗರಿಗಳನ್ನು ಇಟ್ಟು ಬೆಂಕಿ ಹಚ್ಚಿ ಬಂಧಿತರ ಬಿಡುಗಡೆಗೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟದಿಂದ ಕೊಪ್ಪ ಠಾಣೆ ಜೀಪು ಪೂರ್ಣ ಜಖಂಗೊಂಡಿತು. ಅಲ್ಲದೇ ಈ ಜೀಪಿಗೆ ಬೆಂಕಿ ಹಚ್ಚಲು ಗ್ರಾಮಸ್ಥರು ಯತ್ನಿಸಿದಾಗ ಲಘು ಲಾಠಿ ಪ್ರಹಾರ ನಡೆಸಿದ ಪೊಲೀಸರು ಬೆಂಕಿ ಹಚ್ಚುವ ಯತ್ನವನ್ನು ವಿಫಲಗೊಳಿಸಿದರು.  ನಂತರ ಅಲ್ಲಿಂದ ಸಾವಿರಾರು ಸಂಖ್ಯೆಯಲ್ಲಿ ಪಟ್ಟಣ ಠಾಣೆಗೆ ಮುತ್ತಿಗೆ ಹಾಕಿದ ವಳೆಗೆರೆಹಳ್ಳಿ ಗ್ರಾಮಸ್ಥರು ಬಂಧಿತರ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ ಆರಂಭಿಸಿದರು.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗಭೂಷಣ್ ಬೋರಸೆ, ಹೆಚ್ಚುವರಿ ಎಸ್ಪಿ ರಾಜಣ್ಣ, ಸಿಪಿಐ ಪುಟ್ಟ ಓಬಲರೆಡ್ಡಿ ಭೇಟಿ ನೀಡಿ ಪ್ರತಿಭಟನಾ ನಿರತರನ್ನು ಸಮಾಧಾನಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಸೆಸ್ಕ್ ಅಧೀಕ್ಷಕ ಎಂಜಿನಿಯರ್ ಶಿವಪ್ರಸಾದ್, ಕಾರ್ಯಪಾಲಕ ಎಂಜಿನಿಯರ್‌ಗಳಾದ ಲೋಕೇಶ್, ರಾಮಲಿಂಗಯ್ಯ, ಎಇಇಗಳಾದ ಕಿಶೋರ್, ಮಂಜುನಾಥ್ ಅವರು ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ ವಿದ್ಯುತ್ ಸಮಸ್ಯೆ ಹಾಗೂ ವಿವಾದ ಪರಿಹಾರಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.

ಪೊಲೀಸ್ ಸಿಬ್ಬಂದಿಗೆ ಗಾಯ
ಐವರು ಕಾನ್‌ಸ್ಟೆಬಲ್ ಮತ್ತು ಪಿಎಸ್‌ಐ ಅವರು ಕಲ್ಲು ತೂರಾಟದಲ್ಲಿ ಗಾಯಗೊಂಡಿದ್ದು, ಪಟ್ಟಣ ಆಸ್ಪತ್ರೆಯಲ್ಲಿ  ಚಿಕಿತ್ಸೆ ಕೊಡಿಸಲಾಗಿದೆ.
ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ, ಸೆಸ್ಕ್ ಹಾಗೂ ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿ ದೋಷಾರೋಪಗಳ ಮೇಲೆ ಪಟ್ಟಣ ಪೊಲೀಸರು  75 ಮಂದಿ ಮೇಲೆ ಪ್ರಕರಣ ದಾಖಲಿಸಿದ್ದು, ಇದೇ ರಾತ್ರಿ ಎಲ್ಲರನ್ನು ನ್ಯಾಯಾಲಯದ ಎದುರು ಹಾಜರುಪಡಿಸುವುದಾಗಿ ತಿಳಿಸಿದ್ದಾರೆ.  ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.