ADVERTISEMENT

ಸಿಮಾರೂಬದತ್ತ ರೈತ ಗುರುಸ್ವಾಮಿ ಚಿತ್ತ

ಪೆಟ್ರೋಲಿಯಂಗೆ ಪರ್ಯಾಯವಾಗಿ ಜೈವಿಕ ಇಂಧನವಾಗಿ ಬಳಕೆ: ಅನ್ನದಾತರಿಗೆ ಅರಿವಿನ ಕೊರತೆ

ಎನ್.ರವಿ
Published 27 ಏಪ್ರಿಲ್ 2016, 7:33 IST
Last Updated 27 ಏಪ್ರಿಲ್ 2016, 7:33 IST
ಚಾಮರಾಜನಗರದ ಅಮಚವಾಡಿ ಗ್ರಾಮದ ರೈತ ಗುರುಸ್ವಾಮಿ ಬೆಳೆದಿರುವ ಸಿಮಾರೂಬ ಗಿಡಗಳಲ್ಲಿ ಹಣ್ಣಿನ ಗೊಂಚಲು ಕಟ್ಟಿರುವುದು (
ಚಾಮರಾಜನಗರದ ಅಮಚವಾಡಿ ಗ್ರಾಮದ ರೈತ ಗುರುಸ್ವಾಮಿ ಬೆಳೆದಿರುವ ಸಿಮಾರೂಬ ಗಿಡಗಳಲ್ಲಿ ಹಣ್ಣಿನ ಗೊಂಚಲು ಕಟ್ಟಿರುವುದು (   

ಚಾಮರಾಜನಗರ: ಭವಿಷ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ಅಭಾವ ತಲೆದೋರಲಿದೆ. ಹಾಗಾಗಿ, ಇಂಧನವನ್ನು ಮಿತವಾಗಿ ಬಳಸಬೇಕು. ಪೆಟ್ರೋಲಿಯಂ ಇಂಧನಕ್ಕೆ ಪರ್ಯಾಯವಾಗಿ ಜೈವಿಕ ಇಂಧನ ಬಳಸುವುದು ಉತ್ತಮ ಎಂಬ ಮಾತು ಸರ್ವೇಸಾಮಾನ್ಯ.

ಹೊಂಗೆ, ಹಿಪ್ಪೆ, ಬೇವು, ಜಟ್ರೋಪ, ಸಿಮಾರೂಬದ ಬೀಜಗಳನ್ನು ಜೈವಿಕ ಇಂಧನ ತಯಾರಿಕೆಯಲ್ಲಿ ಬಳಸಲಾಗುತ್ತದೆ. ತಾಲ್ಲೂಕಿನ ಅಮಚವಾಡಿ ಗ್ರಾಮದ ರೈತ ಗುರುಸ್ವಾಮಿ ಸಿಮಾರೂಬ ಗಿಡಗಳನ್ನು ಬೆಳೆದಿದ್ದಾರೆ.

8 ವರ್ಷದ ಹಿಂದೆ ತಮ್ಮ 8 ಎಕರೆ ಪ್ರದೇಶದ ಸುತ್ತಲೂ 150 ಗಿಡಗಳನ್ನು ಬೆಂಗಳೂರಿನ ಸುಮಂಗಲಿ ಆಶ್ರಮದಿಂದ ತಂದು ನರ್ಸರಿ ಮಾಡುವ ಉದ್ದೇಶದಿಂದ ನೆಟ್ಟಿದ್ದರು. ಪ್ರಸ್ತುತ ಈ ಗಿಡಗಳು ದೊಡ್ಡದಾಗಿ ಬೆಳೆದು ನಿಂತಿವೆ. ಮರಗಳಲ್ಲಿ ಹಣ್ಣುಗಳ ಗೊಂಚಲು ಮನ ಸೆಳೆಯುತ್ತದೆ.

ಸದ್ಯಕ್ಕೆ ಅರಣ್ಯ ಇಲಾಖೆ ಹಾಗೂ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ ಗುರುಸ್ವಾಮಿ ಅವರ ತೋಟಕ್ಕೆ ಬಂದು ಸಿಮಾರೂಬದ ಬೀಜಗಳನ್ನು ಆಯ್ದುಕೊಂಡು ಹೋಗುತ್ತಾರೆ. ಅವರು ಮಾರಾಟ ಮಾಡುತ್ತಿಲ್ಲ.

ಮಾರುಕಟ್ಟೆಯಲ್ಲಿ ಪ್ರತಿ 1 ಕೆಜಿ ಸಿಮಾರೂಬದ ಬೀಜಗಳಿಗೆ ₹ 15ರಿಂದ 16 ಬೆಲೆ ಇದೆ. ಖಾಸಗಿಯವರಿಗೆ ನೀಡಿದರೆ 1 ಕೆಜಿಗೆ ₹ 18ರಿಂದ 20 ಸಿಗುತ್ತದೆ. ಆದರೆ, ಜೈವಿಕ ಇಂಧನದ ಬಳಕೆ ಬಗ್ಗೆ ಜನರಿಗೆ ಅರಿವು ಇಲ್ಲ. ಸ್ಥಳೀಯವಾಗಿ ಸಿಮಾರೂಬದ ಬೀಜ ಖರೀದಿಸಲು ಯಾರೊಬ್ಬರೂ ಮುಂದೆ ಬರುವುದಿಲ್ಲ ಎಂಬುದು ಅವರ ಕೊರಗು.

ಸಿಮಾರೂಬ ಬೀಜದಲ್ಲಿ ಶೇ 30ರಿಂದ 35ರಷ್ಟು ಎಣ್ಣೆಯ ಅಂಶವಿದೆ. ಸಿಮಾರೂಬವನ್ನು ಒಣ ಭೂಮಿಯಲ್ಲೂ ಬೆಳೆಯಬಹುದು. ಜಿಲ್ಲೆಯಲ್ಲಿ ಈ ಗಿಡಗಳನ್ನು ಬೆಳೆದಿರುವವರ ಸಂಖ್ಯೆ ಅತಿವಿರಳ.

ಸಿಮಾರೂಬ ಗಿಡ ನೆಟ್ಟ 6 ವರ್ಷದಲ್ಲಿ ಕಾಯಿ ಬಿಡುತ್ತದೆ. ಒಂದು ಮರ 40ರಿಂದ 50 ವರ್ಷ ಬಾಳುತ್ತದೆ. ಮರದಿಂದ 5ರಿಂದ 10 ಕೆಜಿ ಬೀಜ ಸಿಗುತ್ತದೆ. 15 ವರ್ಷದ ಮರದಿಂದ 50 ಕೆಜಿವರೆಗೂ ಬೀಜ ಸಿಗುತ್ತದೆ.

ಮರವು ನೇರವಾಗಿ ಬೆಳೆಯದಂತೆ ಎಚ್ಚರವಹಿಸಬೇಕು. ಗಿಡ 6 ಅಡಿ ಎತ್ತರ ಬೆಳೆಯುತ್ತಿದಂತೆ ಕುಡಿಯನ್ನು ಕತ್ತರಿಸಿ ಹಾಕಬೇಕು. ಇದರಿಂದ ಕೊಂಬೆ ಹರಡಲು ಅನುಕೂಲವಾಗಲಿದೆ. ಜತೆಗೆ, ಬೀಜದ ಗೊಂಚಲು ಹೆಚ್ಚು ಬೆಳೆಯುತ್ತದೆ.

ಉತ್ತಮ ಇಳುವರಿ ಸಿಗುತ್ತದೆ. ನೆಲದಲ್ಲಿ ಬಿದ್ದ ಬೀಜಗಳಿಗಿಂತ ಗೊಂಚಲಿನಲ್ಲಿ ಕಿತ್ತು ಬಳಸಬೇಕು. ಇದರಲ್ಲಿ ಎಣ್ಣೆ ಅಂಶ ಹೆಚ್ಚಿರುತ್ತದೆ. ಕುರಿ, ಮೇಕೆ ಹಾಗೂ ದನಗಳು ಸಿಮಾರೂಬದ ಎಲೆ ತಿನ್ನುವುದಿಲ್ಲ. ಹಾಗಾಗಿ, ಈ ಗಿಡವನ್ನು ಜಮೀನಿನ ಬದಿಯಲ್ಲಿ ನೆಡಬಹುದು. ಗೊಂಬೆ ತಯಾರಿಕೆಗೆ ಬಳಕೆ:  ಸಿಮಾರೂಬ ಮರದಿಂದ ಹಲವು ಉಪಯೋಗವಿದೆ. ಇದು ಗಂಧದ ಮರದಷ್ಟೇ ಮೃದುವಾಗಿದೆ.

ಇದನ್ನು ಗೊಂಬೆಗಳ ತಯಾರಿಕೆಗೂ ಬಳಸುತ್ತಾರೆ. ರಾಜ್ಯದಲ್ಲಿ ಗೊಂಬೆಗಳ ತಯಾರಿಕೆಗೆ ಪ್ರಸಿದ್ಧಿ ಹೊಂದಿರುವ ಚೆನ್ನಪಟ್ಟಣದಲ್ಲಿ ಈ ಮರವನ್ನು ಗೊಂಬೆ ತಯಾರಿಕೆಗೆ ಬಳಸಲಾಗುತ್ತದೆ ಎಂದು ಹೇಳಿದರು.

‘ಜೈವಿಕ ಇಂಧನ ಉತ್ಪಾದನೆಗೆ ಹೆಚ್ಚು ಗಮನಹರಿಸುವುದರಿಂದ ಗೊಂಬೆ ತಯಾರಿಕೆಗೆ ಹೆಚ್ಚು ಒತ್ತು ನೀಡುವುದಿಲ್ಲ. ಜೈವಿಕ ಇಂಧನಕ್ಕೆ ಈ ಮರದ ಬೀಜವನ್ನು ಬಳಸಲಾಗುತ್ತದೆ ಎಂಬ ಅರಿವನ್ನು ರೈತರಿಗೆ ಮೂಡಿಸಬೇಕಿದೆ. ಸಿಮಾರೂಬ ಗಿಡ ನೆಟ್ಟು ಅವರು ಆರ್ಥಿಕವಾಗಿ ಸದೃಢರಾಗಲು ಸಾಧ್ಯ. ಈ ಬಗ್ಗೆ ಹೆಚ್ಚಿನ ಪ್ರಚಾರ ಅಗತ್ಯ’ ಎನ್ನುತ್ತಾರೆ ಗುರುಸ್ವಾಮಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.