ADVERTISEMENT

ಶಾಲಾ ಆವರಣ ತುಂಬ ಕೋಳಿ ಪುಕ್ಕ!

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 8:40 IST
Last Updated 21 ಫೆಬ್ರುವರಿ 2011, 8:40 IST

ಚಾಮರಾಜನಗರ: ಶಾಲೆ ಹಿಂಭಾಗದ ಆವರಣ ತುಂಬುತ್ತಿರುವ ಕೋಳಿ ಪುಕ್ಕ. ಇತರೇ ಪ್ರಾಣಿಗಳ ಅವಯವ ಕೂಡ ಅಲ್ಲಿ ಉಂಟು. ಜತೆಗೆ, ಮಲ-ಮೂತ್ರ ವಿಸರ್ಜನೆಯ ತಾಣ ಬೇರೆ. ಇದು ಹೆಸರಿಗೆ ಮಾತ್ರ ಜ್ಞಾನದೇಗುಲ. ನಿತ್ಯವೂ ಮಕ್ಕಳು ಕೆಟ್ಟವಾಸನೆಯಲ್ಲೇ ಪಾಠ ಕೇಳದೆ ವಿಧಿಯಿಲ್ಲ! ಇಂಥ ಅವ್ಯವಸ್ಥೆ ನೋಡ ಬೇಕಿದ್ದರೆ ನಗರದ ಕ್ಷೇತ್ರ ಶಿಕ್ಷಣಾ ಧಿಕಾರಿ ಕಚೇರಿ ಮುಂಭಾಗದಿಂದ ಈ ಸರ್ಕಾರಿ ಸಮೂಹ ಶಾಲಾ ಆವರಣಕ್ಕೆ ಭೇಟಿ ನೀಡಬೇಕು. ಸಾರ್ವಜನಿಕ ಆಸ್ತಿಗಳು ಹೇಗೆ ದುರು ಯೋಗವಾಗುತ್ತವೆ ಎಂಬುದಕ್ಕೆ ಈ ಆವರಣ ನೈಜ ಉದಾಹರಣೆಯಾಗಿದೆ.

ತಮಿಳು, ಉರ್ದು ಹಾಗೂ ಕನ್ನಡ ಸರ್ಕಾರಿ ಪ್ರಾಥಮಿಕ ಶಾಲೆಗಳು ಈ ಆವರಣದಲ್ಲಿವೆ. ಅವುಗಳ ಪಕ್ಕದಲ್ಲಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಇದೆ. ಅದಕ್ಕೆ ಅಂಟಿಕೊಂಡಂತೆ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆಯೂ ಇದೆ. ಗ್ರಂಥಾಲಯ, ಸಂಪನ್ಮೂಲ ಶಿಕ್ಷಣ ಕೇಂದ್ರವೂ ಇದೆ. ಶಿಕ್ಷಣ ನೀಡುವ ಸಂಸ್ಥೆಗಳ ಗುಚ್ಛವೇ ಅಲ್ಲಿದೆ. ಆದರೆ, ನಿತ್ಯವೂ ಕಲ್ಮಷ ವಾತಾವರಣದಲ್ಲೇ ವಿದ್ಯಾರ್ಥಿಗಳು ಬೋಧನೆ ಕೇಳಬೇಕಿದೆ.

ಈ ಶಾಲಾ ಆವರಣಕ್ಕೆ ಸುಭದ್ರ ವಾದ ಸುತ್ತುಗೋಡೆ ಕಟ್ಟಲಾಗಿದೆ. ಆದರೆ, ಕೆಲವು ಪಟ್ಟಭದ್ರರು ಶಾಲಾ ಆವರಣವನ್ನು ಕಸದ ತೊಟ್ಟಿ ಮಾಡಿಕೊಂಡಿದ್ದಾರೆ. ಕೋಳಿ ಪುಕ್ಕದಿಂದ ಹಿಡಿದು ಮನೆಯ ಕಲ್ಮಷ ವಸ್ತುಗಳು  ಆವರಣದಲ್ಲಿ ಜಾಗ ಪಡೆಯುತ್ತಿವೆ. ಈ ಆವರಣ ಒಂದರ್ಥದಲ್ಲಿ ನಗರಸಭೆಯ ಕಸದ ತೊಟ್ಟಿಯಾಗಿದೆ.

ಕೆಲವೆಡೆ ಕಾಂಪೌಂಡ್ ಒಡೆದು ಹಾಕಲಾಗಿದೆ. ಕಲ್ಮಷ ಹಾಕುವ ಬಗ್ಗೆ ಶಿಕ್ಷಕರು ಪ್ರಶ್ನಿಸಿದರೆ ಬೆಳಿಗ್ಗೆ ಶಾಲೆಯ ಮೊಗಸಾಲೆಯಲ್ಲಿ ಮಲ- ಮೂತ್ರ ವಿಸರ್ಜನೆ ಮಾಡುವ ವಿಕೃತ ಮನೋವೃತ್ತಿಯ ಪ್ರದರ್ಶನವೂ ನಡೆಯುತ್ತಿದೆ. ಈ ಬಗ್ಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಸಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಗಮನಹರಿಸಿಲ್ಲ.

ಖಾಲಿ ಉಳಿದಿರುವ ಸ್ಥಳದಲ್ಲಿ ಜಾಲಿಮುಳ್ಳಿನ ಗಿಡಗಳು ಬೆಳೆದಿವೆ. ಇದು ಕಿಡಿಗೇಡಿಗಳಿಗೆ ವರದಾನ ವಾಗಿದೆ. ಏಕಾಏಕಿ ಕಲ್ಮಷ ಬಿಸಾಕಿ ಹೋಗುವ ಪ್ರವೃತ್ತಿ ಬೆಳೆಸಿ ಕೊಂಡಿ ದ್ದಾರೆ. ಇದರಿಂದ ಹುಳು- ಹುಪ್ಪಟೆ ಕಾಟವೂ ಹೆಚ್ಚುತ್ತಿದೆ. ಕೆಟ್ಟ ವಾಸನೆ ಯಿಂದಾಗಿ ಮಕ್ಕಳು ಮಧ್ಯಾಹ್ನದ ಬಿಸಿಯೂಟ ಸೇವನೆಗೂ ಹಿಂದೇಟು ಹಾಕುವಂತಾಗಿದೆ.
ಶಾಲಾ ಆವರಣದಲ್ಲಿ ಸಾಕಷ್ಟು ಜಾಗ ಖಾಲಿಯಿದೆ. ಆವರಣ ಸ್ವಚ್ಛಗೊಳಿಸಿ ಗಿಡ ನೆಟ್ಟು ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವ ಪ್ರಯತ್ನ ಮಾಡಬಹುದು. ಆದರೆ, ಅಂಥ ಪ್ರಯತ್ನ ನಡೆದಿಲ್ಲ.ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಬಹಳಷ್ಟು ಕಾರ್ಯಕ್ರಮಗಳು ಈ ಆವರಣದ ಅಕ್ಕಪಕ್ಕದಲ್ಲೇ ನಡೆಯು ತ್ತವೆ. ಆಗ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡು ತ್ತಾರೆ. ಶಾಲೆ ಮುಂಭಾಗವೇ ಪ್ರವಾಸಿ ಮಂದಿರ ಇದೆ. ಅಲ್ಲಿಗೆ ಗಣ್ಯರು ಭೇಟಿ ನೀಡುತ್ತಾರೆ. ಆದರೆ, ಎದುರಿಗಿರುವ ಮಕ್ಕಳ ಸಮಸ್ಯೆ ಕೇಳಲು ಯಾರೊಬ್ಬರಿಗೂ ಸಮಯವಿಲ್ಲ.

‘ನಿತ್ಯವೂ ಗಬ್ಬುವಾಸನೆಯಿಂದ ಶಾಲಾ ಕೊಠಡಿಯಲ್ಲಿ ಕುಳಿತು ಕೊಳ್ಳಲು ಆಗುವುದಿಲ್ಲ. ಇಂಥ ವಾತಾವರಣದಲ್ಲಿ ಬಿಸಿಯೂಟ ಸೇವನೆಗೂ ತೊಂದರೆಯಾಗುತ್ತಿದೆ.ಕೂಡಲೇ, ಆವರಣ ಸ್ವಚ್ಛತೆಗೊಳಿಸಬೇಕು. ಉತ್ತಮ ಪರಿಸರ ನಿರ್ಮಾಣಕ್ಕೆ ಒತ್ತು ನೀಡಬೇಕು. ಶಾಲಾ ವಾತಾವರಣ ಹದಗೆಡಿಸುವ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂಬುದು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.