ADVERTISEMENT

ಶ್ರೀರಾಮನವಮಿಗೆ ಅದ್ದೂರಿ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 6:40 IST
Last Updated 18 ಏಪ್ರಿಲ್ 2013, 6:40 IST

ಯಳಂದೂರು: ಸಮೀಪದ ಸೂರಪುರ ಗ್ರಾಮದಲ್ಲಿ ಪ್ರತಿ ವರ್ಷ ಏ.19ರಂದು ನಡೆಯುವ ಶ್ರೀರಾಮನವಮಿಗೆ ಈ ಬಾರಿಯೂ ಅದ್ದೂರಿ ಸಿದ್ಧತೆ ನಡೆಯುತ್ತಿದೆ.

ಶ್ರೀರಾಮನವಮಿಗಾಗಿ ಪಲ್ಲಕ್ಕಿಯನ್ನು ವಿಶಿಷ್ಟವಾಗಿ ಅಲಂಕರಿಸಲಾಗಿದೆ. ಇದರಲ್ಲಿ ದೇವರ ಪಟಗಳನ್ನು ಇಟ್ಟು ರಾತ್ರಿ ಇಡೀ ಗ್ರಾಮದಲ್ಲಿ ಅದ್ದೂರಿ ಮೆರವಣಿಗೆ ಮಾಡುವುದು ಇಲ್ಲಿನ ವಾಡಿಕೆ. ಇದಕ್ಕೂ ಮುಂಚೆ ಪಕ್ಕದಲ್ಲೇ ಇರುವ ಸುವರ್ಣಾವತಿ ನದಿಯಿಂದ ಕೇಲು ತರುವ ಆಚರಣೆ ಇದ್ದು ಇದಕ್ಕಾಗಿ ಇಡೀ ಗ್ರಾಮದವರು ಮೆರವಣಿಗೆಯಲ್ಲಿ ತೆರಳುತ್ತಾರೆ. ಇಲ್ಲಿ ದೊಡ್ಡದೊಡ್ಡ ಹಂಡೆಗಳಲ್ಲಿ ದಾರಿಯುದ್ದಕ್ಕೂ ಬಣ್ಣಬಣ್ಣದ ನೀರು ಇಟ್ಟು ಮೆರವಣಿಗೆ ಸಾಗುವಾಗ ಪರಸ್ಪರರು ಬಣ್ಣದ ನೀರು ಎರಚಿಕೊಂಡು ನದಿಗೆ ತೆರಳಿ ಕೇಲನ್ನು ತರುವ ಆಚರಣೆ ಜಾರಿಯಲ್ಲಿದೆ.

ಇದನ್ನು ತಂದ ನಂತರ ರಾಮಭಂಟ ಹನುಮನಿಗೆ ಪ್ರಿಯವಾದ ಹಾಗೂ ಬಿಳಿಗಿರಿರಂಗನಬೆಟ್ಟದ ತಪ್ಪಲಲ್ಲಿ ಹೆಚ್ಚು ಪ್ರಸಿದ್ಧಿಯಾದ ಬ್ಯಾಟೆಮನೆ ಸೇವೆ ಮಾಡಲಾಗುತ್ತದೆ. ಇದಕ್ಕಾಗಿ ಕಡ್ಲೆಪುರಿ, ಬೆಲ್ಲ, ಕಜ್ಜಾಯ, ತೆಂಗಿನಕಾಯಿಯಿಂದ ತಯಾರಿಸಿದ ನೈವೇದ್ಯ ಇಟ್ಟು ವಿಶಿಷ್ಟ ಭಂಗಿಯಲ್ಲಿ ಯುವಕರು ಬಹುಪರಾಕ್ ಸೇವೆ ನಡೆಸಿ ಇದನ್ನು ಸೇವಿಸಿ ಮುಂದೆ ಚಲಿಸುವ ಪದ್ಧತಿ ಈಗಲೂ ರೂಢಿಯಲ್ಲಿದೆ. 
ಏ.19ರಂದು ಸಂಜೆ 6ಕ್ಕೆ ಪೂಜಾ ಕೈಂಕರ್ಯ ನಡೆಯಲಿದ್ದು ನಂತರ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.