ADVERTISEMENT

ವಾಡಿಕೆಗಿಂತ ಹೆಚ್ಚು ಮಳೆ, ಜನರ ಮೊಗದಲ್ಲಿ ಕಳೆ

ರೈತಾಪಿ ವರ್ಗದಲ್ಲೂ ಸಂತಸದ ಹೊನಲು ಮೂಡಿಸಿದ ವರುಣ

ಸೂರ್ಯನಾರಾಯಣ ವಿ
Published 10 ಜೂನ್ 2018, 12:51 IST
Last Updated 10 ಜೂನ್ 2018, 12:51 IST

ಚಾಮರಾಜನಗರ: ಜಿಲ್ಲೆಯಾದ್ಯಂತ ಈ ಬಾರಿ, ವರ್ಷದ ಮೊದಲ ಐದು ತಿಂಗಳಲ್ಲಿ (ಜೂನ್‌ 7ರವರೆಗೆ) ವಾಡಿಕೆಗಿಂತ ಶೇ 36ರಷ್ಟು ಹೆಚ್ಚು ಮಳೆಯಾಗಿದೆ. ಇದು ಜಿಲ್ಲೆಯ ಜನರು ಹಾಗೂ ರೈತಾಪಿ ವರ್ಗದವರ ಸಂತಸಕ್ಕೆ ಕಾರಣವಾಗಿದೆ.

ಪ್ರತಿ ವರ್ಷ ಮೇ ತಿಂಗಳಲ್ಲಿ ಇಲ್ಲಿ ಬಿಸಿಲು ಹೆಚ್ಚಿರುತ್ತದೆ. ತಡೆದುಕೊಳ್ಳಲಾಗದ ಸೆಖೆಯಿಂದ ಜನರು ಹೈರಾಣರಾಗುತ್ತಾರೆ. ಆದರೆ ಈ ವರ್ಷ ಇಲ್ಲಿನ ಜನರಿಗೆ ಅಂತಹ ಅನುಭವವಾಗಿಲ್ಲ. ಮುಂಗಾರು ‍ಪೂರ್ವ ಮಳೆ ಉತ್ತಮವಾಗಿ ಬಿದ್ದಿರುವುದರಿಂದ ವಾತಾವರಣ ತಂಪಾಗಿದೆ. ಮೇ ತಿಂಗಳ ಮೂರನೇ ವಾರದಿಂದ ಮೋಡ ಕವಿದ ವಾತಾವರಣವೇ ಹೆಚ್ಚಿದ್ದರಿಂದ ಬಿಸಿಲಿನ ಪ್ರಖರತೆ ಕಡಿಮೆ ಇತ್ತು.

ಅಧಿಕ ಮಳೆ: ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ ನೀಡಿರುವ ಅಂಕಿ ಅಂಶಗಳ ಪ್ರಕಾರ, ‌2018ರ ಜನವರಿ ಒಂದರಿಂದ ಜೂನ್‌ 7ರ ನಡುವಿನ ಅವಧಿಯಲ್ಲಿ ಜಿಲ್ಲೆಯಾದ್ಯಂತ 309 ಮಿ.ಮೀ ಮಳೆ ಬಿದ್ದಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 230 ಮಿ.ಮೀ ಮಳೆಯಾಗುತ್ತದೆ.

ADVERTISEMENT

ಜೂನ್ 1ರಿಂದ 7ರ ನಡುವೆ ಜಿಲ್ಲೆಯಲ್ಲಿ 34 ಮಿ.ಮೀ ಮಳೆ ಬಿದ್ದಿದೆ. ವಾಡಿಕೆಯ ಪ್ರಮಾಣಕ್ಕೆ (21 ಮಿ.ಮೀ) ಹೋಲಿಸಿದರೆ ಇದು ಶೇ 58ರಷ್ಟು ಹೆಚ್ಚು.

‘ಮೇ ತಿಂಗಳಲ್ಲಿ ಇಲ್ಲಿ ಹೆಚ್ಚು ಬಿಸಿಲು ಮತ್ತು ಸೆಖೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಅಷ್ಟು ಪ್ರಮಾಣದ ಸೆಖೆ ಇರಲಿಲ್ಲ. ಆಗಾಗ ಮಳೆ ಬಂದಿದ್ದರಿಂದ ವಾತಾವರಣ ತಂಪಾಗಿತ್ತು’ ಎಂದು ಹೇಳುತ್ತಾರೆ ಚಾಮರಾಜನಗರ ನಿವಾಸಿ ಮುರಳಿ.

ರೈತರಿಗೆ ಹರ್ಷ: ಉತ್ತಮ ಮಳೆಯಾಗಿರುವುದು ಜಿಲ್ಲೆಯ ರೈತರಲ್ಲೂ ಸಂತಸ ಮೂಡಿಸಿದೆ. ಬಹುತೇಕ ಕೆರೆ ಕಟ್ಟೆಗಳು ತುಂಬಿರುವುದರಿಂದ ಮುಂದೆ ಕೃಷಿಗೆ ತೊಂದರೆಯಾಗದು ಎಂಬ ನಿರೀಕ್ಷೆಯಲ್ಲಿ ಅವರಿದ್ದಾರೆ.

‘ಚೆನ್ನಾಗಿ ಮಳೆಯಾಗಿರುವುದರಿಂದ ರೈತರು ಬಿತ್ತನೆ ಆರಂಭಿಸಿದ್ದಾರೆ. ಮುಂದೇನು ಎಂಬುದನ್ನು ನೋಡಬೇಕು. ಆದರೆ, ಈ ಬಾರಿ ಆರಂಭವಂತೂ ಉತ್ತಮವಾಗಿದೆ‌. ಸಹಜವಾಗಿ ಇದು ಬೆಳೆಗಾರರಲ್ಲಿ ಖುಷಿ ಉಂಟು ಮಾಡಿದೆ’ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾಮಾನ್ಯವಾಗಿ ಜಿಲ್ಲೆಯಲ್ಲಿ ಈ ಅವಧಿಯಲ್ಲಿ ಇಷ್ಟು ಮಳೆಯಾಗುವುದಿಲ್ಲ. ಈ ವರ್ಷ ಮಳೆ ಬಿದ್ದಿರುವುದರಿಂದ ಕೃಷಿಗೆ ಮತ್ತು ಜಾನುವಾರುಗಳ ಮೇವಿಗೆ ನೆರವಾಗಲಿದೆ. ರೈತರ ಸಮಸ್ಯೆಗಳು ಹಲವಾರು ಇವೆ. ಆದರೆ, ಎಲ್ಲಕ್ಕಿಂತ ಮುಖ್ಯವಾಗಿ ನೀರು ಬೇಕು. ಈ ಬಾರಿ ಅದು ನಮಗೆ ಸಿಕ್ಕಿದೆ’ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಪರಿಹಾರ ಕ್ರಮಗಳಿಗೆ ಸನ್ನದ್ಧರಾಗಿರಲು ಸೂಚನೆ

ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಎದುರಾಗುವ ಯಾವುದೇ ಸಮಸ್ಯೆ ನಿವಾರಿಸಿ ಪರಿಹಾರ ಕಾಮಗಾರಿಗಳನ್ನು ತಕ್ಷಣ ಕೈಗೊಳ್ಳಲು ಅಧಿಕಾರಿಗಳು ಸನ್ನದ್ಧರಾಗಿರಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ಅ

ಅತಿವೃಷ್ಟಿ ಸಂಭವಿಸಿದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಹಾರ ಕ್ರಮ ಕೈಗೊಳ್ಳಬೇಕು. ಸಕಾಲದಲ್ಲಿ ಕಾರ್ಯನಿರ್ವಹಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಕರ್ತವ್ಯ ಎಂದು ಸುತ್ತೋಲೆಯಲ್ಲಿ ಅವರು ತಿಳಿಸಿದ್ದಾರೆ.

ರಜೆ ಹಾಕುವಂತಿಲ್ಲ: ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಪೂರ್ವಾನುಮತಿ ಇಲ್ಲದೆ ರಜೆ, ಅನ್ಯ ಕಾರ್ಯಗಳ ಮೇಲೆ ತೆರಳುವಂತಿಲ್ಲ. ಕೇಂದ್ರ ಸ್ಥಾನವನ್ನು ಬಿಡಲು ಅನುಮತಿ ಪಡೆಯದೇ ಇದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಅಧಿಕಾರಿಗಳು ಅನುಮತಿ ಪಡೆದ ನಂತರವೇ ರಜೆಯ ಮೇಲೆ ತೆರಳಬೇಕು. ತಪ್ಪಿದಲ್ಲಿ ಗೈರುಹಾಜರಿಯನ್ನು ವೇತನರಹಿತ ರಜೆ ಎಂದು ಪರಿಗಣಿಸುವುದಲ್ಲದೆ, ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳಿಗೆ, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕಿರಿಯ ಎಂಜಿನಿಯರ್‌ಗಳಿಗೆ ಅನಿವಾರ್ಯವಿದ್ದಲ್ಲಿ ವೈದ್ಯಕೀಯ ರಜೆ ಹೊರತುಪಡಿಸಿ ಬೇರೆ ಯಾವುದೇ ರಜೆಯನ್ನು ಯಾವುದೇ ಕಾರಣಕ್ಕೂ ಸಂಬಂಧಪಟ್ಟ ಕಾರ್ಯನಿರ್ವಾಹಕ ಅಧಿಕಾರಿಗಳು ನೀಡಬಾರದು ಎಂದು ಸುತ್ತೋಲೆಯಲ್ಲಿ ಹೇಳಿದ್ದಾರೆ.

ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗದವರು ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ತಿಳಿವಳಿಕೆ ನೀಡಬೇಕು. ಜಿಲ್ಲಾ, ತಾಲ್ಲೂಕು ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಕರ್ತವ್ಯ ನಿರ್ವಹಿಸಬೇಕು. ಔಷಧಗಳು ದಾಸ್ತಾನು ಇರುವಂತೆ ನೋಡಿಕೊಳ್ಳುವಂತೆಯೂ ಅವರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.