ADVERTISEMENT

ಶವ ಸಂಸ್ಕಾರ ಹಣದಲ್ಲೂ ಲಂಚ!

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 10:00 IST
Last Updated 27 ಫೆಬ್ರುವರಿ 2011, 10:00 IST

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆ.ಶೆಟ್ಟಹಳ್ಳಿ ವೃತ್ತದ ಕಂದಾಯ ನಿರೀಕ್ಷರೊಬ್ಬರು ಶವ ಸಂಸ್ಕಾರ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಸೇರಿದಂತೆ ಸರ್ಕಾರದ ಯೋಜನೆಗಳ ಬಗ್ಗೆ ವರದಿ ನೀಡಲು ಲಂಚಕ್ಕೆ ಪೀಡಿಸುತ್ತಿದ್ದು ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಿದ್ದಾಪುರ, ಕೋಡಿಶೆಟ್ಟಿಪುರ, ಗೌಡಹಳ್ಳಿ ಹಾಗೂ ಗಣಂಗೂರು ಗ್ರಾಮಸ್ಥರು ಗಂಭೀರ ಆರೋಪ ಮಾಡಿದರು.

ಪಹಣಿ ತಿದ್ದುಪಡಿ ಹಾಗೂ ಖಾತಾ ಆಂದೋಲನ ಕುರಿತು ತಹಶೀಲ್ದಾರ್ ಅರುಳ್‌ಕುಮಾರ್ ರೈತರಿಗೆ ಮಾಹಿತಿ ನೀಡುವ ವೇಳೆ ರೈತರು ಕೆ.ಶೆಟ್ಟಹಳ್ಳಿ ವೃತ್ತದ ಕಂದಾಯ ನಿರೀಕ್ಷ ಸಿದ್ದಪ್ಪ ವಿರುದ್ಧ ಸಾಲು ಸಾಲು ದೂರು ನೀಡಿದರು. ಶವ ಸಂಸ್ಕಾರಕ್ಕೆ ಸರ್ಕಾರ ನೀಡುವ ಸಾವಿರ ರೂಪಾಯಿಯಲ್ಲಿ ನೂರು, ಇನ್ನೂರು ರೂಪಾಯಿ ಲಂಚ ಕೇಳುತ್ತಾರೆ.
 
ಸಂಧ್ಯಾ ಸುರಕ್ಷಾ, ವಿಧವಾ ವೇತನ, ಪಹಣಿ ತಿದ್ದುಪಡಿ, ಖಾತೆ ಇತರ ಉದ್ದೇಶಗಳಿಗೆ ರೂ.500ರಿಂದ ರೂ.1000ದ ವರೆಗೆ ಹಣ ಕೇಳುತ್ತಾರೆ. ಮೇಲಧಿಕಾರಿಗಳಿಗೆ ಲಂಚ ಕೊಡಬೇಕು ಎಂದು ಸಬೂಬು ಹೇಳುತ್ತಾರೆ. ಲಂಚ ಕೊಡದಿದ್ದರೆ ವರ್ಷವಾದರೂ ಕೆಲಸ ಮಾಡಿಕೊಡುವುದಿಲ್ಲ. ಸಂಬಂಧಿಸಿದ ಆರ್‌ಐ ವಿರುದ್ಧ ಕ್ರಮ ಜರುಗಿಸಬೇಕು. ಪ್ರಾಮಾಣಿಕರನ್ನು ನೇಮಿಸಬೇಕು ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್, ವಿಜೇಂದ್ರ ಇತರರು ತಹಶೀಲ್ದಾರ್ ಅವರನ್ನು ಒತ್ತಾಯಿಸಿದರು.

ಗ್ರಾ.ಪಂ. ಸದಸ್ಯ ಜಿ.ಎಸ್.ಗೋಪಾಲ್ ಮಾತನಾಡಿ, ಕಂದಾಯ ಸಿಬ್ಬಂದಿ ಲಂಚಾವತಾರ ಮಿತಿ ಮೀರಿದೆ. ಬಡವರ ಕಣ್ಣಲ್ಲಿ ನೀರು ತರಿಸುತ್ತಿದ್ದಾರೆ. ಒಂದು ಕೆಲಸಕ್ಕೆ ಹತ್ತಾರು ಬಾರಿ ಅಲೆಸುತ್ತಿದ್ದಾರೆ. ಲಂಚ ಕೊಡದಿದ್ದರೆ ಕೆಲಸ ಆಗುವುದಿಲ್ಲ ಎಂಬ ಪರಿಸ್ಥಿತಿ ಬಂದೊದಗಿದೆ. ಹಳ್ಳಿ ಜನರ ಪಾಡೇನು? ಎಂದು ಪ್ರಶ್ನಿಸಿದರು. ಗ್ರಾ.ಪಂ. ಅಧ್ಯಕ್ಷರಾದ ಎಸ್.ಎಂ. ಮಲ್ಲೇಶ್, ರಾಜಣ್ಣ ಸಮ್ಮುಖದಲ್ಲಿ ಇಂತಹ ಆರೋಪಗಳು ಕೇಳಿ ಬಂದವು. ಈ ಆರೋಪಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಅರುಳ್‌ಕುಮಾರ್, ಕೆ.ಶೆಟ್ಟಹಳ್ಳಿ ವೃತ್ತದ ಆರ್‌ಐ ವಿರುದ್ಧ ಜನರು ಗಂಭೀರ ಆರೋಪ ಮಾಡಿದ್ದಾರೆ. ಶವ ಸಂಸ್ಕಾರದ ಹಣದಲ್ಲಿ ಲಂಚಕ್ಕೆ ಪೀಡಿಸುವುದು ಸರಿಯಲ್ಲ. ಸಿದ್ದಪ್ಪ ಅವರಿಗೆ ಕಾರಣ ಕೇಳಿ ತಕ್ಷಣ ನೋಟಿಸ್ ನೀಡಲಾಗುವುದು ಎಂದರು.

  ಗೌಡಹಳ್ಳಿ ಪದ್ಮನಾಭ, ಸಿದ್ದಾಪುರ ಅಣ್ಣೇಗೌಡ, ಕುಮಾರ್, ಕೃಷ್ಣೇಗೌಡ ಇತರರು ಕಂದಾಯ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸಬ್ಬನಕುಪ್ಪೆ ಗ್ರಾ.ಪಂ. ಸದಸ್ಯರಾದ ಸತೀಶ್, ಚಿಕ್ಕಣ್ಣ, ತಾ.ಪಂ. ಮಾಜಿ ಸದಸ್ಯ ಕೃಷ್ಣಕುಮಾರ್, ಕರಾದಸಂಸ ಮುಖಂಡ ಕುಬೇರಪ್ಪ, ಗ್ರಾಮಲೆಕ್ಕಿಗರಾದ ರಾಮೇಗೌಡ, ಸತ್ಯನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.