ADVERTISEMENT

ಸಾಲಮನ್ನಾಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 11:34 IST
Last Updated 19 ಜೂನ್ 2018, 11:34 IST
ಚಾಮರಾಜನಗರದಲ್ಲಿ ರೈತರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು
ಚಾಮರಾಜನಗರದಲ್ಲಿ ರೈತರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು   

ಚಾಮರಾಜನಗರ: ರೈತರ ಸಂಪೂರ್ಣ ಸಾಲ ಮತ್ತು ರೈತ ಮಹಿಳೆಯರ ಸ್ವ–ಸಹಾಯ ಸಂಘದ ಸಾಲಗಳನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಶಾಖೆಯ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ ಸೇರಿದ ಪ್ರತಿಭಟನಾಕಾರರು ಅಲ್ಲಿಂದ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿ ಕೆಲಕಾಲ ಧರಣಿ ಕುಳಿತರು. ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರಿಗೆ ತಮ್ಮ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಸಲ್ಲಿಸಿದರು.

ಸಚಿವರ ಭೇಟಿ: ಮಧ್ಯಾಹ್ನದ ನಂತರ ರೈತರು ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿದರು.

ADVERTISEMENT

ಸರ್ಕಾರ ಸಾಲ ಮನ್ನಾ ಮಾಡುತ್ತದೆ. ಈ ಬಗ್ಗೆ ಯಾರಿಗೂ ಗೊಂದಲ ಬೇಡ ಎಂದು ಸಚಿವರು ಭರವಸೆ ನೀಡಿರುವುದಾಗಿ ರೈತ ಮುಖಂಡರು ತಿಳಿಸಿದ್ದಾರೆ.‌‌

ಸಂಘಟನೆಯ ಮುಖಂಡರಾದ ಮಹೇಶ್‌ ಪ್ರಭು, ಶಿವರಾಮು, ಸಿದ್ದರಾಜು, ಬಸವಣ್ಣ, ಶಾಂತ ಮಲ್ಲಪ್ಪ, ಮಹೇಶ್‌, ಶೈಲೇಂದ್ರ, ಬಸವರಾಜು, ಸಂಪತ್ತು, ಚಿನ್ನಸ್ವಾಮಿ ಸೇರಿದಂತೆ ಹಲವರು ಇದ್ದರು.

ಪ್ರಮುಖ ಒತ್ತಾಯಗಳು

* ಬೆಳೆ ಸಾಲ, ಭೂ ಅಭಿವೃದ್ಧಿ ಮತ್ತು ಕೃಷಿ ಅಭಿವೃದ್ಧಿ ಸಾಲ, ಕೃಷಿಗಾಗಿ ಆರ್.ಟಿ.ಸಿ. ಕೊಟ್ಟು ಪಡೆದಿರುವ ಚಿನ್ನಾಭರಣಗಳ ಸಾಲ, ಹೈನುಗಾರಿಕೆ ಮುಂತಾದ ಪೂರಕ ವೃತ್ತಿಗಳ ಸಾಲ, ಕೃಷಿ ಉಪಕರಣಗಳ ಸಾಲ, ಖಾಸಗಿ ಫೈನಾನ್ಸ್‌ಗಳು ಕೃಷಿಗೆ ನೀಡಿರುವ ಸಾಲಗಳು... ಸಣ್ಣ, ಮಧ್ಯಮ ಮತ್ತು ದೊಡ್ಡ ರೈತ ಎಂದು ತಾರತಮ್ಯ ಮಾಡದೇ ಎಲ್ಲ ರೈತರು ಪಡೆದಿರುವ ಮೇಲ್ಕಂಡ ಎಲ್ಲ ಸಾಲಗಳನ್ನು ಗರಿಷ್ಠ ₹25 ಲಕ್ಷದ ಮಿತಿಗೆ ಒಳಪಡಿಸಿ ಸಂಪೂರ್ಣವಾಗಿ ಮನ್ನಾ ಮಾಡಬೇಕು

* ಗ್ರಾಮಾಂತರ ಪ್ರದೇಶದಲ್ಲಿ ಪಡೆದಿರುವ ಗೃಹ ನಿರ್ಮಾಣ ಸಾಲಗಳು

* ಸಾಲ ಮನ್ನಾ ಯೋಜನೆಗೆ ನೀಡಿರುವ ಅವಧಿಯನ್ನು ದಿನಾಂಕ 31.03.2018ಕ್ಕೆ ನಿಗದಿ ಪಡಿಸಬೇಕು‌ ಮತ್ತು 01.04.2009ರಿಂದ ಹಿಂದಕ್ಕೆ ಪಡೆದಿರುವ ಎಲ್ಲ ಕೃಷಿ ಸಾಲಗಳನ್ನು ಮನ್ನಾ ಮಾಡಬೇಕು

* ಮಹಿಳಾ ಸಂಘಗಳ ಮೂಲಕ ರೈತ ಮಹಿಳೆಯರು ಸಾಲ ಪಡೆದು ಕೃಷಿ ವಿನಿಯೋಗಿಸಿದ್ದು, ಈ ಸಾಲಗಳನ್ನೂ ಸಾಲ ಮನ್ನಾ ಯೋಜನೆಗೆ ಸೇರಿಸಬೇಕು.

* ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯ ಪರಿಹಾರ 2.5 ವರ್ಷವಾದರೂ ಬಂದಿಲ್ಲ. ಶೀಘ್ರವಾಗಿ ಕೊಡಿಸಬೇಕು. ಪರಿಹಾರ ನೀಡಲು ವಿಳಂಬ ಮಾಡಿರುವ ವಿಮಾ ಕಂಪನಿಗಳ ಮೇಲೆ ಕ್ರಮ ಜರುಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.